ದರೋಡೆ ಮಾಡಲು ಮನೆಗೆ ನುಗ್ಗಿದವರಿಂದ ಚಾಕು ಇರಿತ
ಮುಂಬಯಿ : ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ನಿನ್ನೆ ರಾತ್ರಿ ಮಾರಕಾಸ್ತ್ರದಿಂದ ದಾಳಿ ಮಾಡಲಾಗಿದೆ. ಮನೆಗೆ ನುಗ್ಗಿದ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಗಾಯಗೊಳಿಸಿದ್ದು, ನಟನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಡರಾತ್ರಿ 2.30ರ ವೇಳೆಗೆ ಈ ಘಟನೆ ನಡೆದಿದೆ. ದರೋಡೆಕೋರರು ಅವರ ಮನೆಗೆ ಕನ್ನ ಹಾಕಲು ಪ್ರಯತ್ನಿಸಿದ್ದಾರೆ. ಈ ವೇಳೆ ಸೈಫ್ ಅಲಿ ಖಾನ್ ಅವರು ತಡೆಯಲು ಪ್ರಯತ್ನಿಸಿದ್ದಾರೆ. ಆಗ ಅವರಿಗೆ ಗಾಯ ಆಗಿದೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಸೈಫ್ ಅಲಿ ಖಾನ್ ಮನೆ ಮುಂಬಯಿಯ ಬಾಂದ್ರಾದ ಪ್ರತಿಷ್ಠಿತರ ಬಡಾವಣೆಯಲ್ಲಿದೆ. ರಾತ್ರಿ ದರೋಡೆ ಪ್ರಯತ್ನವಾದಾಗ ಪತ್ನಿ ಕರೀನಾ ಕಪೂರ್ ಮತ್ತು ಮಕ್ಕಳು ಮನೆಯಲ್ಲೇ ಇದ್ದರು. ದರೋಡೆಕೋರರ ಜೊತೆ ಸೈಫ್ ಅಲಿ ಖಾನ್ ಹೋರಾಡಿದ್ದಾರೆ ಎನ್ನಲಾಗಿದೆ. ದರೋಡೆಕೋರರು ನುಗ್ಗಿದಾಗ ಎಲ್ಲರಿಗೂ ಎಚ್ಚರ ಆಗಿದೆ. ಆಗ ಸೈಫ್ ಮೇಲೆ ಅವರು ಹಲ್ಲೆ ಮಾಡಿದ್ದಾರೆ. ಪ್ರತಿರೋಧದಿಂದ ಕಂಗೆಟ್ಟ ದರೋಡೆಕೋರರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಪೊಲೀಸರ ತನಿಖೆ ಪ್ರಾರಂಭವಾಗಿದ್ದು, ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗುತ್ತಿದೆ.