ಮುಂಬಯಿ : ಬಾಲಿವುಡ್ ನಟ ಸೈಫ್ ಅಲಿ ಖಾನ್ ಮನೆಗೆ ನುಗ್ಗಿ ಇರಿದಿದ್ದ ಆರೋಪಿಯನ್ನು ಪೊಲೀಸರು ಘಟನೆ ನಡೆದ ಸುಮಾರು 30 ತಾಸುಗಳ ಬಳಿಕ ಬಂಧಿಸಿದ್ದಾರೆ. ಆತನನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಸೈಫ್ ಅಲಿ ಖಾನ್ ಲೀಲಾವತಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಪೊಲೀಸರು ಆರೋಪಿಯನ್ನು ಬಾಂದ್ರಾ ಪೊಲೀಸ್ ಠಾಣೆಗೆ ಕರೆ ತಂದು ವಿಚಾರಣೆ ನಡೆಸುತ್ತಿದ್ದಾರೆ. ದಾಳಿ ಮಾಡಿರುವುದರ ಹಿಂದಿನ ಉದ್ದೇಶ ಏನು? ಆತ ಸೈಫ್ ಮನೆ ತಲುಪಿದ್ದು ಹೇಗೆ? ಈ ದಾಳಿ ಹಿಂದೆ ಬೇರೆ ಯಾರದ್ದಾದರೂ ಕೈವಾಡ ಇದೆಯೇ ಎಂಬ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.
ಗುರುವಾರ ನಸುಕಿನ 2.30 ಸುಮಾರಿಗೆ ದುಷ್ಕರ್ಮಿ ಅಪಾರ್ಟ್ಮೆಂಟ್ಗೆ ನುಗ್ಗಿ ಹಲ್ಲೆ ಮಾಡಿದ್ದ. ಸೈಫ್ ಅಲಿ ಖಾನ್ ಮನೆಯಲ್ಲಿ ಸರಿಯಾದ ಭದ್ರತೆ ಇರಲಿಲ್ಲ ಎನ್ನಲಾಗಿದೆ. ಫ್ಲ್ಯಾಟ್ನ ಹೊರಭಾಗದಲ್ಲಿ ಯಾವುದೇ ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಿಲ್ಲ. ಹೀಗಾಗಿ ಬಿಲ್ಡಿಂಗ್ಗೆ ಯಾರು ಬರುತ್ತಾರೆ ಅಥವಾ ಹೋಗುತ್ತಾರೆ ಎಂದು ಹೇಳಲು ಸಾಧ್ಯ ಇರಲಿಲ್ಲ. ಯಾರು ಬರುತ್ತಾರೆ ಹೋಗುತ್ತಾರೆ ಎಂಬುದನ್ನು ಬರೆದಿಡಲು ಅಲ್ಲಿ ಯಾವುದೇ ರಿಜಿಸ್ಟರ್ ಬುಕ್ ಕೂಡ ಇರಲಿಲ್ಲ ಎನ್ನಲಾಗಿದೆ. ಆರೋಪಿ ಬೆಂಕಿ ಅವಘಢ ಸಂದರ್ಭದಲ್ಲಿ ಪಾರಾಗಲು ನಿರ್ಮಿಸಿರುವ ಮೆಟ್ಟಿಲುಗಳ ಮೂಲಕ 12ನೇ ಮಹಡಿ ತನಕ ಬಂದಿದ್ದಾನೆ ಎನ್ನುವುದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ.