ಇನ್ನೂ ಸಿಕ್ಕಿಲ್ಲ ಸಿಂಗಾರಿ ಬೀಡಿ ಉದ್ಯಮಿಯ ದರೋಡೆ ಆರೋಪಿಗಳ ಸುಳಿವು
ಪೊಲೀಸ್ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಹಿಗ್ಗಾಮುಗ್ಗಾ ತರಾಟೆ
ಮಂಗಳೂರು: ಉಳ್ಳಾಲ ಸಮೀಪದ ಕೆ.ಸಿ.ರೋಡ್‌ನಲ್ಲಿರುವ ಕೋಟೆಕಾರ್ ಸಹಕಾರಿ ಬ್ಯಾಂಕ್‌ನಲ್ಲಿ ನಿನ್ನೆ ಹಾಡಹಗಲೇ ನಡೆದಿರುವ ದರೋಡೆ ಪ್ರಕರಣ ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದೆ. 10 ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣವನ್ನು ದರೋಡೆ ಮಾಡಿರುವ ಡಕಾಯಿತರು ಸುಮಾರು 6 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ಬಿಟ್ಟು ಕೇರಳ ಗಡಿ ಮೂಲಕ ಪರಾರಿಯಾಗಿದ್ದಾರೆ. ಎಷ್ಟು ಚಿನ್ನಾಭರಣ ಕಳವಾಗಿದೆ ಎಂದು ಇನ್ನೂ ಸರಿಯಾಗಿ ಲೆಕ್ಕ ಸಿಕ್ಕಿಲ್ಲ. ಪೊಲೀಸರು ಎರಡು ತಂಡಗಳಾಗಿ ದರೋಡೆಕೋರರ ಪತ್ತೆ ಕಾರ್ಯ ಆರಂಭಿಸಿದ್ದಾರೆ.
ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವೇ ದಿನಗಳ ಅಂತರದಲ್ಲಿ ನಡೆದಿರುವ ಎರಡನೇ ದೊಡ್ಡ ದರೋಡೆ ಕೃತ್ಯ. ಕೆಲ ದಿನಗಳ ಹಿಂದೆಯಷ್ಟೇ ವಿಟ್ಲ ಸಮೀಪದ ಸಿಂಗಾರಿ ಬೀಡಿ ಉದ್ಯಮಿ ಸುಲೈಮಾನ್ ಹಾಜಿಯ ಮನೆಗೆ ಇ.ಡಿ. ಅಧಿಕಾರಿಗಳ ಸೋಗು ಹಾಕಿಕೊಂಡು ಬಂದಿದ್ದ ದರೋಡೆಕೋರರು ಮನೆ ಮಂದಿಯ ಕಣ್ಣಮುಂದೆಯೇ ಐದು ಮೂಟೆ ತುಂಬ ನಗದು ಹಣ ಹೊತ್ತುಕೊಂಡು ಹೋಗಿದ್ದಾರೆ. ಉದ್ಯಮಿ 30 ಲ.ರೂ. ಹಣ ದರೋಡೆಯಾಗಿದೆ ಎಂದು ಹೇಳಿದ್ದರೂ ದರೋಡೆಕೋರರು ಐದು ಮೂಟೆಗಳಲ್ಲಿ ಒಯ್ದಿರುವ ಹಣ ಹಲವು ಕೋಟಿ ಆಗಬಹುದು ಎನ್ನಲಾಗಿದೆ.
ಈ ದರೋಡೆ ಕೃತ್ಯದ ಆರೋಪಿಗಳ ಜಾಡು ಪತ್ತೆಹಚ್ಚಲು ಇನ್ನೂ ಪೊಲೀಸರಿಂದ ಸಾಧ್ಯವಾಗಿಲ್ಲ. ಆರೋಪಿಗಳ ಚಿಕ್ಕ ಸುಳಿವು ಕೂಡ ಸಿಗದೆ ಪೊಲೀಸರು ಪರದಾಡುತ್ತಿದ್ದಾರೆ. ಇದರ ಬೆನ್ನಿಗೆ ಈಗ ಕೆ.ಸಿ.ರೋಡ್‌ನಲ್ಲಿ ಬ್ಯಾಂಕ್ ದರೋಡೆಯಾಗಿರುವುದು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವುದನ್ನು ಸೂಚಿಸುತ್ತದೆ. ದರೋಡೆಕೋರರಿಗೆ, ಅಪರಾಧಿಗಳಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಸಿದ್ದರಾಮಯ್ಯ ಬರುವಾಗಲೇ ದರೋಡೆ
ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರಿಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದಿದ್ದು, ಈ ಸಂದರ್ಭದಲ್ಲಿಯೇ ದರೋಡೆ ಕೃತ್ಯ ನಡೆದಿರುವುದು ಪೊಲೀಸರಿಗೆ ಮತ್ತು ಸರಕಾರಕ್ಕೆ ಇನ್ನಿಲ್ಲದ ಮುಜುಗರವುಂಟು ಮಾಡಿದೆ. ನಿನ್ನೆ ಸಿದ್ದರಾಮಯ್ಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ತಾನಿರುವಾಗಲೇ ದರೋಡೆ ಕೃತ್ಯ ನಡೆದಿರುವುದು ಸಿದ್ದರಾಮಯ್ಯನವರನ್ನು ವಿಪರೀತ ಮುಜುಗರಕ್ಕೀಡುಮಾಡಿದೆ.
