ಥೈರಾಯ್ಡ್‌, ಬಿಪಿ, ಶುಗರ್‌ನಿಂದ ಬಳಲುತ್ತಿದ್ದಾರೆ ಶರಣಾದ ನಕ್ಸಲರು

ವೈದ್ಯಕೀಯ ಪರೀಕ್ಷೆ ವೇಳೆ ತೀವ್ರ ಆರೋಗ್ಯ ಸಮಸ್ಯೆಯಿರುವುದು ಪತ್ತೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರು ಇತ್ತೀಚೆಗೆ ಶರನಾಗಿರುವ ಮಲೆನಾಡಿನ ಆರು ನಕ್ಸಲರು ವಿವಿಧ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಆರು ನಕ್ಸಲರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಚಿಕ್ಕಮಗಳೂರು ನಗರದ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ಈ ವೇಳೆ ಅವರು ವೈದ್ಯರ ಬಳಿ ತಮ್ಮ ಅನಾರೋಗ್ಯ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ.

ತನಿಖಾಧಿಕಾರಿ ಕೊಪ್ಪದ ಡಿವೈಎಸ್ಪಿ ಬಾಲಾಜಿ ಸಿಂಗ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತಿನಲ್ಲಿ ನಕ್ಸಲರನ್ನು ಗುರುವಾರ ರಾತ್ರಿಯೇ ಚಿಕ್ಕಮಗಳೂರಿಗೆ ಕರೆತಂದು ರಾಮನಹಳ್ಳಿ ಡಿಎಆರ್ ಘಟಕದಲ್ಲಿ ಇರಿಸಲಾಗಿತ್ತು. ಎಸ್‌ಪಿ ಡಾ.ವಿಕ್ರಮ್ ಅಮಟೆ ಶುಕ್ರವಾರ ಬೆಂಗಳೂರಿಗೆ ತೆರಳಿದ್ದರಿಂದ ಶನಿವಾರ ಅವರನ್ನು ಎಸ್‌ಪಿ ಮುಂದೆ ಹಾಜರುಪಡಿಸಿ ವಿಚಾರಣೆ ನಡೆಸಲಾಯಿತು. ಬಳಿಕ ಆಸ್ಪತ್ರೆಗೆ ಕರೆತಂದು ಆರೋಗ್ಯ ತಪಾಸಣೆಗೆ ಒಳಪಡಿಸಲಾಯಿತು.































 
 

ಮುಂಡಗಾರು ಲತಾ ತನಗೆ ಥೈರಾಯ್ಡ್ ಇರುವ ಸಮಸ್ಯೆ ಬಗ್ಗೆ ವೈದ್ಯರು ಬಳಿ ಹೇಳಿಕೊಂಡಿದ್ದಾಳೆ. ಇನ್ನೊಬ್ಬ ನಕ್ಸಲ್‌ಗೆ ಕೈ ಮೇಲೆ ಗನ್ ಶಾಟ್ ಆಗಿರುವುದು ಪತ್ತೆಯಾಗಿದೆ. ಆರು ಮಂದಿಯಲ್ಲಿ ಬಹುತೇಕರಿಗೆ ಬಿಪಿ, ಶುಗರ್ ಇರುವುದು ಕೂಡ ಪತ್ತೆಯಾಗಿದೆ.

ಮುಂಡಗಾರು ಲತಾ, ಜಯಣ್ಣ, ಸುಂದರಿ, ವನಜಾಕ್ಷಿ ಮೇಲೆ ಚಿಕ್ಕಮಗಳೂರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳಿವೆ. ಮುಂಡಗಾರು ಲತಾ ವಿರುದ್ಧ 33, ವನಜಾಕ್ಷಿ ವಿರುದ್ಧ 15 ಹಾಗೂ ಸುಂದರಿ ಮತ್ತು ಜಯಣ್ಣ ವಿರುದ್ಧ ತಲಾ 3 ಪ್ರಕರಣಗಳಿವೆ. ವಸಂತ್ ಹಾಗೂ ಜಿಶಾ ಮೇಲೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ತನಿಖಾ ಅಧಿಕಾರಿಗಳು ಸ್ಥಳ ಮಹಜರಿಗೆ ಕರೆದುಕೊಂಡು ಹೋಗದಿರುವ ಹಿನ್ನೆಲೆಯಲ್ಲಿ ಆರೂ ಮಂದಿ ಡಿಆರ್ ಪೊಲೀಸ್ ಠಾಣೆಯಲ್ಲಿ ಬಾಕಿಯಾಗಿದ್ದಾರೆ. 14 ದಿನಗಳ ಪೊಲೀಸ್ ಕಸ್ಟಡಿಯಲ್ಲಿರುವ ನಕ್ಸಲರ ವಿರುದ್ಧದ ಪ್ರಕರಣಗಳ ಬಗ್ಗೆ ನಗರದಲ್ಲಿಯೇ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಶೃಂಗೇರಿ, ಜಯಪುರ, ಕೊಪ್ಪ ಠಾಣೆಯಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಜಯಪುರ ಸಮೀಪ ಕಿತ್ತಲೆಗಂಡಿ ಅರಣ್ಯದಲ್ಲಿ ಪೊಲೀಸರು ಪತ್ತೆ ಹಚ್ಚಿದ್ದ ಬಂದೂಕುಗಳ ಬಗ್ಗೆ ಸದ್ಯಕ್ಕೆ ಯಾವುದೇ ವಿಚಾರಣೆ ನಡೆಯುವುದಿಲ್ಲ ಎಂದು ತಿಳಿದುಬಂದಿದೆ. ಎಫ್‌ಎಸ್‌ಎಲ್‌ ವರದಿ ಬಂದ ನಂತರ ಬಂದೂಕುಗಳ ಕುರಿತು ತನಿಖೆ ನಡೆಯುತ್ತದೆ ಎನ್ನಲಾಗುತ್ತಿದೆ. ಬಂದೂಕು, ಮದ್ದುಗುಂಡುಗಳು ಪತ್ತೆಯಾದಾಗ ಅಪರಿಚಿತರ ಬಂದೂಕು ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top