ವಾಷಿಂಗ್ಟನ್ : ಭಾರತದ ಅಗ್ರಗಣ್ಯ ಉದ್ಯಮಿ ಗೌತಮ್ ಅದಾನಿಯವರ ನೇತೃತ್ವದ ಅದಾನಿ ಕಂಪನಿಗಳಿಗೆ ಇನ್ನಿಲ್ಲದಂತೆ ಕಾಟ ಕೊಟ್ಟಿದ್ದ ಹಿಂಡನ್ಬರ್ಗ್ ಸಂಸ್ಥೆಗೆ ಬೀಗ ಬಿದ್ದಿದೆ. ಹಿಂಡನ್ಬರ್ಗ್ ರೀಸರ್ಚ್ ಕಂಪನಿಯನ್ನು ಮುಚ್ಚುತ್ತಿರುವುದಾಗಿ ಅದರ ಸಂಸ್ಥಾಪಕ ನೇಟ್ ಆಂಡರ್ಸನ್ ಹೇಳಿದ್ದಾರೆ.
ನಾವು ಏನು ಸಾಧಿಸಬೇಕೆಂದಿದ್ದೆವೋ ಅದನ್ನು ಸಾಧಿಸಿದ್ದೇವೆ. ಈಗ ಕಂಪನಿಯನ್ನು ಮುಚ್ಚುವ ಸಮಯ ಬಂದಿದೆ. ಈ ಸಂಸ್ಥೆಯನ್ನು ನಡೆಸಿದ್ದು ಬದುಕಿ ಅದ್ಭುತ ಸಾಹಸವಾಗಿತ್ತು ಎಂದು ನೇಟ್ ಹೇಳಿದ್ದಾರೆ.
2023ರಲ್ಲಿ ಅದಾನಿ ಕಂಪನಿಯ ವಿರುದ್ಧ ಹಿಂಡನ್ಬರ್ಗ್ ಬಿಡುಗಡೆ ಮಾಡಿದ್ದ ವರದಿ ಇಡೀ ಜಗತ್ತಿನಲ್ಲಿ ಕೋಲಾಹಲ ಎಬ್ಬಿಸಿತ್ತು. ಅದಾನಿ ಕಂಪಗಳು ಈ ವರದಿ ಪರಿಣಾಮವಾಗಿ ಲಕ್ಷ ಕೋಟಿಗಳಲ್ಲಿ ನಷ್ಟ ಅನುಭವಿಸಿದ್ದವು. ಅದಾನಿ ಕಂಪನಿ ಷೇರು ಪೇಟೆಯಲ್ಲಿ ಅವ್ಯವಹಾರ ನಡೆಸಿದೆ ಎಂಬ ಈ ವರದಿ ಭಾರತದಲ್ಲಿ ರಾಜಕೀಯ ಬಿರುಗಾಳಿಯನ್ನು ಎಬ್ಬಿಸಿತ್ತು. ಷೇರುಪೇಟೆಯಲ್ಲಿ ಅದಾನಿ ಕಂಪನಿಗಳ ಷೇರು ಮೌಲ್ಯ ತೀವ್ರ ಕುಸಿತ ಕಂಡು ಸ್ವತಹ ಗೌತಮ್ ಅದಾನಿಯೇ ಸ್ಪಷ್ಟೀಕರಣ ನೀಡಬೇಕಾಗಿ ಬಂದಿತ್ತು. ಕಾಂಗ್ರೆಸ್ ಗೌತಮ್ ಅದಾನಿಯನ್ನು ಪ್ರಧಾನಿ ನರೇಂದ್ರ ಮೋದಿ ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿ ರಾಜಕೀಯ ಲಾಭ ಗಳಿಸಲು ಹವಣಿಸಿತ್ತು.
ಬಳಿಕ 2014ರಲ್ಲೂ ಹಿಂಡನ್ಬರ್ಗ್ ಅದಾನಿ ಸಮೂಹದ ವಿರುದ್ಧ ಇದೇ ಮಾದರಿಯ ಇನ್ನೊಂದು ವರದಿಯನ್ನು ಬಹಿರಂಗಗೊಳಿಸಿತು. ಆದರೆ ಈ ವರದಿಯಿಂದ ಅದಾನಿ ಸಮೂಹಕ್ಕೆ ಹೆಚ್ಚೆನೂ ನಷ್ಟವಾಗಲಿಲ್ಲ. ಅಷ್ಟರಲ್ಲಾಗಲೇ ಹಿಂಡನ್ಬರ್ಗ್ ಸಂಸ್ಥೆ ಭಾರತದ ಆರ್ಥಿಕ ವ್ಯವಸ್ಥೆಯನ್ನು ಹಾಳುಮಾಡುವ ವಿದೇಶಗಳ ವ್ಯಕ್ತಿಗಳ ಟೂಲ್ಕಿಟ್ ಎಂದು ಮನವರಿಕೆ ಮಾಡಿಕೊಡುವಲ್ಲಿ ಭಾರತ ಯಶಸ್ವಿಯಾಗಿತ್ತು. ಇದರಿಂದಾಗಿ ಷೇರು ಪೇಟೆಯಲ್ಲಿ ಹೆಚ್ಚೇನೂ ಅಲ್ಲೋಲಕಲ್ಲೋಲವಾಗದೆ ಅದಾನಿ ಕಂಪನಿಗಳು ಪಾರಾಗಿದ್ದವು. 2017ರಲ್ಲಿ ಸ್ಥಾಪನೆಯಾದ ಹಿಂಡನ್ಬರ್ಗ್ ಬಹುರಾಷ್ಟ್ರೀಯ ಕಾರ್ಪೋರೇಟ್ ಕಂಪನಿಗಳ ಮೋಸವನ್ನು ಬಯಲಿಗೆಳೆಯುವುದು ತನ್ನ ಉದ್ದೇಶ ಎಂದು ಹೇಳಿಕೊಂಡಿತ್ತು. ಕೆಲವು ದೇಶಗಳಲ್ಲಿ ಹಿಂಡನ್ಬರ್ಗ್ ವರದಿಯಿಂದ ಸಮಸ್ಯೆಗಳಾಗಿದ್ದವು. ಈ ಸಂಸ್ಥೆಯ ಮೇಲೆ ಸಾಕಷ್ಟು ಕೇಸ್ಗಳು ಇವೆ. ಆದರೆ ಸಂಸ್ಥೆಯನ್ನು ಮುಚ್ಚಲು ನಿರ್ದಿಷ್ಟ ಕಾರಣ ಏನು ಎನ್ನುವುದನ್ನು ಕೇಟ್ ಹೇಳಿಲ್ಲ. ವೈಯಕ್ತಿಕ ಕಾರಣಗಳಿಂದಾಗಿ ಸಂಸ್ಥೆಯನ್ನು ಮುಚ್ಚುತ್ತಿದ್ದೇವೆ ಎಂದಷ್ಟೇ ಹೇಳಿಕೊಂಡಿದ್ದಾರೆ.