ಮಂಗಳೂರು ದರೋಡೆ ಕೃತ್ಯ ಆರೋಪಿಗಳ ಬಂಧನಕ್ಕೆ ನೆರವಾದದ್ದು ಹಳೆ ಫಿಯೆಟ್‌ ಕಾರು

ನಾಲ್ಕೇ ದಿನದಲ್ಲಿ ಪ್ರಕರಣ ಭೇದಿಸಲು ನಡೆಸಿದ ತನಿಖೆ ಥ್ರಿಲ್ಲರ್‌ ಸಿನೆಮಾಗಿಂತಲೂ ರೋಚಕ

ಮಂಗಳೂರು: ಉಳ್ಳಾಲ ಸಮೀಪದ ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಖದೀಮರನ್ನು ಮಂಗಳೂರು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ತಮಿಳುನಾಡಿನ ತಿರುವನ್ನೇಲಿಯಲ್ಲಿ ಮುರುಗಂಡಿ ಥೇವರ್‌, ಮನಿವೆಣ್ಣನ್ ಹಾಗೂ ಪ್ರಕಾಶ್​ ಅಲಿಯಾಸ್ ಜೋಶ್ವಾ ಎಂಬವರನ್ನು ಬಂಧಿಸಲಾಗಿದೆ. ಮುರುಗಂಡಿ ಥೇವರ್ ಈ ಪ್ರಕರಣದ ಮುಖ್ಯ ಕಿಂಗ್‌ಪಿನ್ ಎನ್ನಲಾಗಿದೆ.
ಆದರೆ ಈ ದರೋಡೆ ಕೃತ್ಯದಲ್ಲಿ ಇನ್ನೂ ಏಳು ಮಂದಿ ಇದ್ದಾರೆ. ಈ ಪೈಕಿ ಮೂವರು ನೇರವಾಗಿ ದರೋಡೆ ಕೃತ್ಯದಲ್ಲಿ ಭಾಗಿಯಾದವರಾಗಿದ್ದರೆ ಉಳಿದ ನಾಲ್ಕು ಮಂದಿ ದರೋಡೆಗೆ ಸಂಚು ರೂಪಿಸಿದವರು ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ 7 ಮಂದಿಯ ಬಂಧನಕ್ಕೆ ತೀವ್ರ ಶೋಧ ಮುಂದುವರಿದಿದೆ.
ದರೋಡೆ ಕೃತ್ಯವನ್ನು ಸವಾಲಾಗಿ ಸ್ವೀಕರಿಸಿ ಭೇದಿಸಿದ ಪೊಲೀಸರ ಸಾಹಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ರಾಜ್ಯದಲ್ಲಿ ಬೆನ್ನುಬೆನ್ನಿಗೆ ನಡೆದ ದರೋಡೆ ಕೃತ್ಯಗಳು ಸರಕಾರಕ್ಕೆ ಭಾರಿ ಮುಜುಗರವುಂಟು ಮಾಡಿದ್ದವು. ಅದರಲ್ಲೂ ಮಂಗಳೂರಿನ ದರೋಡೆ ಕಳೆದ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಗಳೂರಿನಲ್ಲಿ ಇರುವಾಗಲೇ ನಡೆದಿತ್ತು. ತೀವ್ರ ಇರಿಸುಮುರಿಸು ಅನುಭವಿಸಿದ್ದ ಸಿದ್ದರಾಮಯ್ಯ ಪೊಲೀಸರನ್ನು ತರಾಟೆಗೆ ತೆಗೆದುಕೊಂಡು ಕ್ಷಿಪ್ರವಾಗಿ ಪ್ರಕರಣ ಭೇದಿಸಲು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಹಗಲು ರಾತ್ರಿ ತನಿಖೆ ನಡೆಸಿದ ಪೊಲೀಸರು ನಾಲ್ಕು ದಿನದಲ್ಲಿ ಮೂವರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳು ತಮಿಳುನಾಡು ಮೂಲದವರಾಗಿದ್ದು, ಮುಂಬಯಿ ಮೂಲದ ದರೋಡೆ ಗ್ಯಾಂಗ್​ ಸೇರಿಕೊಂಡಿದ್ದರು. ದರೋಡೆಗೆಂದೇ ಮಂಗಳೂರಿಗೆ ಬಂದಿದ್ದರು. ದರೋಡೆ ಮಾಡಿ ಬಳಿಕ ಮಹಾರಾಷ್ಟ್ರ ಮೂಲದ ಫಿಯೆಟ್ ಕಾರಿನಲ್ಲಿ ಕೇರಳದಿಂದ ತಮಿಳುನಾಡಿಗೆ ಪರಾರಿಯಾಗಿದ್ದರು. ಪೊಲೀಸರು ಮುಂಬಯಿಯಿಂದ ಮಾಹಿತಿ ಕಲೆ ಹಾಕಿ ತಮಿಳುನಾಡಿಗೆ ತೆರಳಿ ಬಂಧಿಸಿದ್ದಾರೆ ಎಂದು
ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.

