ಮಹಾಕುಂಭಮೇಳದಲ್ಲಿ ಬೆಂಕಿ ಅವಘಡ : ಉನ್ನತ ತನಿಖೆಗೆ ಆದೇಶ

ಸಿಲಿಂಡರ್‌ಗಳು ಸ್ಫೋಟಿಸಿ ಕನಿಷ್ಠ 25 ಟೆಂಟ್‌ಗಳು ಭಸ್ಮ

ಪ್ರಯಾಗ್‌ರಾಜ್‌: ಮಹಾಕುಂಭಮೇಳ ನಡೆಯುವ ಸ್ಥಳದಲ್ಲಿ ಸಾಧುಗಳಿಗೆ ತಂಗಲು ನಿರ್ಮಿಸಿದ್ದ ಕನಿಷ್ಠ 25 ಟೆಂಟ್‌ಗಳು ನಿನ್ನೆ ಮಧ್ಯಾಹ್ನ ಸಂಭವಿಸಿದ ಭೀಕರ ಬೆಂಕಿ ದುರಂತದಲ್ಲಿ ಭಸ್ಮವಾಗಿವೆ. ಮಹಾಕುಂಭಮೇಳದ ಸೆಕ್ಟರ್ 19ರಲ್ಲಿ 2-3 ಸಿಲಿಂಡರ್‌ಗಳು ಸ್ಫೋಟಗೊಂಡು ಟೆಂಟ್‌ಗಳಿಗೆ ಬೆಂಕಿ ಹತ್ತಿಕೊಂಡಿತ್ತು.

ಅದೃಷ್ಟವಶಾತ್ ಯಾವುದೇ ಸಾವು ಸಂಭವಿಸಿಲ್ಲ. ಟೆಂಟ್​ಗಳು ಮಾತ್ರ ಬೆಂಕಿಗೆ ಆಹುತಿಯಾಗಿವೆ. ಎಲ್ಲರೂ ಸುರಕ್ಷಿತವಾಗಿದ್ದಾರೆ. ಯಾರಿಗೂ ಕೂಡ ಗಾಯಗಳಾಗಿಲ್ಲ. ಪರಿಸ್ಥಿತಿ ಹತೋಟಿಗೆ ತರಲಾಗಿದೆ ಎಂದು ಪ್ರಯಾಗ್​ರಾಜ್​​ ಎಡಿಜಿಪಿ ಭಾನು ಭಾಸ್ಕರ್ ತಿಳಿಸಿದ್ದಾರೆ. ಅಗ್ನಿ ಅವಘಡದ ಕುರಿತು ಸೂಕ್ತ ತನಿಖೆ ನಡೆಸಲಾಗುವುದು. ಆಗಲೇ ಅವಘಡ ಹೇಗೆ ಸಂಭವಿಸಿತು ಎಂಬುದನ್ನು ನಾವು ಹೇಳಲು ಸಾಧ್ಯವಾಗುತ್ತದೆ ಎಂದಿದ್ದಾರೆ. ವಿವೇಕಾನಂದ ಸೇವಾ ಸಮಿತಿಗೆ ಸೇರಿದ 25ಕ್ಕೂ ಹೆಚ್ಚು ಟೆಂಟ್​ಗಳಿಗೆ ಬೆಂಕಿ ಹತ್ತಿಕೊಂಡಿದೆ. ಬೆಂಕಿ ಅವಘಡದಿಂದಾಗಿ ಮಹಾಕುಂಭಮೇಳ ಪ್ರದೇಶದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಟೆಂಟ್​​ನಲ್ಲಿ ಇರುವವರನ್ನು ಅಧಿಕಾರಿಗಳು ದೂರ ಕಳುಹಿಸಿದ್ದಾರೆ.































 
 

ಮಹಾಕುಂಭಮೇಳಕ್ಕೆ ಆಗಮಿಸುವ ಭಕ್ತರು ಉಳಿದುಕೊಳ್ಳಲು ಟೆಂಟ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಟೆಂಟ್‌ನಲ್ಲಿ ಆಹಾರ ಮಾಡಿಕೊಳ್ಳುವುದಕ್ಕೂ ವ್ಯವಸ್ಥೆ ಕಲ್ಪಿಸಲಾಗಿದೆ. ಟೆಂಟ್​ನಲ್ಲಿಟ್ಟಿದ್ದ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿರುವುದಾಗಿ ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಸಿಎಂ ಯೋಗಿ ಆದಿತ್ಯನಾಥ್​ ಭೇಟಿ ನೀಡಿ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ಸಿಎಂ ಆದಿತ್ಯನಾಥ್‌ಗೆ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಘಟನೆಯ ಉನ್ನತ ತನಿಖೆಗೆ ಯೋಗಿ ಆದಿತ್ಯನಾಥ್‌ ಆದೇಶಿಸಿದ್ದು, ನಾಶವಾದ ಟೆಂಟ್‌ನಲ್ಲಿದ್ದವರಿಗೆ ಕೂಡಲೇ ಬದಲಿ ವ್ಯವಸ್ಥೆ ಮಾಡಿಕೊಡಲಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top