ಪಕ್ಷಪಾತಿ ಧೋರಣೆ ಅನುಸರಿಸುತ್ತಿರುವ ಸುರ್ಜೆವಾಲಾ ಬೇಡ ಎಂದು ಹೈಕಮಾಂಡ್‌ಗೆ ಮನವಿ
ಬೆಂಗಳೂರು: ಹೈಕಮಾಂಡ್ ಎಷ್ಟೇ ಮದ್ದರೆದರೂ ಕಾಂಗ್ರೆಸ್‌ನ ಬಂಡಾಯ ಶಮನವಾಗುತ್ತಿಲ್ಲ. ಈಗ ಕಾಂಗ್ರೆಸ್ ನಾಯಕರು ಹೈಕಮಾಂಡ್‌ನ ಕರ್ನಾಟಕ ಉಸ್ತುವಾರಿಯಾಗಿರುವ ರಣದೀಪ್ ಸುರ್ಜೆವಾಲಾ ವಿರುದ್ಧವೇ ಬಂಡಾಯ ಸಾರಿದ್ದಾರೆ. ಕೆಲವು ಸಚಿವರು ಸುರ್ಜೆವಾಲಾ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಹಕ್ತಪಡಿಸಿದ್ದು, ಅವರನ್ನು ವಾಪಸು ಕರೆಸಿಕೊಳ್ಳಲು ಆಗ್ರಹಿಸಿದ್ದಾರೆ. ರಾಹುಲ್ ಗಾಂಧಿಗೆ ದೂರು ನೀಡಲು ಚಿಂತನೆ ನಡೆಸಿದ್ದಾರೆ.
ನಮ್ಮ ಹಿನ್ನಡೆಗೆ ಸುರ್ಜೆವಾಲಾ ಕಾರಣರಾಗುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಜತೆ ಚರ್ಚೆ ವೇಳೆ ಕೆಲವು ಮಂದಿ ಸಚಿವರು ಅಳಲುತೋಡಿಕೊಂಡಿದ್ದಾರೆ ಎನ್ನಲಾಗಿದೆ.
ಸುರ್ಜೆವಾಲರನ್ನು ರಾಜ್ಯ ಉಸ್ತುವಾರಿಯಿಂದ ವಾಪಸ್ ಕರೆಸಿಕೊಳ್ಳಿ ಎಂದು ಹೈಕಮಾಂಡ್‌ಗೆ ತಿಳಿಸಿ ಒತ್ತಡ ಹೇರಬೇಕು ಎಂದು ಸಿದ್ದರಾಮಯ್ಯಗೆ ಆಪ್ತ ಸಚಿವರು, ಶಾಸಕರು ಒತ್ತಡ ಹೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಾಸನದಲ್ಲಿ ನಡೆದಿದ್ದ ಸ್ವಾಭಿಮಾನ ಸಮಾವೇಶ ಹೆಸರು ಬದಲಾವಣೆ, ದಲಿತ ಸಚಿವರ ಔತಣಕೂಟಕ್ಕೆ ಬ್ರೇಕ್ ಹಾಕಿರುವುದು, ಬೆಳಗಾವಿಯಲ್ಲೇ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಡಿ.ಕೆ ಸುರೇಶ್ ಜತೆಗೆ ಪ್ರತ್ಯೇಕವಾಗಿ ಸಭೆ ನಡೆಸಿರುವುದು ಸುರ್ಜೆವಾಲಾ ವಿರುದ್ಧ ಸಚಿವರ ಸಿಟ್ಟಿಗೆ ಕಾರಣವಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ನೇರವಾಗಿ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉಸ್ತುವಾರಿಯಾದವರು ಎರಡೂ ಬಣದವರ ಸಮಸ್ಯೆ ಆಲಿಸಬೇಕಿತ್ತು. ರಾಜ್ಯದ ಹಿರಿಯ ನಾಯಕರ ಸಭೆ ನಡೆಸಬೇಕಿತ್ತು. ನೇರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಮನಕ್ಕೆ ಹೋಗಲು ಇವರೇ ಕಾರಣ. ಉಸ್ತುವಾರಿಯಾದವರೂ 2 ಬಣಗಳನ್ನು ಸಮಾನವಾಗಿ ಕಾಣಬೇಕಿತ್ತು. ಸುರ್ಜೇವಾಲ ಪಕ್ಷಪಾತಿ ಧೋರಣೆ ಅನುಸರಿಸಬಾರದು ಎಂದು ಸಿದ್ದರಾಮಯ್ಯ ಆಪ್ತ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಆಂತರಿಕ ಸಂಘರ್ಷ ಹಾಗೂ ಒಳಬೇಗುದಿಯ ಬಿಸಿ ಬೆಳಗಾವಿಯಲ್ಲಿ ಸುರ್ಜೇವಾಲಗೂ ತಟ್ಟಿತ್ತು. ಗಾಂಧಿ ಭಾರತ ಕಾರ್ಯಕ್ರಮದ ಪ್ರಯುಕ್ತ ಬೆಳಗಾವಿಯಲ್ಲಿ ಶುಕ್ರವಾರ ಸಭೆ ನಡೆಸಿದ್ದ ಸಂದರ್ಭದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಬೆಂಬಲಿಗರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಗದ್ದಲ ಸೃಷ್ಟಿಸಿದ್ದರು. ಸುರ್ಜೆವಾಲರನ್ನೇ ಕಾಂಗ್ರೆಸ್ ಕಾರ್ಯಕರ್ತರು, ನಾಯಕರು ತರಾಟೆಗೆ ತೆಗೆದುಕೊಂಡಿದ್ದರು. ಸತೀಶ್ ಜಾರಕಿಹೊಳಿ ನಮ್ಮ ಹೆಮ್ಮೆಯಾಗಿದ್ದು ಅವರ ಸಲುವಾಗಿ ಜೀವ ಕೊಡುತ್ತೇವೆ. ಇಷ್ಟೆಲ್ಲ ಜನರು ಅವರ ಸಲುವಾಗಿ ಬಂದಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ನೇರವಾಗಿ ಸುರ್ಜೆವಾಲಾಗೆ ಹೇಳಿದ್ದರು. ಇದು ಅವರನ್ನು ಮುಜುಗರಕ್ಕೀಡು ಮಾಡಿತ್ತು. ಈ ಎಲ್ಲ ಬೆಳವಣಿಗೆಗಳ ಮಧ್ಯೆ, ಸಿಎಂ ಸಿದ್ದರಾಮಯ್ಯ ಬಳಿಯೂ ಆಪ್ತರು ಅಸಮಾಧಾನ ತೋಡಿಕೊಂಡಿದ್ದಾರೆ.