ರಾಜ್ಯ ಗುಪ್ತಚರ ಇಲಾಖೆ ಈ ಪ್ರಕರಣ ಭೇದಿಸಲು ಸಹಾಯ ಮಾಡಿದ್ದು, ಬಂಧಿತರಿಂದ ಎರಡು ಗೋಣಿ ಚೀಲ, ತಲ್ವಾರ್ ಮತ್ತು ಪಿಸ್ತೂಲ್ ವಶಪಡಿಸಿಕೊಂಡಿದ್ದೇವೆ. ಸ್ಥಳೀಯರು ಈ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಇದೆ. ಸ್ಥಳೀಯರ ಬೆಂಬಲ ಇಲ್ಲದೆ ಈ ಕೃತ್ಯ ಮಾಡಲು ಸಾಧ್ಯವಿಲ್ಲ. ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.































 
 

ಫಿಯೆಟ್‌ ಕಾರು ನೀಡಿದ ಸುಳಿವು

ದರೋಡೆಕೋರರು ಕೃತ್ಯ ಎಸಗಲು ಬಳಸಿದ ಫಿಯೆಟ್‌ ಕಾರು ಪ್ರಕರಣ ಭೇದಿಸಲು ಬಹಳ ನೆರವಾಯಿತು ಎನ್ನಲಾಗಿದೆ. ಮುಂಬಯಿಯಿಂದಲೇ ಈ ಕಾರನ್ನು ತಂದು ಅದಕ್ಕೆ ಕರ್ನಾಟಕದ ನಂಬರ್‌ ಪ್ಲೇಟ್‌ ಹಾಕಿದ್ದರು. ಈ ನಂಬರ್‌ ಬೆಂಗಳೂರಿನ ಒಂದು ಕಾರಿನದ್ದಾಗಿತ್ತು. ಈ ಕಾರು ತಲಪಾಡಿ ಟೋಲ್‌ಗೇಟ್‌ ದಾಟಿ ಹೋದ ಸ್ಪಷ್ಟ ದೃಶ್ಯ ಸಿಸಿಟಿವಿಯಲ್ಲಿ ಸಿಕ್ಕಿತ್ತು. ಇದರ ಆಧಾರದಲ್ಲಿ ಕಾರಿನ ಮೋಡೆಲ್‌ ಆಧರಿಸಿ ತನಿಖೆ ನಡೆಸಿದಾಗ ಅದರ ಮಾಲಕನನ್ನು ಪತ್ತೆಹಚ್ಚಲು ಸಾಧ್ಯವಾಗಿತ್ತು. ಅವರು ಆ ಕಾರನ್ನು ಮಾರಾಟ ಮಾಡಿದ್ದು, ಈ ವ್ಯಕ್ತಿಯಿಂದ ಕಾರನ್ನು ದರೋಡೆಯ ಸೂತ್ರಧಾರ ಮುರುಗಂಡಿ ಥೇವರ್‌ ಖರೀದಿಸಿದ್ದ ಎನ್ನುವ ಮಾಹಿತಿ ಲಭ್ಯವಾಗಿತ್ತು. ಈ ಸುಳಿವು ಪೊಲೀಸರನ್ನು ಮುಂಬಯಿಯ ಧಾರಾವಿ ಸ್ಲಮ್‌ ಏರಿಯಾಕ್ಕೆ ಕರೆದೊಯ್ದಿತ್ತು. ಮುಂಬಯಿ ಪೊಲೀಸರ ನೆರವಿನಿಂದ ಕೊನೆಗೂ ದರೋಡೆಕೋರರನ್ನು ಸೆರೆ ಹಿಡಿಯಲು ಸಾಧ್ಯವಾಯಿತು.

