ಪುತ್ತೂರು ರೋಟರಿ ಕ್ಲಬ್‍ ವತಿಯಿಂದ ಕ್ರಿಸ್ಮಸ್, ಹೊಸ ವರ್ಷಾಚರಣೆ | ಕ್ಲಬ್‍ ನ ವಜ್ರಮಹೋತ್ಸವದ ಅಂಗವಾಗಿ ನೂತನ ಲಾಂಛನ ಬಿಡುಗಡೆ

ಪುತ್ತೂರು: ರೋಟರಿ ಪುತ್ತೂರು ತನ್ನ ಸ್ವಾರ್ಥರಹಿತ ಸೇವೆಯೊಂದಿಗೆ ಮತ್ತು ಸದಸ್ಯರ ಏಕತೆಯ ಶಕ್ತಿಯೊಂದಿಗೆ ಸಮಾಜಮುಖಿ ಸೇವೆಯನ್ನು ಮಾಡುತ್ತಾ ವಜ್ರಮಹೋತ್ಸವದ ಹೊಸ್ತಿಲಲ್ಲಿದ್ದು ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ಹೆಮ್ಮೆಯನ್ನು ಗಳಿಸಿದ್ದು, ಪುತ್ತೂರಿನಲ್ಲಿ ಹೆಗ್ಗುರುತು ಸೃಷ್ಟಿಸಿದೆ ಎಂದು ಅಂತರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ಜಿಲ್ಲಾ ಗವರ್ನರ್ ವಿಕ್ರಂ ದತ್ತರವರು ಹೇಳಿದರು.

ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರುನಿಂದ ಜ.19 ರಂದು ಬೊಳ್ಳಾರು ಮಹಾವೀರ ವೆಂಚರ್ಸ್‌ ಹವಾನಿಯಂತ್ರಿತ ಸಭಾಂಗಣದಲ್ಲಿ ಸಂಜೆ ನಡೆದ ಕ್ರಿಸ್ಮಸ್, ಹೊಸ ವರ್ಷಾಚರಣೆ ಹಾಗೂ ಕ್ಲಬ್‌ನ ವಜ್ರಮಹೋತ್ಸವ ವರ್ಷದ ಉದ್ಘಾಟನೆ ಅಂಗವಾಗಿ ವಜ್ರಮಹೋತ್ಸವದ ನೂತನ ಲಾಂಛನ ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪತಿ ರಾವ್ ಸ್ವಾಗತಿಸಿ, ರೋಟರಿ ಪುತ್ತೂರು ಕ್ಲಬ್ ಕಳೆದ 59 ವರ್ಷಗಳಿಂದ ಸಮಾಜಕ್ಕೆ ಅತ್ಯುನ್ನತ ಕೊಡುಗೆಯನ್ನು ನೀಡುತ್ತಾ ಬಂದಿದೆ. ಅದರಲ್ಲೂ ಜನಮಾನಸಕ್ಕೆ ಹತ್ತಿರವಾಗುವಂತಹ ಶಾಶ್ವತ ಕೊಡುಗೆಗಳನ್ನು ನೀಡಿ ಮಾದರಿ ಎನಿಸಿದೆ. ಕಳೆದ ಆರೇಳು ತಿಂಗಳಿನಿಂದ 60ನೇ ಅಧ್ಯಕ್ಷನಾಗಿ ಕ್ಲಬ್ ಮುನ್ನೆಡೆಸುತ್ತಿರುವ ನನಗೆ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸದಸ್ಯರಿಂದ ಒಳ್ಳೆಯ ಸಹಕಾರ ಸಿಕ್ಕಿರುತ್ತದೆ. ಎಲ್ಲರ ಪ್ರೀತಿಯೊಂದಿಗೆ ಸಮಾಜದಲ್ಲಿ ಸೇವೆ ನೀಡುವುದೇ ನಮ್ಮ ಗುರಿಯಾಗಿದೆ ಎಂದರು.































 
 

ರೋಟರಿ ವಲಯ ಐದರ ಅಸಿಸ್ಟೆಂಟ್ ಗವರ್ನರ್ ಡಾ.ಹರ್ಷ ಕುಮಾರ್ ರೈ ಮಾತನಾಡಿ, ವಲಯ ಐದರಲ್ಲಿ ಹನ್ನೊಂದು ಕ್ಲಬ್‌ಗಳಿದ್ದು, ಸಮಾಜಮುಖಿ ಅಭಿವೃದ್ಧಿ ಬಗ್ಗೆ, ಜಿಲ್ಲಾ ಕಾರ್ಯಗಳ ಅನುಷ್ಠಾನದ ಬಗ್ಗೆ, ಜಿಲ್ಲಾ ಕಾರ್ಯಗಳ ಅನುಮೋದನೆ, ಶಾಶ್ವತ ಕೊಡುಗೆಗಳು ಹೀಗೆ ಪ್ರತಿಯೊಂದು ಕಾರ್ಯಗಳಲ್ಲಿ ರೋಟರಿ ಪುತ್ತೂರು ಮುಂಚೂಣಿಯಲ್ಲಿದೆ ಎಂದರು.

