ಪಕ್ಕಾ ಪ್ಲಾನ್ ಮಾಡಿ ನಡೆಸಿದ ಪರ್ಫೆಕ್ಟ್ ದರೋಡೆ
ಮಂಗಳೂರು: ಇಡೀ ರಾಜ್ಯದಲ್ಲಿ ಸಂಚಲನಕ್ಕೆ ಕಾರಣವಾಗಿರುವ ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಕೃತ್ಯದ ಹಿಂದೆ ಸ್ಥಳೀಯರ ಕೈವಾಡವಿರುವ ಬಲವಾದ ಶಂಕೆ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದು ಬಹಳ ವ್ಯವಸ್ಥಿತವಾಗಿ ಪ್ಲಾನ್ ರೂಪಿಸಿ ಮಾಡಿದ ದರೋಡೆ. ಸ್ಥಳೀಯ ಎಲ್ಲ ವಿಚಾರಗಳನ್ನು ತಿಳಿದುಕೊಂಡು ಹಾಡಹಗಲೇ ದರೋಡೆ ಮಾಡಲಾಗಿದೆ. ಬ್ಯಾಂಕ್ ಇರುವ ಸ್ಥಳ, ಬ್ಯಾಂಕಿನಲ್ಲಿರುವ ಚಿನ್ನ ಮತ್ತು ನಗದು ಹಣದ ಮಾಹಿತಿ ಮತ್ತು ತಪ್ಪಿಸಿಕೊಳ್ಳುವ ದಾರಿ ತಿಳಿದವರು ಯಾರೋ ದರೋಡೆಗೆ ಸಹಾಯ ಮಾಡಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಆದರೆ ಪೊಲೀಸರು ಅಧಿಕೃತವಾಗಿ ಈ ಬಗ್ಗೆ ಏನೂ ಹೇಳಿಲ್ಲ.
ಸದ್ಯಕ್ಕೆ ಇದು ರಾಜ್ಯದಲ್ಲಿ ನಡೆದಿರುವ ಅತಿದೊಡ್ಡ ಬ್ಯಾಂಕ್ ದರೋಡೆ ಕೃತ್ಯ ಎನ್ನಲಾಗಿದೆ. ಸುಮಾರು 19 ಕೆಜಿ ಚಿನ್ನ ಹಾಗೂ 12 ಲಕ್ಷ ನಗದು ಹಣವನ್ನು ಲೂಟಿ ಮಾಡಲಾಗಿದೆ. ಒಟ್ಟು ಸೇರಿ 12 ಕೋಟಿಯಷ್ಟು ಮೊತ್ತದ ಸೊತ್ತು ದರೋಡೆಯಾಗಿದೆ. ಸರಿಯಾಗಿ 1.10ಕ್ಕೆಬಂದ ದರೋಡೆಕೋರರು 1.16ಕ್ಕೆ ಚಿನ್ನಾಭರಣಗಳನ್ನು ಗೋಣಿಚೀಲಕ್ಕೆ ಹಾಕಿ ಕಾರಿಗೆ ತುಂಬಿ ಪರಾರಿಯಾಗಿದ್ದಾರೆ. ಬರೀ 6 ನಿಮಿಷದಲ್ಲಿ ದರೋಡೆ ಮಾಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಗಳೂರಿಗೆ ಬಂದ ದಿನವೇ ದರೋಡೆ ನಡೆದಿರುವ ಕಾರಣ ಸರಕಾರ ಬಹಳ ಮುಜುಗರಕ್ಕೀಡಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ ತನಿಖೆ ಮಾಡುತ್ತಿದ್ದಾರೆ.
