ರಾಜ್ಯಾದ್ಯಂತ ಆಕ್ರೋಶದ ಅಲೆಯೆಬ್ಬಿಸಿದ ದುರುಳರ ವಿಕೃತಿ
ಬೆಂಗಳೂರು: ಚಾಮರಾಜಪೇಟೆಯ ಓಲ್ಡ್ ಪೆನ್ಶನ್ ಮೊಹಲ್ಲಾದ ವಿನಾಯಕನಗರದಲ್ಲಿ ಹಸುಗಳ ಕೆಚ್ಚಲು ಕೊಯ್ದು ಕ್ರೌರ್ಯ ಮೆರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಕಾಟನ್ ಪೇಟೆ ಪೊಲೀಸರು ಬಂಧಿಸಿ ಸ್ಥಳ ಮಹಜರು ನಡೆಸಿದ್ದಾರೆ. ನಿನ್ನೆ ತಡರಾತ್ರಿಯಿಂದಲೇ ಆರೋಪಿಯ ವಿಚಾರಣೆ ನಡೆಸಲಾಗುತ್ತಿದೆ.
ಚಾಮರಾಜಪೇಟೆಯ ಓಲ್ಡ್ ಪೆನ್ಶನ್ ಮೊಹಲ್ಲಾದ ವಿನಾಯಕನಗರ ನಿವಾಸಿ ಕರ್ಣ ಎಂಬುವರ ಮೂರು ಹಸುಗಳ ಕೆಚ್ಚಲನ್ನು ಕತ್ತರಿಸಿ, ಕಾಲಿಗೆ ಮಚ್ಚಿನಿಂದ ಹಲ್ಲೆ ಮಾಡಿ ದುಷ್ಕರ್ಮಿಗಳು ವಿಕೃತಿ ಮೆರೆದಿದ್ದರು. ಕರ್ಣ ನೀಡಿದ ದೂರು ಆಧರಿಸಿ ಪ್ರರಕಣ ದಾಖಲಿಸಿಕೊಂಡ ಪೊಲೀಸರು ಭಾನುವಾರ ರಾತ್ರಿ ಓರ್ವ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಚಿಕ್ಕಪೇಟೆ ಉಪ ವಿಭಾಗದ ಎಸಿಪಿ ರಮೇಶ್ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಪೊಲೀಸರು ತನಿಖೆ ನಡೆಸಿದ್ದಾರೆ.
ಹಸುಗಳಿಗೆ ಚಾಮರಾಜಪೇಟೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಹಸುಗಳು ಕ್ಷೇಮವಾಗಿವೆ. ಆದರೆ, ಇನ್ನೂ ಎರಡು ವಾರ ಗಾಯ ಮಾಸಲು ಸಮಯಬೇಕಿದೆ.
ಹಸುಗಳ ಮೇಲೆ ಮೆರೆದ ಕ್ರೌರ್ಯಕ್ಕೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಹಿಂದೂ ಪರ ಸಂಘಟನೆ ಮುಖಂಡರು, ವಿಪಕ್ಷ ನಾಯಕ ಆರ್ ಅಶೋಕ್, ಸಂಸದ ಪಿ.ಸಿ ಮೋಹನ್, ಎಂಎಲ್ಸಿ ರವಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಮಾಲೀಕ ಕರ್ಣನ ಅವರಿಗೆ ಸಾಂತ್ವನ ಹೇಳಿದ್ದರು. ಘಟನೆಯನ್ನು ಖಂಡಿಸಿದ ನಾಯಕರು, ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ವಿಪಕ್ಷ ನಾಯಕ ಆರ್. ಅಶೋಕ್ ವೈಯುಕ್ತಿಕವಾಗಿ ಒಂದು ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದರು.