ಬಾಲಗಂಗಾಧರನಾಥ ಸ್ವಾಮೀಜಿಗೆ ಅವರೇ ಸಾಟಿ: ಧರ್ಮಪಾಲನಾಥ ಸ್ವಾಮೀಜಿ | ಆದಿಚುಂಚನಗಿರಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ೭೮ನೇ ಜಯಂತ್ಯೋತ್ಸವ ಪೂರ್ವಭಾವಿ ಸಭೆ

ಪುತ್ತೂರು: ಸುಧೀರ್ಘ ಇತಿಹಾಸ ಹಾಗೂ ಪರಂಪರೆ ಹೊಂದಿರುವ ನಾಥ ಪರಂಪರೆಯ ೭೨ ಜಗದ್ಗುರುಗಳನ್ನು ಕಂಡಿರುವ ಆದಿಚುಂಚನಗಿರಿ ಧರ್ಮ ಪೀಠಾಧ್ಯಕ್ಷರಾಗಿದ್ದ, ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಸಾಧನೆಗೆ ಅವರೇ ಸಾಟಿ ಎಂದು ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ನುಡಿದರು.
ಡಿಸೆಂಬರ್ ೨೨ರಂದು ನಡೆಯಲಿರುವ ಆದಿಚುಂಚನಗಿರಿ ಮಠದ ಭೈರವೈಕ್ಯ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅವರ ೭೮ನೇ ಜಯಂತ್ಯೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಆಶೀರ್ವಚನ ನೀಡಿದರು.
ಶುಕ್ರವಾರ ಕಡಬ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಜರಗಿದ ಸಭೆಯಲ್ಲಿ ಮಾತನಾಡಿದ ಅವರು, ಬಾಲಗಂಗಾಧರನಾಥ ಸ್ವಾಮೀಜಿ ಅವರಿಗೆ ಪಟ್ಟಾಭಿಷೇಕ ಆಗುವಾಗ ಸಂಸ್ಥೆಯಲ್ಲಿದ್ದ ಮಕ್ಕಳ ಸಂಖ್ಯೆ ಕೇವಲ ೫೪. ಅವರು ಪೀಠಾಧ್ಯಕ್ಷರಾದ ಬಳಿಕ ಈ ಮಠವನ್ನು ಬೃಹತ್ ವಟವೃಕ್ಷವನ್ನಾಗಿ ಬೆಳೆಸಿ, ವಿಶ್ವದ ಭೂಪಟದಲ್ಲಿ ಮಠಕ್ಕೆ ಭದ್ರ ಅಡಿಪಾಯ ಹಾಕಿದರು. ನಾಲ್ಕು ದಶಕಕ್ಕೂ ಕಡಿಮೆ ಅವಧಿಯಲ್ಲಿ ೪೮೦ ಸಂಸ್ಥೆಗಳನ್ನು ತೆರೆದು ಒಂದು ಲಕ್ಷದ ೫೮ ಸಾವಿರ ವಿದ್ಯಾರ್ಥಿಗಳಿಗೆ ವಿದ್ಯೆ ನೀಡಿ ಅವರ ಭವಿಷ್ಯಕ್ಕೆ ರೂಪು ನೀಡಿದ್ದಾರೆ. ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಕ್ಕೆ ಅವರು ಕೊಟ್ಟ ಕೊಡುಗೆ ಅಪಾರ. ಅವರ ಗುಣಗಳನ್ನು ವ್ಯಕ್ತಿತ್ವವನ್ನು ಅಲೆಯಲು ಸಾಧ್ಯವಿಲ್ಲ. ಇಂತಹ ಮಹಾ ಸ್ವಾಮೀಜಿಯವರ ಜಯಂತ್ಯೋತ್ಸವ ಆಚರಿಸುವ ಸೌಭಾಗ್ಯ ನಮ್ಮ ಪಾಲಿಗೆ ಒದಗಿ ಬಂದಿದೆ. ಇದನ್ನು ಯಶಸ್ವಿಗೊಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಸೌಹಾರ್ದತೆ ಪ್ರದರ್ಶಿಸಿ:
ಡಿ. ೨೨ರಂದು ಪುತ್ತೂರಿನಲ್ಲಿ ನಡೆಯುವ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ೭೮ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸುವ ಮೂಲಕ ಸಮಾಜದ ಎಲ್ಲಾ ಸ್ತರದ ಜನ ಒಗ್ಗಟ್ಟು ಸೌಹಾರ್ದತೆಯನ್ನು ಪ್ರದರ್ಶಿಸಬೇಕು. ಬದಲಾವಣೆಯ ಕಾಲಘಟ್ಟದಲ್ಲಿ ಸಮಾಜ ಬೆಳೆದಿದೆ. ಧಾರ್ಮಿಕ, ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ತಮ್ಮ ಅಸ್ತಿತ್ವವನ್ನು ಗಟ್ಟಿ ಮಾಡಿಕೊಂಡು ಬೆಳೆಯಬೇಕು ಎಂದು .ಶ್ರೀ ಧರ್ಮಪಾಲನಾಥ ಸ್ವಾಮೀಜಿ ಹೇಳಿದರು.

ಕ್ರೀಡಾಕೂಟದ ಆಮಂತ್ರಣ ಬಿಡುಗಡೆ:
ಕಡಬ ವಲಯ ಒಕ್ಕಲಿಗ ಗೌಡ ಸೇವಾ ಸಂಘದ ಆಶ್ರಯದಲ್ಲಿ ದಶಂಬರ್ ೧೮ರಂದು ನಡೆಯಲಿರುವ ವಲಯ ಮಟ್ಟದ ವಾರ್ಷಿಕ ಕ್ರೀಡಾಕೂಟದ ಆಮಂತ್ರಣ ಪತ್ರಿಕೆಯನ್ನು ಶ್ರೀ ಧರ್ಮಪಾಲನಾಥ ಸ್ವಾಮೀಜಿ ಇದೇ ಸಂದರ್ಭ ಬಿಡುಗಡೆಗೊಳಿಸಿದರು. ಪುತ್ತೂರು ತಾಲೂಕು ಅಧ್ಯಕ್ಷ ವಿಶ್ವನಾಥ ಗೌಡ ಅವರು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.



































 
 

ಅಧ್ಯಕ್ಷತೆ ವಹಿಸಿದ್ದ ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ನಿಕಟ ಪೂರ್ವಾಧ್ಯಕ್ಷ ತಮ್ಮಯ್ಯ ಗೌಡ ಸುಳ್ಯ ಅವರು ಸ್ವಾಮೀಜಿ ಅವರ ೭೮ನೇ ಜಯಂತ್ಯೋತ್ಸವದ ಯಶಸ್ಸಿಗೆ ಶ್ರಮಿಸುವ ನಿಟ್ಟಿನಲ್ಲಿ ರಚಿಸಲಾದ ಸಮಿತಿಯನ್ನು ಘೋಷಿಸಿದರು.
ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಪ್ರಮುಖರಾದ ಚಂದ್ರಶೇಖರ ಗೌಡ ಕೋಡಿಬೈಲು, ಜನಾರ್ದನ ಗೌಡ ಪಣೆಮಜಲು, ರಾಧಾಕೃಷ್ಣ ಗೌಡ, ವೆಂಕಟ್ರಾಜ್ ಗೌಡ, ಶಿವಪ್ರಸಾದ್ ಪುತ್ತಿಲ, ನೀಲಾವತಿ ಶಿವರಾಮ್, ಗಣೇಶ್ ಕೈಕುರೆ, ಮೇದಪ್ಪ ಗೌಡ ಡೆಪ್ಪುಣಿ ಮತ್ತಿತರರು ಉಪಸ್ಥಿತರಿದ್ದರು.
ಮೋಹನ ಗೌಡ ಕೋಡಿಂಬಾಳ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕಾರ್ಯದರ್ಶಿ ಪ್ರಶಾಂತ್ ಪಂಜೋಡಿ ವಂದಿಸಿದರು. ಒಕ್ಕಲಿಗ ಗೌಡ ಸೆವಾ ಸಂಘದ ಕಾರ್ಯದರ್ಶಿ ಮಂಜುನಾಥ ಗೌಡ ಕೋಲಂತಾಡಿ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top