ಕಾಸರಗೋಡಿನಲ್ಲಿ ತನಿಖೆ
ದರೋಡೆಕೋರರು ಸಮೀಪವೇ ಇರುವ ತಲಪಾಡಿ ಟೋಲ್‌ಗೇಟ್ ಮೂಲಕ ಪರಾರಿಯಾಗಿರುವುದು ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ನಿಟ್ಟಿನಲ್ಲಿ ಕಾಸರಗೋಡಿನ ತನಕ ಪೊಲೀಸರು ತನಿಖೆ ವಿಸ್ತರಿಸಿದ್ದಾರೆ. ಆದರೆ ತಲಪಾಡಿ ಟೋಲ್‌ಗೇಟ್ ದಾಟಿ ಕೇರಳ ಪ್ರವೇಶಿಸಿದ ಬಳಿಕ ಮರಳಿ ಕರ್ನಾಟಕಕ್ಕೆ ಬರಲು ಹಲವು ಒಳರಸ್ತೆಗಳಿವೆ. ಮಂಜೇಶ್ವರ, ಹೊಸಂಗಡಿ, ಉಪ್ಪಳ, ಕುಂಬಳೆ, ಕಾಸರಗೋಡು ಇಲ್ಲೆಲ್ಲ ಕರ್ನಾಟಕಕ್ಕೆ ಬರಲು ರಸ್ತೆಗಳಿವೆ. ಹೀಗಾಗಿ ದರೋಡೆಕೋರರು ಕೇರಳ ದಾರಿಯಾಗಿಯೇ ಪಲಾಯನ ಮಾಡಿದ್ದಾರೆ ಎನ್ನುವಂತಿಲ್ಲ. ಯಾವುದಾದರೊಂದು ಮಾರ್ಗದ ಮೂಲಕ ಮರಳಿ ಕರ್ನಾಟಕ ಪ್ರವೇಶಿಸಿರುವ ಸಾಧ್ಯತೆಯೂ ಇದೆ.
ಶುಕ್ರವಾರ ಮಧ್ಯಾಹ್ನ 1 ಗಂಟೆ ವೇಳೆಗೆ ದರೋಡೆ ಕೃತ್ಯ ನಡೆದಿದೆ. ಕೋಟೆಕಾರು ಸಹಕಾರಿ ಬ್ಯಾಂಕ್ ಶಾಖೆ ಮುಸ್ಲಿಮ್ ಬಾಹುಳ್ಯದ ಕೆ.ಸಿ.ರೋಡ್‌ನಲ್ಲಿದ್ದು, ಈ ವೇಳೆಗೆ ಮುಸ್ಲಿಮರೆಲ್ಲ ಅಂಗಡಿ ಮಳಿಗೆ ಮುಚ್ಚಿ ಮಸೀದಿಗೆ ಹೋಗಿರುತ್ತಾರೆ. ಪೇಟೆಯಲ್ಲಿ ಜನ ಸಂಚಾರ ವಿರಳವಾಗಿರುತ್ತದೆ. ಬ್ಯಾಂಕಿಗೆ ಹಗಲು ಹೊತ್ತು ಸೆಕ್ಯುರಿಟಿ ಗಾರ್ಡ್ ಇರುವುದಿಲ್ಲ ಎಂಬಿತ್ಯಾದಿ ಮಾಹಿತಿ ತಿಳಿದವರೇ ದರೋಡೆಗೆ ಪಕ್ಕಾ ಪ್ಲಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಇಷ್ಟೊಂದು ದೊಡ್ಡಮಟ್ಟದ ದರೋಡೆ ಮಾಡಲು ಸ್ಥಳೀಯ ವ್ಯಕ್ತಿಯೋರ್ವನ ಸಹಕಾರ ಇದೆ ಬಲವಾದ ಅನುಮಾನ ಪ್ರಾಥಮಿಕ ತನಿಖೆಯಲ್ಲಿ ವ್ಯಕ್ತವಾಗಿದೆ.
ಈ ಬ್ಯಾಂಕಿನ ಬಗ್ಗೆ ಸಂಪೂರ್ಣ ಮಾಹಿತಿ ಇರುವ ಸ್ಥಳೀಯ ವ್ಯಕ್ತಿಯೇ ಈ ದರೋಡೆಯ ಮಾಸ್ಟರ್ ಮೈಂಡ್ ಆಗಿರಬಹುದು ಎಂದು ಪೊಲೀಸರು ತೀರ್ಮಾನಿಸಿದ್ದಾರೆ. ಇದಕ್ಕೆ ಪೂರಕವೆಂಬಂತೆ ಸಿಸಿ ಕ್ಯಾಮೆರಾ ಡಿವಿಆರ್ ಬದಲಾಯಿಸುವ ದಿನ, ಚಿನ್ನ ಪರಿವೀಕ್ಷಕ ಲಾಕರ್ ಓಪನ್ ಮಾಡುವ ಸಮಯ, ದರೋಡೆ ಮಾಡಲು ನಿಗದಿ ಮಾಡಿದ್ದ ದಿನ ಇತ್ಯಾದಿ ಮಾಹಿತಿಗಳೆಲ್ಲ ಆ ವ್ಯಕ್ತಿಗೆ ತಿಳಿದಿದ್ದವು ಎನ್ನಲಾಗುತ್ತಿದೆ.