ಉಡುಪಿ: ಮೀನುಗಾರಿಕೆಗೆ ತೆರಳಿದ್ದ ಮಲ್ಪೆಯ ದೋಣಿ ಕಾರವಾರ ಸಮೀಪ ಮುಳುಗಿ ಅಪಾರ ನಷ್ಟ ಉಂಟಾಗಿದೆ. ಮಲ್ಪೆಯ ಸೀ ಹಂಟರ್ ಹೆಸರಿನ ದೋಣಿಯ ತಳಭಾಗದ ಕಬ್ಬಿಣದ ವೆಲ್ಡಿಂಗ್ ಬಿಟ್ಟುಹೋದ ಪರಿಣಾಮ ನೀರು ತುಂಬಿಕೊಂಡು ಮುಳುಗಿದೆ. ಬೋಟ್‌ನಲ್ಲಿದ್ದ 8 ಮೀನುಗಾರರನ್ನು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ.
ಮಲ್ಪೆಯಿಂದ ಮಹಾರಾಷ್ಟ್ರದ ಕಡೆ ಈ ಬೋಟ್ ಚಲಿಸುತಿತ್ತು. ಕಾರವಾರದಿಂದ 9 ನಾಟಿಕನ್ ಮೈಲು ದೂರದ ಲೈಟ್‌ಹೌಸ್ ಬಳಿ ಬೋಟ್ ತಳಭಾಗದ ಕಬ್ಬಿಣದ ಭಾಗದಲ್ಲಿ ವೆಲ್ಡಿಂಗ್ ಬಿಟ್ಟುಹೋಗಿದೆ. ವೆಲ್ಡಿಂಗ್ ಬಿಟ್ಟುಹೋದ ಪರಿಣಾಮ ಬೋಟ್ ಇಂಜಿನ್ ಭಾಗಕ್ಕೆ ನೀರು ತುಂಬಿದೆ. ತಕ್ಷಣ ಸ್ಥಳೀಯ ಮೀನುಗಾರರು ಎಂಟು ಜನ ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ.
ಮುಳುಗುವ ಹಂತದಲ್ಲಿದ್ದ ದೋಣಿಯನ್ನು ದಡಕ್ಕೆ ತರಲು ಪ್ರಯತ್ನ ಪಟ್ಟರೂ, ಮಾರ್ಗ ಮಧ್ಯದಲ್ಲೇ ಬೋಟ್ ಮುಳುಗಡೆಯಾಗಿದೆ. ಬೋಟ್ ಮುಳುಗಡೆಯಿಂದ 1 ಕೋಟಿ ರೂ.ಗೂ ಹೆಚ್ಚು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.