ಗೋಣಿಚೀಲ ತುಂಬ ಆಭರಣ ಒಯ್ದ ದರೋಡೆಕೋರರು
ಕೇರಳ ಗಡಿಗೆ ಹತ್ತಿರದಲ್ಲೇ ಇರುವ ತಲಪಾಡಿ ಸಮೀಪದ ಕೆ.ಸಿ.ರೋಡ್‌ನಲ್ಲಿ ನಿನ್ನೆ ಮಧ್ಯಾಹ್ನ 1 ಗಂಟೆ ವೇಳೆಗೆ ದರೋಡೆ ಕೃತ್ಯ ನಡೆದಿದೆ. ಮಧ್ಯಾಹ್ನದ 1 ಗಂಟೆಗೆ ಬ್ಯಾಂಕ್‌ಗೆ ಮಾಸ್ಕ್ ಹಾಗೂ ಟೋಪಿ ಹಾಕಿಕೊಂಡು ಮಾಮೂಲಿ ಜನರಂತೆ ನುಗ್ಗಿದ ಐವರು ಡಕಾಯಿತರು ಎತ್ತಿಕೊಂಡು ಹೋಗಲು ಸಾಧ್ಯವಾಗವಷ್ಟು ಗೋಣಿ ಚೀಲಪೂರ್ತಿ ಚಿನ್ನಾಭರಣ ಎತ್ತಿಕೊಂಡು ಪರಾರಿಯಾಗಿದ್ದರು. ದಷ್ಟಪುಷ್ಟವಾಗಿದ್ದ ಐವರು ಡಕಾಯಿತರು ಕಾರೊಂದರಲ್ಲಿ ಬಂದಿಳಿದು ಬ್ಯಾಂಕ್‌ಗೆ ನುಗ್ಗಿದ್ದರು. ಬ್ಯಾಂಕ್‌ನಲ್ಲಿದ್ದ ಮೂವರು ಮಹಿಳಾ ಸಿಬ್ಬಂದಿ, ಚಿನ್ನಾಭರಣ ಪರಿವೀಕ್ಷಕ, ಸಿಸಿಟಿವಿ ಕ್ಯಾಮೆರಾ ರಿಪೇರಿ ಮಾಡಲು ಬಂದಿದ್ದ ಟೆಕ್ನಿಶಿಯನ್ ಸೇರಿ ಐದು ಜನರಿಗೂ ಪಿಸ್ತೂಲ್, ಚಾಕು, ಮಚ್ಚು ತೋರಿಸಿ ಹಿಂದಿ ಭಾಷೆಯಲ್ಲಿ ನಿಮಗೇನು ಮಾಡಲ್ಲ ಚಿನ್ನಾಭರಣ ದರೋಡೆ ಮಾಡಲು ಬಿಡುವಂತೆ ಹೆದರಿಸಿ ತಮ್ಮ ಕೈಗೆ ಸಿಕ್ಕ ಚಿನ್ನಾಭರಣವನ್ನು, 11 ಲಕ್ಷ ನಗದನ್ನು ದೋಚಿ ಪರಾರಿಯಾಗಿದ್ದಾರೆ.
