ಜನರ ಕಾಟ ತಡೆಯಲಾಗದೆ ಕುಂಭಮೇಳದಿಂದಲೇ ದೂರ ಹೋದ ಅದ್ಭುತ ಸುಂದರಿ
ಪ್ರಯಾಗರಾಜ್: ರಾತ್ರಿ ಬೆಳಗಾಗುವುದರೊಳಗೆ ಸಿಗುವ ಜನಪ್ರಿಯತೆ ಹೇಗೆ ಕೆಲವೊಮ್ಮೆ ಮಾರಕವಾಗಿ ಪರಿಣಮಿಸುತ್ತದೆ ಎಂಬುದಕ್ಕೆ ಮಹಾಕುಂಭಮೇಳದ ಈ ಮೊನಾಲಿಸಾ ಸಾಕ್ಷಿ. ಕಳೆದ 2-3 ದಿನಗಳಿಂದ ಈ ಹದಿಹರೆಯದ ಯುವತಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದಾಳೆ. ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್, ಟ್ವಿಟ್ಟರ್ ಸೇರಿದಂತೆ ಯಾವ ಸೋಷಿಯಲ್ ಮೀಡಿಯಾ ತೆರೆದರೂ ಈ ಯುವತಿಯ ವೀಡಿಯೊಗಳು, ಮತ್ತು ಫೋಟೊಗಳು ಕಾಣಿಸಿಕೊಳ್ಳುತ್ತವೆ. ಯಾವ ದೊಟ್ಟ ನಟಿಗೂ ಸಿಗದ ಪ್ರಚಾರ ಎರಡು ದಿನದಲ್ಲಿ ಈಕೆಗೆ ಸಿಕ್ಕಿದೆ. ಆದರೆ ಇದುವೆ ಈಗ ಈಕೆಯ ಪಾಲಿಗೆ ಮುಳುವಾಗಿದೆ.
ಮಹಾಕುಂಭಮೇಳದಲ್ಲಿ ಸೋಷಿಯಲ್ ಮೀಡಿಯಾ ಮೂಲಕ ವೈರಲ್ ಆದ ಸುಂದರಿ ಮೊನಾಲಿಸಾ ಈಗ ಇಡೀ ಭಾರತದ ಕ್ರಶ್ ಆಗಿದ್ದಾಳೆ. ಮಹಾಕುಂಭ ಮೇಳದಲ್ಲಿ ಮಣಿ, ಸರ ಮಾರಾಟ ಮಾಡುತ್ತಿರುವ ಮೊನಾಲಿಸಾ ಕುರಿತು ವ್ಲಾಗರ್‌ಗಳು ಮಾಡಿದ ವೀಡಿಯೊಗಳು ಭಾರಿ ವೈರಲ್ ಆಗಿವೆ. ಮೊನಾಲಿಸಾಳ ಸ್ನಿಗ್ಧ ಮುಗ್ಧ ಸೌಂದರ್ಯ, ಕಣ್ಣಿಗೆ ಜನ ಮಾರುಹೋಗಿದ್ದಾರೆ. ನಿಷ್ಕಲ್ಮಶ ನಗು, ಆಕರ್ಷಣೆ ತುಂಬಿದ ಮುಖ, ಮಿಂಚಿನ ಮಾತು ಜನರನ್ನು ಮೋಡಿ ಮಾಡಿದೆ. ಹೀಗಾಗಿ ಮೊನಾಲಿಸಾ ರಾತ್ರೋರಾತ್ರಿ ನ್ಯಾಷನಲ್ ಕ್ರಶ್ ಆಗಿದ್ದಾಳೆ. ಕೆಲವರು ಈಕೆಯನ್ನು ಐಶ್ವರ್ಯಾ ರೈಗಿಂತಲೂ ಮಿಕ್ಕಿದ ಸುಂದರಿ ಎಂದು ಹೋಲಿಸಿ ಹೊಗಳಿದ್ದಾರೆ. ಆದರೆ ಮೊನಾಲಿಸಾಳ ಸದ್ಯದ ಪರಿಸ್ಥಿತಿ ಮಾತ್ರ ದಯನೀಯವಾಗಿದೆ. ಎಲ್ಲಿಗೂ ಹೋಗುವಂತಿಲ್ಲ, ಮನೆಯಲ್ಲಿ ಇರುವಂತಿಲ್ಲ. ಅತ್ತ ಪೋಷಕರು, ಸಹೋದರಿಯರಿಗೂ ಜನರ ಕಾಟ ತಾಳಲಾಗುತ್ತಿಲ್ಲ. ಈಕೆಯನ್ನು ಜನ ಹುಡುಕಿ ಬರುತ್ತಿದ್ದಾರೆ. ಇವಳಿಂದ ರುದ್ರಾಕ್ಷಿ ಮಣಿಸರ ಖರೀದಿಸದಿದ್ದರೂ ಜೊತೆಗೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು, ವೀಡಿಯೊ ಮಾಡಲು, ಮಾತನಾಡಲು ಮುಗಿಬೀಳುತ್ತಿದ್ದಾರೆ.
