ಸಂಶಯದ ಮೇಲೆ ಬಂಧಿಸಿದ್ದ ವ್ಯಕ್ತಿ ಸ್ಥಳೀಯ ಕಾರ್ಪೆಂಟರ್ ; ನಿಜವಾದ ಆರೋಪಿ ಪಲಾಯನ
ಮುಂಬಯಿ : ಬಾಲಿವುಡ್ ನಟ ಸೈಫ್ ಅಲಿ ಖಾನ್ಗೆ ಚಾಕುವಿನಿಂದ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಶುಕ್ರವಾರ ಬಂಧಿಸಿದ್ದ ವ್ಯಕ್ತಿ ನಿಜವಾದ ಆರೋಪಿಯಲ್ಲ. ವಿಚಾರಣೆ ಬಳಿಕ ತಾವು ಬೇಸ್ತುಬಿದ್ದ ಸಂಗತಿ ಪೊಲೀಸರಿಗೆ ತಿಳಿದುಬಂದಿದ್ದು, ಅವನನ್ನು ಬಿಟ್ಟು ಕಳಿಸಿದ್ದಾರೆ. ಆತ ಸ್ಥಳೀಯವಾಗಿ ಬಡಗಿ ಕೆಲಸ ಮಾಡಿಕೊಂಡಿರುವ ವ್ಯಕ್ತಿ ಎಂದು ವಿಚಾರಣೆಯಿಂದ ತಿಳಿದುಬಂದಿದೆ. ಆತ ಸಿಸಿಟಿವಿಯಲ್ಲಿ
ಕಂಡ ವ್ಯಕ್ತಿಯ ಚಹರೆ ಹೋಲುತ್ತಿದ್ದ ಕಾರಣ ಪೊಲೀಸರು ಸಂಶಯದ ಆಧಾರದಲ್ಲಿ ಬಂಧಿಸಿ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿದ್ದರು.
ಈ ನಡುವೆ ನಿಜವಾದ ಆರೋಪಿಯ ಇನ್ನೂ ಕೆಲವು ಸಿಸಿಟಿವಿ ದೃಶ್ಯದ ತುಣುಕುಗಳು ಪೊಲೀಸರಿಗೆ ಸಿಕ್ಕಿದ್ದು, ಇದರಲ್ಲಿ ಆತ ಉಡುಪು ಬದಲಾಯಿಸಿ ಬಾಂದ್ರಾ ರೈಲು ನಿಲ್ದಾಣದತ್ತ ಹೋಗಿರುವುದು ಕಾಣಿಸಿದೆ. ಈ ಹಿನ್ನೆಲೆಯಲ್ಲಿ ಆರೋಪಿ ರೈಲು ಏರಿ ಪಲಾಯನ ಮಾಡಿರಬಹುದು ಎಂದು ಶಂಕಿಸಲಾಗಿದೆ. ಘಟನೆ ನಡೆದು ಎರಡು ದಿನಗಳು ಕಳೆದರೂ ಆರೋಪಿ ಬಂಧನವಾಗದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಗುರುವಾರ ರಾತ್ರಿ ದುಷ್ಕರ್ಮಿ ನಟ ಸೈಫ್ ಅಲಿ ಖಾನ್ ಮನೆಗೆ ನುಗ್ಗಿ ನಟನ ಮೇಲೆ ಚಾಕುವಿನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಬಳಿ ಅನಾಯಾಸವಾಗಿ ತಪ್ಪಿಸಿಕೊಂಡು ಹೋಗಿದ್ದಾನೆ. ಹಲ್ಲೆ ನಡೆದ ರೀತಿ ಮತ್ತು ಆರೋಪಿಯ ಚಲನವಲನ ಗಮನಿಸಿದರೆ ಇದು ಹಣಕ್ಕಾಗಿ ನಡೆದ ಕೃತ್ಯದಂತೆ ಕಾನಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಬೇರೆ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದಾರೆ. ಗಾಯಗೊಂಡ ನಟ ಸೈಫ್ ಅಲಿ ಖಾನ್ ಪ್ರಾಣಾಪಾಯದಿಂದ ಪಾರಾಗಿ ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಳ್ಳುತ್ತಿದ್ದಾರೆ. ಪೊಲೀಸರು ಅವರ ಪತ್ನಿ ನಟಿ ಕರೀನಾ ಕಪೂರ್ ಅವರ ಹೇಳಿಕೆ ದಾಖಲಿಸಿಕೊಂಡಿದ್ದಾರೆ.