ಪಾಲುದಾರಿಕೆ ವ್ಯವಹಾರದಲ್ಲಿ ಬೆನ್ನಿಗಿರಿದ ಪರಂಗಿಪೇಟೆಯ ಸ್ನೇಹಿತರು
ಉಡುಪಿ : ಪಾಲುದಾರಿಕೆಯಲ್ಲಿ ವ್ಯವಹಾರ ನಡೆಸುವ ಭರವಸೆ ನೀಡಿ ಉದ್ಯಮಿಯೋರ್ವರಿಗೆ 2 ಕೋಟಿ ರೂ. ವಂಚಿಸಿದ ಪ್ರಕರಣ ಕಾರ್ಕಳದಲ್ಲಿ ಸಂಭವಿಸಿದೆ. ಈ ಕುರಿತು ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ ಮಾರ್ಕೆಟ್ ರಸ್ತೆಯಲ್ಲಿರುವ ಮಹಾಲಕ್ಷ್ಮೀ ಪ್ರಭಾ ಕಾಂಪ್ಲೆಕ್ಸ್‌ನಲ್ಲಿ ಮೊಬೈಲ್ ಅಂಗಡಿ ಹೊಂದಿರುವ ಮರ್ಣೆಯ ದಾವುದುಲ್ ಹಕೀಂ ಎಂಬವರಿಗೆ ಕಳೆದ 20 ವರ್ಷಗಳಿಂದ ಪರಿಚಯಸ್ಥರಾಗಿರುವ ಫರಂಗಿಪೇಟೆಯ ಅಬ್ದುಲ್ ರಹಿಮಾನ್, ಹಫೀಜ್ ಟಿ.ಎ., ಅಯ್ಯೂಬ್, ಸದಕತ್ತುಲ್ಲಾ, ಮೊಹಮ್ಮದ್ ಎಂಬವರು ವಂಚನೆ ಮಾಡಿರುವುದಾಗಿ ಹಕೀಂ ದೂರಿನಲ್ಲಿ ತಿಳಿಸಿದ್ದಾರೆ.
ಜಾಗದ ವ್ಯವಹಾರ, ಟ್ರಾವೆಲ್ ಉದ್ಯಮ ನಡೆಸಿ ಬಂದ ಆದಾಯವನ್ನು ಹಂಚಿಕೊಳ್ಳೋಣವೆಂದು ಹಕೀಂ ಅವರನ್ನು ನಂಬಿಸಿ ಅದಕ್ಕಾಗಿ ಹಣ, ಚಿನ್ನ ಪಡೆದುಕೊಂಡಿದ್ದರು. ಬಳಿಕ ಯಾವುದೇ ಲಾಭಾಂಶ ನೀಡದೆ ಪಡೆದ ಚಿನ್ನ, ಹಣವನ್ನು ಹಿಂದಿರುಗಿಸದೆ ವಂಚಿಸಿದ್ದಾರೆ.