ಪುತ್ತೂರು: ಕಾರ್ಕಳದಲ್ಲಿ ರಾಜಕೀಯ ದುರುದ್ದೇಶದಿಂದ ಯಕ್ಷಗಾನ ಪ್ರದರ್ಶನವನ್ನು ತಡೆಯುವ ಪ್ರಯತ್ನ ನಡೆದಿರುವುದು ಖಂಡನೀಯ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಯಕ್ಷಗಾನ ಕರ್ನಾಟಕದ ಗಂಡುಕಲೆ ಎಂಬುದು ಮಾತ್ರವಲ್ಲದೆ ಆ ಕಲೆಯ ಜೊತೆಗೆ ಕರಾವಳಿಯ ಜನರ ಜೀವನ, ಭಾವನೆಗಳು ಬೆಸೆದುಕೊಂಡಿದೆ. ಕರಾವಳಿ ಜನರಿಗೆ ಯಕ್ಷಗಾನ ಕೇವಲ ಕಲಾ ಪ್ರಾಕಾರವಾಗಿ ನಿಲ್ಲದೆ ಅದನ್ನು ಮೀರಿ ನಮ್ಮ ಸಂಸ್ಕೃತಿಯ ಭಾಗವಾಗಿದೆ. ಯಕ್ಷಗಾನ ಕೇವಲ ಕರಾವಳಿಗೆ ಸೀಮಿತವಾಗಿರದೆ ರಾಜ್ಯ, ದೇಶಗಳ ಗಡಿಯನ್ನು ದಾಟಿ ವಿದೇಶಿಯರನ್ನೂ ತನ್ನೆಡೆಗೆ ಆಕರ್ಷಿಸಿದೆ. ಇಂತಹಾ ಯಕ್ಷಗಾನವನ್ನು ತಡೆಯುವ ಪ್ರಯತ್ನ ನಡೆದಿರುವುದು ಖಂಡನೀಯ.
ಆಯೋಜಕರ ಮೇಲೆ ದಾಖಲಿಸಿರುವ ಕೇಸನ್ನು ಹಿಂಪಡೆಯದಿದ್ದರೆ ಕರಾವಳಿಯ ಎಲ್ಲಾ ಯಕ್ಷಪ್ರೇಮಿಗಳು ಪಕ್ಷಬೇಧ ಮರೆತು ಪ್ರತಿಭಟಿಸಬೇಕಾಗುತ್ತದೆ. ಯಕ್ಷಗಾನಕ್ಕೆ ಮಾಡಿರುವ ಅವಮಾನ ಸಂಪೂರ್ಣ ಕರಾವಳಿ ಜನರ ಭಾವನೆಗೆ ಮಾಡಿರುವ ಅವಮಾನ. ಮೊಕದ್ದಮೆ ದಾಖಲಿಸಲು ಪೊಲೀಸರ ಮೇಲೆ ಒತ್ತಡ ಹೇರಿರುವ ರಾಜಕಾರಣಿಗಳು ಜನರಲ್ಲಿ ಕ್ಷಮೆ ಕೇಳಬೇಕು. ಇಲ್ಲದಿದ್ದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.