ಕಳೆದ 59 ವರ್ಷಗಳಿಂದ ಕ್ಲಬ್ ನ್ನು ಮುನ್ನೆಡೆಸಿದ ಅಧ್ಯಕ್ಷರುಗಳನ್ನು ಗುರುತಿಸಿ ಗೌರವಿಸಲಾಯಿತು. ಸ್ಥಾಪಕ, ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು. ಕ್ಲಬ್‌ನ ಸಮುದಾಯ ಸೇವಾ ಅಭಿವೃದ್ಧಿ ಯೋಜನೆ ಪ್ರಯುಕ್ತ ಕ್ಲಬ್ ಮಾಜಿ ಅಧ್ಯಕ್ಷ, ದರ್ಬೆ ನಯಾ ಚಪ್ಪಲ್ ಬಜಾರ್ ಮಾಲಕ ಎಂ.ಜಿ. ರಫೀಕ್‌ರವರ ಪ್ರಾಯೋಜಕತ್ವದಲ್ಲಿ ಮುಕ್ರಂಪಾಡಿ, ಸಂಜಯನಗರ, ಮರೀಲು, ಬಾಲವನ, ಕಲ್ಲಾರೆ ಅಂಗನವಾಡಿ ಕೇಂದ್ರಗಳ ಪುಟಾಣಿಗಳಿಗೆ ಪಾದರಕ್ಷೆಗಳನ್ನು ಹಾಗೂ ಫಲಾನುಭವಿಗಳಾದ ರೇಷ್ಮೆ ಬಿ.ಕೆ, ಚೈತ್ರಾ ಗೌಡ, ಜಯಶ್ರೀ ಕೆ.ಟಿ, ವಸಂತ ಕುಮಾರಿ, ಶಶಿಕಲ ಟಿ.ರವರಿಗೆ ಹೊಲಿಗೆ ಯಂತ್ರಗಳನ್ನು ಉಚಿತವಾಗಿ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಮಣಿಪಾಲ್ ಹಾಗೂ ರೋಟರಿ ಕ್ಲಬ್ ಪುತ್ತೂರು ಇದರ ಫ್ಲ್ಯಾಗ್‌ಗಳನ್ನು ವಿನಿಮಯ ಮಾಡಲಾಯಿತು. ಕ್ಲಬ್ ಕಾರ್ಯದರ್ಶಿ ದಾಮೋದರ್ ಕೆ.ಎ ಕ್ಲಬ್ ಚಟುವಟಿಕೆಗಳ ವರದಿ ವಾಚಿಸಿದರು. ಸದಸ್ಯ ಡಾ.ಲಿವಿನ್ ಗೊನ್ಸಾಲ್ವಿಸ್ ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ಕ್ಲಬ್ ನಿಕಟಪೂರ್ವ ಅಧ್ಯಕ್ಷ ಜೈರಾಜ್ ಭಂಡಾರಿ, ನಿಯೋಜಿತ ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ಲಬ್ ಮಾಜಿ ಅಧ್ಯಕ್ಷ వి.జి.ವಸಂತ, ಸದಸ್ಯರಾದ ಪರಮೇಶ್ವರ ಗೌಡ., ಸುಜಿತ್ ಡಿ.ರೈ ಸಮುದಾಯ ಸೇವಾ ವಿಭಾಗದ ನಿರ್ದೇಶಕ ರಾಜ್ ಗೋಪಾಲ್ ಬಲ್ಲಾಳ್, ಸಾರ್ಜೆಂಟ್ ಎಟ್ ಆರ್ಮ್ಸ್ ವಾಮನ ಪೈ. ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಪಿಡಿಜಿ ಹಾಗೂ ಡಾ.ಭಾಸ್ಕರ್ ಎಸ್ ವಂದಿಸಿದರು. ಸದಸ್ಯರಾದ ಸುರೇಶ್ ಶೆಟ್ಟಿ, ದತ್ತಾತ್ರೇಯ ರಾವ್ ಕಾರ್ಯಕ್ರಮ ನಿರೂಪಿಸಿದರು.

ಸನ್ಮಾನ..

ಕ್ಲಬ್‌ ನ ವಜ್ರಮಹೋತ್ಸವದ ಸಂಭ್ರಮದ ಅಂಗವಾಗಿ ಕ್ಲಬ್ ಸದಸ್ಯರಿಂದ ಒಟ್ಟುಗೂಡಿಸಿದ 60 ಸಾವಿರ ರೂ. ಮೊತ್ತವನ್ನು ಜೀವನ್ ಆಚಾರ್ಯರವರ ಶೈಕ್ಷಣಿಕ ವೆಚ್ಚಕ್ಕಾಗಿ ಠೇವಣಿ ಇಡಲಾಗಿದ್ದು, ಈ ಠೇವಣಿ ಪತ್ರವನ್ನು ಬಾಲಕ ಜೀವನ್ ಆಚಾರ್ಯರವರಿಗೆ ಈ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top