ಆರು ಕಡೆ ಇರಿದು ಗಾಯಗೊಳಿಸಿದ್ದ ದರೋಡೆಕೋರರು
ಮುಂಬಯಿ : ಇಂದು ನಸುಕಿನ ಹೊತ್ತು ದರೋಡೆಕೋರರಿಂದ ಇರಿತಕ್ಕೊಳಗಾಗಿದ್ದ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರಿಗೆ ನಗರದ ಲೀಲಾವತಿ ಆಸ್ಪತ್ರೆಯಲ್ಲಿ ಸರ್ಜರಿ ಮಾಡಲಾಗಿದೆ. ಈ ವೇಳೆ ಸೈಫ್ ಮೈಮೇಲಾದ ಗಾಯದಲ್ಲಿ ಚಾಕುವಿನ ತುಂಡೊಂದು ಸಿಕ್ಕಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸವೆ.
ಸೈಫ್‌ಗೆ ಆರು ಕಡೆ ಇರಿಯಲಾಗಿತ್ತು. ಕೂಡಲೇ ಆಸ್ಪತ್ರೆಗೆ ಕರೆತಂದ ಕಾರಣ ಅಪಾಯದಿಂದ ಪಾರಾಗಿದ್ದಾರೆ. ಸುಮಾರು ಮೂರು ತಾಸು ಶಸ್ತ್ರಚಿಕಿತ್ಸೆ ಮಾಡಿದ ಬಳಿಕ ಅವರನ್ನು ಐಸಿಯುಗೆ ಸ್ಥಳಾಂತರಿಸಲಾಗಿದೆ. ಸದ್ಯ ಅವರ ಸ್ಥೀತಿ ಗಂಭೀರವಾಗಿದ್ದರೂ ಪ್ರಾಣಕ್ಕೆ ಅಪಾಯವಿಲ್ಲ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ನಸುಕಿನ ಸುಮಾರು 2.30 ಗಂಟೆ ಹೊತ್ತಿಗೆ ಮುಂಬಯಿಯ ಬಾಂದ್ರಾದಲ್ಲಿರುವ ಸೈಫ್ ಅಲಿ ಖಾನ್ ಮನೆಗೆ ಕಳ್ಳರು ನುಗ್ಗಿದ್ದು, ಕೆಲಸದವರು ಅವರನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ. ಈ ಗಲಾಟೆಯಿಂದ ಸೈಫ್ ಅಲಿ ಖಾನ್‌ಗೆ ಎಚ್ಚರ ಆಗಿದ್ದು, ಅವರು ಆಗಮಿಸಿದ್ದಾರೆ. ಆಗ ತಡೆಯಲು ಹೋದ ಸೈಫ್ ಮೇಲೆ ಕಳ್ಳ ಹಲ್ಲೆ ಮಾಡಿದ್ದಾನೆ. ಈ ವೇಳೆ ಸೈಫ್‌ಗೆ ಆರು ಕಡೆಗಳಲ್ಲಿ ಗಾಯಗಳಾಗಿವೆ. ಬೆನ್ನಿನ ಭಾಗದಲ್ಲಿ ತೀವ್ರ ಗಾಯವಾಗಿದೆ.
ಸೈಫ್ ಅಲಿ ಖಾನ್ ಮನೆ ಇರುವುದು 12ನೇ ಮಹಡಿಯಲ್ಲಿ. ಈ ಅಪಾರ್ಟ್‌ಮೆಂಟ್ ಬಿಲ್ಡಿಂಗ್‌ಗೆ ಎರಡು ಗೇಟ್‌ಗಳಿದ್ದು, ಎರಡೂ ಗೇಟ್‌ಗಳಲ್ಲಿ ತಲಾ ಇಬ್ಬರಂತೆ ಸೆಕ್ಯುರಿಟಿಯವರು 24 ತಾಸು ಕಾವಲಿರುತ್ತಾರೆ. ಹೀಗಿರುವಾಗ ದರೋಡೆಕೋರರು ಕಟ್ಟಡದ ಒಳ ನುಗ್ಗಿದ್ದು ಹೇಗೆ ಎಂಬ ಅನುಮಾನ ಮೂಡಿದೆ. ಮನೆಯ ಕೆಲಸದವರು ಮತ್ತು ಸೆಕ್ಯುರಿಟಿ ಗಾರ್ಡ್‌ಗಳ ಮೇಲೆಯೇ ಅನುಮಾನ ಮೂಡಿದ್ದು, ವಿಚಾರಣೆಗಾಗಿ ಒಬ್ಬನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮನೆಯಲ್ಲಿ ಇರುವ ಯಾರಾದರೂ ಸಹಾಯ ಮಾಡಿರಬಹುದು ಎಂಬ ಅನುಮಾನವೂ ಇದೆ. ಮುಂಬಯಿ ಪೊಲೀಸರು 7 ತಂಡ ರಚಿಸಿ ತನಿಖೆ ಪ್ರಾರಂಭಿಸಿದ್ದಾರೆ.
ಕರೀನಾ ಬಚಾವ್
ದಾಳಿ ನಡೆಯುವ ವೇಳೆ ಕರೀನಾ ಕಪೂರ್ ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ. ಅವರು ಸೋನಂ ಕಪೂರ್ ಮೊದಲಾದವರ ಜೊತೆ ಪಾರ್ಟಿಗೆ ತೆರಳಿದ್ದರು. ಹೀಗಾಗಿ ಅವರು ಹಲ್ಲೆಯಿಂದ ಬಚಾವ್ ಆಗಿದ್ದಾರೆ. ಸೈಫ್ ಮಕ್ಕಳು ಸೇಫ್ ಆಗಿದ್ದಾರೆ. ಸೈಫ್ ಅಲಿ ಖಾನ್ ಪಟೌಡಿ ರಾಜಮನೆತನಕ್ಕೆ ಸೇರಿದವರಾಗಿದ್ದು, ಅವರ ಬಳಿ ವಂಶ ಪಾರಂಪರ್ಯವಾಗಿ ಬಂದಿರುವ ಕೋಟಿಗಟ್ಟಲೆ ರೂ. ಸಂಪತ್ತು ಇದೆ. ಇದಲ್ಲದೆ ಹಲವಾರು ವರ್ಷಗಳಿಂದ ಅವರು ಬಾಲಿವುಡ್‌ನಲ್ಲಿ ಹೀರೊ ಆಗಿ ನಟಿಸುತ್ತಿದ್ದಾರೆ. ಪತ್ನಿ ಕರೀನಾ ಕಪೂರ್ ಈಗಲೂ ಬಾಲಿವುಡ್‌ನ ಬಹುಬೇಡಿಕೆಯ ಹೀರೊಯಿನ್. ಪತಿ-ಪತ್ನಿ ಇಬ್ಬರೂ ಬಾಲಿವುಡ್‌ನ ಅಗ್ರಗಣ್ಯ ನಟರ ಸಾಲಿನಲ್ಲಿದ್ದಾರೆ. ಸಾಕಷ್ಟು ಸಂಪತ್ತು ಕೂಡ ಅವರ ಬಳಿ ಇದೆ.