ಮಂಗಳೂರಿನ ಶಾಖಾ ವ್ಯವಸ್ಥಾಪಕಿಯ ಕಾರ್ಯಕ್ಕೆ ಮೆಚ್ಚುಗೆ
ಮಂಗಳೂರು: ಡಿಜಿಟಲ್ ಅರೆಸ್ಟ್ ಆಗಿದ್ದ ವೃದ್ಧೆಯೊಬ್ಬರ ಕೋಟಿಗಟ್ಟಲೆ ಹಣ ಮಂಗಳೂರಿನ ಬ್ಯಾಂಕ್ ಮ್ಯಾನೇಜರ್ ಒಬ್ಬರ ಸಮಯ ಪ್ರಜ್ಞೆಯಿಂದಾಗಿ ಉಳಿದಿದೆ. ಸೈಬರ್ ವಂಚಕರ ಬಲೆಗೆ ಸಿಲುಕಿದ್ದ ವೃದ್ಧೆಯನ್ನು ಎಚ್‌ಡಿಎಫ್‌ಸಿ ಬ್ಯಾಂಕಿನ ಕಂಕನಾಡಿ ಶಾಖಾ ವ್ಯವಸ್ಥಾಪಕರು ಸ್ವಲ್ಪದರಲ್ಲೇ ಬಚಾವ್ ಮಾಡಿದ್ದಾರೆ.
ವೃದ್ಧೆಯನ್ನು ಡಿಜಿಟಲ್ ಅರೆಸ್ಟ್ ಮಾಡಿದ್ದ ಸೈಬರ್ ಖದೀಮರು ನಿಮ್ಮ ಡೆಬಿಟ್ ಕಾರ್ಡ್ ಮೂಲಕ ಅಕ್ರಮವಾಗಿ ಹಣ ವರ್ಗಾವಣೆಯಾಗಿದೆ ಎಂದು ಬೆದರಿಸಿದ್ದರು. ಇದನ್ನು ನಂಬಿದ ವೃದ್ಧೆ ಬ್ಯಾಂಕ್‌ಗೆ ಧಾವಿಸಿ ಠೇವಣಿ ಇರಿಸಿದ್ದ ದೊಡ್ಡ ಮೊತ್ತದ ಹಣವನ್ನು ಕೂಡಲೇ ಮರಳಿಸುವಂತೆ ಬ್ಯಾಂಕ್‌ನವರಲ್ಲಿ ವಿನಂತಿಸಿದ್ದರು.
ವೃದ್ಧೆಯ ಗಡಿಬಿಡಿ, ಆತಂಕವನ್ನು ಗಮನಿಸಿದ ಬ್ಯಾಂಕಿನವರಿಗೆ ಏನೋ ಎಡವಟ್ಟು ಆಗಿರುವ ಅನುಮಾನ ಮೂಡಿದೆ. ಮ್ಯಾನೇಜರ್ ಅವರನ್ನು ಒಳಗೆ ಕರೆದು ಆತ್ಮೀಯವಾಗಿ ಮಾತನಾಡಿ ಎಲ್ಲವನ್ನೂ ತಿಳಿದುಕೊಂಡಿದ್ದಾರೆ. ಕೊನೆಗೆ ಇದು ವಂಚಕರ ಮಸಲತ್ತು ಎಂದು ವೃದ್ಧೆಗೆ ಮನವರಿಕೆ ಮಾಡಿಕೊಟ್ಟು ಅವರ ಹಣ ಟ್ರಾನ್ಸಫರ್ ಮಾಡುವುದನ್ನು ತಡೆದಿದ್ದಾರೆ.
ಬ್ಯಾಂಕಿನಲ್ಲಿ ವೃದ್ಧೆಯ 1.35 ಕೋಟಿ ರೂ ಠೇವಣಿ ಇತ್ತು. ಇಷ್ಟೂ ಹಣ ಕೂಡಲೇ ಬೇಕೆಂದು ವೃದ್ಧೆ ಹೇಳಿದಾಗಲೇ ಬ್ಯಾಂಕಿನವರಿಗೆ ಅನುಮಾನ ಬಂದಿತ್ತು. ಆಕೆ ಬಹಳ ಆತಂಕದಲ್ಲಿರುವುದು ಹಾಗೂ ಪದೇಪದೆ ಯಾರೊಂದಿಗೋ ಫೋನಿನಲ್ಲಿ ಮಾತನಾಡುತ್ತಿರುವುದನ್ನು ಗಮನಿಸಿದ ಶಾಖೆಯ ವ್ಯವಸ್ಥಾಪಕಿಗೆ ವೃದ್ಧೆಗೆ ಬಂದಿರುವುದು ಸೈಬರ್ ವಂಚಕರ ಕರೆ ಎಂದು ದೃಢವಾಗಿದೆ. ಈ ವಿಷಯವನ್ನು ವೃದ್ಧೆಗೆ ಮನದಟ್ಟು ಮಾಡಿದ ಮ್ಯಾನೇಜರ್ ಮಂಗಳೂರಿನ ನಗರದ ಸೈಬರ್ ಪೊಲೀಸರಿಗೆ ಮಾಹಿತಿ ನೀಡಿದರು. ಅಲ್ಲದೆ ಆ ನಂಬರ್ ಬ್ಲಾಕ್ ಮಾಡಿಸಿ ವೃದ್ಧೆಗೆ ನೆರವಾಗಿದ್ದಾರೆ.