ದರೋಡೆಗೆ ಪಕ್ಕಾ ಪ್ಲಾನ್‌ ಮಾಡಲಾಗಿತ್ತು. ಆದರೆ ಪ್ರತಿ ಅಪರಾಧ ಕೃತ್ಯದಲ್ಲಿ ಏನಾದರೊಂದು ಸುಳಿವ ಅಪರಾಧಿಗಳು ಬಿಟ್ಟು ಹೋಗುತ್ತಾರೆ ಎಂಬ ಅಪರಾಧ ಸಿದ್ಧಾಂತವೇ ದರೋಡೆಕೋರರನ್ನು ಪತ್ತೆಹಚ್ಚಲು ನೆರವಾಯಿತು. ಆರೋಪಿಗಳ ಎಲ್ಲ ಬಿಟ್ಟು ಬಹಳ ಕಡಿಮೆ ಬಳಕೆಯಲ್ಲಿರುವ ಹಳೇ ಫಿಯೆಟ್‌ ಕಾರನ್ನು ಈ ಕೃತ್ಯಕ್ಕೆ ಬಳಸಿದ್ದರು. ಹೀಗಾಗಿ ಈ ಕಾರಿನ ಮೂಲವನ್ನು ಪತ್ತೆಹಚ್ಚಲು ಪೊಲೀಸರಿಗೆ ಹೆಚ್ಚು ಸಮಯ ಹಿಡಿಯಲಿಲ್ಲ. ಕಾರಿನ ಮೂಲ ಸಿಕ್ಕಿದ್ದೇ ಒಂದೊಂದೇ ಲಿಂಕ್‌ ಬಿಚ್ಚುತ್ತಾ ಹೋಯಿತು.

ಜತೆಗೆ ಅಕ್ರಮ ಚಿನ್ನ ಖರೀದಿಸುವ ಮಾರುಕಟ್ಟೆಯಲ್ಲಿ ನಡೆದ ಸಣ್ಣ ಬೆಳವಣಿಗೆಯೂ ದರೋಡೆಕೋರರನ್ನು ಪತ್ತೆಹಚ್ಚಲು ನೆರವಾಯಿತು ಎನ್ನಲಾಗಿದೆ. ಸಾಮಾನ್ಯವಾಗಿ ದೊಡ್ಡ ಮಟ್ಟದ ಚಿನ್ನ ಕಳವು ನಡೆದರೆ ಕೊನೆಗೆ ಅದು ಹೋಗಿ ಸೇರುವುದು ಮುಂಬಯಿಯ ಅಕ್ರಮ ಮಾರುಕಟ್ಟೆಗೆ. ಈ ಹಿನ್ನೆಲೆಯಲ್ಲಿ ಪೊಲೀಸರು ಈ ಮಾರುಕಟ್ಟೆ ಮೇಲೂ ಒಂದು ಕಣ್ಣಿಟ್ಟಿದ್ದರು. ಇಲ್ಲಿ ಸಿಕ್ಕಿದ ಸುಳಿವು ಕೂಡ ನೆರವಾಗಿತ್ತು ಎನ್ನಲಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top