ಮಧ್ಯಪ್ರದೇಶದ ಇಂದೋರ್ ಮೂಲದ ಮೊನಾಲಿಸಾ ಭೋಸ್ಲೆ ಮಹಾಕುಂಭ ಮೇಳದ ತ್ರಿವೇಣಿ ಸಂಗಮದ ಬಳಿ ಮಣಿ, ಸರ, ರುದ್ರಾಕ್ಷಿ ಮಾಲೆಗಳನ್ನು ಮಾರಾಟ ಮಾಡುತ್ತಿರುವಾಗ ಬ್ಲಾಗರ್‌ಗಳು ಕಣ್ಣಿಗೆ ಬಿದ್ದು ಫೇಮಸ್ ಆಗಿದ್ದಾಳೆ. ರುದ್ರಾಕ್ಷಿ, ಮಣಿ, ಸರ ಮಾರುವುದು ಈಕೆಯ ಕುಟುಂಬದ ಕಸುಬು. ಎಲ್ಲೇ ಜಾತ್ರೆ, ಉತ್ಸವ ಇದ್ದರೂ ಹೋಗುತ್ತಾರೆ. ಮೈಸೂರಿನ ದಸರಾ ಹಬ್ಬಕ್ಕೂ ಆಗಮಿಸಿ ವ್ಯಾಪಾರ ಮಾಡಿದ್ದಾರೆ. ಆದರೆ ಅಲ್ಲೆಲ್ಲೂ ಸಿಗದ ಪ್ರಚಾರ ಮೊನಾಲಿಸಾಗಳಿಗೆ ಕುಂಭಮೇಳದಲ್ಲಿ ಸಿಕ್ಕಿದೆ. ಇದು ಮೊನಾಲಿಸಾ ಮಾತ್ರವಲ್ಲ, ಇಡೀ ಕುಟುಂಬಕ್ಕೆ ಮುಳುವಾಗಿದೆ. ಮುಖಕ್ಕೆ ಮಾಸ್ಕ್ ಹಾಕಿ, ತಲೆ ಕವರ್ ಮಾಡಿ ಗುರುತು ಸಿಗದಂತೆ ಸಾಗಿದರೂ ಮೊನಾಲಿಸಾಳನ್ನು ಜನರು ಬಿಡುತ್ತಿಲ್ಲ.
ಮೊನಾಲಿಸಾಳಿಗೆ ಸಂಕಷ್ಟ ಎದುರಾಗುತ್ತಿದ್ದಂತೆ ಪೋಷಕರು ಮನೆಯಲ್ಲೇ ಇರುವಂತೆ ಸೂಚಿಸಿದ್ದರು. ಆದರೆ ಸಾವಿರಾರು ಮಂದಿ ಮನೆ ಹುಡುಕಿಕೊಂಡು ತೆರಳುತ್ತಿದ್ದಾರೆ. ಮನೆಗೆ ತೆರಳಿ ಕಾಟ ಕೊಡುತ್ತಿದ್ದಾರೆ. ಇಷ್ಟೇ ಅಲ್ಲ ಮೊನಾಲಿಸಾ ಹಾಗೂ ಅವರ ಕುಟುಂಬಕ್ಕೆ ಸುರಕ್ಷತೆಯ ಸಮಸ್ಯೆಯೂ ಎದುರಾಗಿದೆ. ಮೊನಾಲಿಸಾಗೆ ವ್ಯಾಪಾರ ಮಾಡಲು ಸಾಧ್ಯವಾಗುತ್ತಿಲ್ಲ. ಇಷ್ಟೇ ಅಲ್ಲ ಕೆಲವರು ಎಲ್ಲೆ ಮೀರಿ ನಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಮೊನಾಲಿಸಾ ಪೋಷಕರು ಆಕೆಯನ್ನು ಇಂದೋರ್‌ಗೆ ಕಳುಹಿಸಿದ್ದಾರೆ.