ಪುತ್ತೂರು: ಈಜು, ಕರಾಟೆ, ಅಥ್ಲೆಟಿಕ್, ವೈಟ್ ಲಿಫ್ಟಿಂಗ್ ನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪುತ್ತೂರು ಭಾಗದಿಂದ ಪಾಲ್ಗೊಂಡಿದ್ದಾರೆ. ಆರೋಗ್ಯ ಬಗ್ಗೆ ಕಾಳಜಿ ಇಟ್ಟುಕೊಂಡು ಕ್ರೀಡಾಪಟುಗಳ ಸಾಧನೆಗೆ ಪೂರಕವಾದ ವ್ಯವಸ್ಥೆಗಳನ್ನು ಜೋಡಿಸುವಲ್ಲಿ ಹಿಂದೆ ಬಿದ್ದಿದ್ದೇವೆ. ತಳಮಟ್ಟದಲ್ಲೇ ಕ್ರೀಡೆಗಳ ಅರಿವು ನೀಡುವ ಜತೆಗೆ ಮೂಲಸೌಕರ್ಯ ಲಭಿಸಬೇಕೆಂಬ ನಿಟ್ಟಿನಲ್ಲಿ ಸುವ್ಯವಸ್ಥಿತ ಕ್ರೀಡಾಂಗಣ ನಿರ್ಮಾಣ ಆಗಬೇಕಾಗಿದೆ. 32 ಕೋಟಿ ರೂ. ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಾಣವಾಗಲಿದ್ದು, ಪುತ್ತೂರಿನ ಅಭಿವೃದ್ಧಿಯ ಮೈಲಿಗಲ್ಲಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಮುಂಡೂರು ಸಮೀಪದ ಕೆಮ್ಮಿಂಜೆ ಗ್ರಾಮದ ನೈತ್ತಾಡಿಯಲ್ಲಿನ 15 ಎಕ್ರೆ ಜಾಗವನ್ನು ಹಸ್ತಾಂತರ ಕಾರ್ಯಕ್ರಮದಲ್ಲಿ ಪಹಣಿ ವಿತರಿಸಿ ಮಾತನಾಡಿದರು.
ಹೊರಾಂಗಣ ಮತ್ತು ಒಳಾಂಗಣ ಆಟಗಳ ಕ್ರೀಡಾಂಗಣವನ್ನು ಸಿದ್ದಪಡಿಸಿ, ಮಕ್ಕಳ ಆಸಕ್ತಿಯ ವಿಚಾರಗಳಿಗೆ ಬೇಕಾದ ರೀತಿಯ ಕೋಚ್ ಇಟ್ಟು ತರಬೇತಿ ನೀಡುವ ಕಾರ್ಯವನ್ನು ಮಾಡಲಾಗುವುದು. ಕ್ರೀಡಾಂಗಣದ ಸುತ್ತ ವಾಕಿಂಗ್ ಟ್ಯಾಕ್, ಪಾರ್ಕ್ ನಿರ್ಮಿಸಲಾಗುವುದು. ವ್ಯವಸ್ಥಿತವಾಗಿ ಹಲಸು, ಮಾವು, ನೇರಳೆಹಣ್ಣಿನ ಸೇರಿ ವಿವಿಧ ಜಾತಿಯ ಮರಗಳನ್ನು ಅರಣ್ಯ ಹಾಗೂ ಸಾಮಾಜಿಕ ಅರಣ್ಯ ಇಲಾಖೆಯ ಮೂಲಕ ನೆಡಲಾಗುವುದು. ಕರ್ನಾಟಕ ಸರ್ಕಾರ ೮ಕೋಟಿ ಅನುದಾನ ಬಿಡುಗಡೆಯಾಗಿದ್ದು, ಆವರಣ ಗೋಡೆ, ಜಾಗ ಸಮತಟ್ಟು, ಹಾಗೂ ಚರಂಡಿ ನಿರ್ಮಾಣಕ್ಕೆ ೨ಕೋಟಿಯ ಟೆಂಡರ್, ಉಳಿದ ಮೊತ್ತದಲ್ಲಿ ಸಿಂಥಟಿಕ್ ಟ್ರ್ಯಾಕ್ ಹಾಗೂ ಗ್ಯಾಲರಿ ನಿರ್ಮಾಣ ಹಂತ ಹಂತವಾಗಿ ನಿರ್ಮಾಣವಾಗಲಿದೆ ಎಂದರು.