ಬ್ಯಾಂಕ್ ನೊಳಗೆ ಸುಮಾರು 15 ಕೋಟಿ ಮೌಲ್ಯದ ಚಿನ್ನಾಭರಣಗಳಿದ್ದು, ಡಕಾಯಿತರು ಸುಮಾರು 10 ಕೋಟಿ ಮೌಲ್ಯದ ಚಿನ್ನಾಭರಣವನ್ನು ಕದ್ದೊಯ್ದಿದ್ದಾರೆ. ಎಷ್ಟು ಕಳವಾಗಿದೆ ಅನ್ನೋ ಸರಿಯಾದ ಮಾಹಿತಿ ಇನ್ನೂ ಸಿಕ್ಕಿಲ್ಲ. ಸುಮಾರು 6 ಕೋಟಿಯಷ್ಟು ಮೌಲ್ಯದ ಚಿನ್ನಾಭರಣ ಎತ್ತಿಕೊಂಡು ಹೋಗಲು ಸಾಧ್ಯವಾಗದೆ ಅಥವಾ ಸಮಯ ಸಿಗಲಿಲ್ಲ ಎಂಬ ಕಾರಣಕ್ಕೆ ಬಿಟ್ಟು ಹೋಗಿದ್ದಾರೆ. ಬ್ಯಾಂಕ್ ಒಳಗಿಂದ ಹೊರಬಂದ ಐವರಲ್ಲಿ ಓರ್ವ ಕಾರು ರೆಡಿ ಮಾಡಿದ್ದು, ಬಳಿಕ ಇಬ್ಬರು ಚಿನ್ನಾಭರಣದ ಮೂಟೆಯನ್ನು ಹಿಡಿದುಕೊಂಡು ಕಾರಿನತ್ತ ಬಂದಿದ್ದು ಬಳಿಕ ಮತ್ತಿಬ್ಬರು ಓಡಿ ಬಂದು ಕಾರು ಹತ್ತಿ ಪರಾರಿಯಾಗಿದ್ದಾರೆ. ಈ ವೇಳೆ ಸಿಬ್ಬಂದಿ ಕಿರುಚಾಡಿದ್ದು ಎದುರು ಮನೆಯಲ್ಲಿದ್ದ ಉಷಾ ಎನ್ನುವ ವೃದ್ಧೆ ಡಕಾಯಿತರ ಕರಾಮತ್ತನ್ನು ಕಣ್ಣಾರೆ ನೋಡಿದ್ದಾರೆ. ತನ್ನ ಮಗನಿಗೆ ಕರೆ ಮಾಡಿ ಪೊಲೀಸರಿಗೆ ತಿಳಿಸಲು ಮಾಹಿತಿ ನೀಡಿದ್ದರು.
ದರೋಡೆಕೋರರು ಕೇರಳ ಗಡಿ ತಲಪಾಡಿಯತ್ತ ತೆರಳಿದ್ದಾರೆ. ಕಾರಿಗೆ ಬೆಂಗಳೂರು ಪಾರ್ಕಿಂಗ್ ನಂಬರ್ KM4 AQ-9923 ಫೇಕ್ ನಂಬರ್ ಪ್ಲೇಟ್ ಹಾಕಿದ್ದು, ತಲಪಾಡಿ ಟೋಲ್‌ಗೇಟ್‌ನಲ್ಲಿ ಫಾಸ್ಟ್‌ಟ್ಯಾಗ್ ವರ್ಕ್ ಆಗದೆ 150 ರೂ. ಹಣ ನೀಡಿ ರಶೀದಿ ಪಡೆದಿದ್ದಾರೆ. ಈ ಟೋಲ್‌ಗೇಟ್‌ನ ಸಿ.ಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಪೊಲೀಸರ ಎರಡು ತಂಡ ಕಾಸರಗೋಡು, ಕೇರಳದತ್ತ ತೆರಳಿದೆ.
ದರೋಡೆಕೋರರು 11 ಲಕ್ಷ ಹಣ, ಬ್ಯಾಂಕ್‌ನ ಬಹುಪಾಲು ಚಿನ್ನ ದೋಚಿದ್ದಾರೆ, ಆದ್ರೆ ಗ್ರಾಹಕರು ಆತಂಕ ಪಡಬೇಕಿಲ್ಲ 19 ಕೋಟಿ ರೂ. ವಿಮೆ ಇದೆ ಎಂದು ಕೋಟೆಕಾರ್ ಸಹಕಾರಿ ಬ್ಯಾಂಕ್ ಅಧ್ಯಕ್ಷ ಕೃಷ್ಣ ಶೆಟ್ಟಿ ಹೇಳಿದ್ದಾರೆ. 19 ಕೋಟಿ ರೂ. ವಿಮೆ ಇರುವುದರಿಂದ ಗ್ರಾಹಕರ ಹಣ, ಚಿನ್ನಕ್ಕೆ ಏನೂ ಆಗೋದಿಲ್ಲ.. ಇನ್ಶೂರೆನ್ಸ್ ಕ್ಲೈಮ್ ಆಗುತ್ತೆ. ಇನ್ಶೂರೆನ್ಸ್‌ನವರು ಎಲ್ಲಾ ಸರಿ ಮಾಡೋಣ ಅಂತ ಹೇಳಿ ಹೋಗಿದ್ದಾರೆಂದು ತಿಳಿಸಿದ್ದಾರೆ.