ಜಾಗದ ತಕರಾರು ಬರಬಾರದೆಂಬ ನಿಟ್ಟಿನಲ್ಲಿ ಸ್ವಂತ ಖರ್ಚಿನಲ್ಲಿ ನ್ಯಾಯಾಲಯದಲ್ಲಿ ಕೆವಿಯೆಟ್ ಹಾಕಿ ಯಾರಿಂದಲೂ ಸಮಸ್ಯೆ ಬಾರದಂತೆ ನೋಡಿಕೊಂಡು ಜಾಗ ಹಸ್ತಾಂತರ ಮಾಡಲಾಗಿದೆ. ಜಾಗ ಇರುವಲ್ಲಿಗೆ ಕೇಂದ್ರದಿಂದ ಖೇಲೋ ಇಂಡಿಯಾ ಮೂಲಕ 25 ಕೋಟಿ ವರೆಗೆ ಅನುದಾನ ನೀಡಲಾಗುತ್ತಿದ್ದು, ೨೨ಕೋಟಿ ಪ್ರಸ್ತಾವನೆಯನ್ನು ಈಗಾಗಲೇ ನೀಡಲಾಗಿದೆ. ಇದರಲ್ಲಿ ೮ಕೋಟಿಯಲ್ಲಿ ೫೦ಮೀ ೨೦ಮೀ ಅಗಲದ ಈಜುಕೊಳ ನಿರ್ಮಾಣ ಮಾಡಲಾಗುವುದು. ಈ ಮೂಲಕ ಎಲ್ಲಾ ಮಕ್ಕಳಿಗೆ ಈಜು ತರಬೇತಿ ನೀಡಲಾಗುವುದು. 365 ದಿನ ಬಳಕೆಗೆ ಯೋಗ್ಯವಾಗಿರುವಂತೆ ಒಳಾಂಗಣ ಕ್ರೀಡಾಂಗಣ ನಿರ್ಮಾಣ ನಡೆಯಲಿದೆ. ಖಾಸಗೀ ಸಹಭಾಗಿತ್ವದ ಮೂಲಕ ಕ್ರೀಡಾಂಗಣದ ನಿರ್ವಹಣೆ ನಡೆಯಲಿದೆ. ಮುಕ್ರಂಪಾಡಿಯಿಂದ ಮುಂಡೂರಿನ ಕ್ರೀಡಾಂಗಣದವರೆಗಿನ ರಸ್ತೆಯನ್ನು ಚತುಷ್ಪಥವಾಗಿ ಪರಿವರ್ತಿಸಲಾಗುವುದು ಎಂದರು.
ಪುತ್ತೂರು ತಹಸೀಲ್ದಾರ ಪುರಂದರ ಹೆಗ್ಡೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪುತ್ತೂರು ಮೇಲ್ವಿಚಾರಕ ಶ್ರೀಕಾಂತ್ ಬಿರಾವು, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಉಮನಾಥ ಶೆಟ್ಟಿ ಪೆರ್ನೆ, ಅಕ್ರಮಸಕ್ರಮ ಸಮಿತಿ ಸದಸ್ಯ ರಾಮಣ್ಣ ಪಿಲಿಂಜ, ನಝೀರ್ ಮಠ ಮತ್ತಿತರರು ಉಪಸ್ಥಿತರಿದ್ದರು.