ಮಂಗಳೂರು: ಸೇತುವೆಯಿಂದ ನದಿ ನೀರಿಗೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಮಂಗಳೂರಿನ ಮರವೂರು ಬಳಿಯ ಸೇತುವೆ ಬಳಿ ಭಾನುವಾರ ನಡೆದಿದೆ.
ಕುಂಜತ್ತಬೈಲು ನಿವಾಸಿ ರೇವತಿ (60) ಮೃತಪಟ್ಟ ಮಹಿಳೆ.
ಭಾನುವಾರ ಬೆಳಿಗ್ಗೆ 7.30 ರಿಂದ 8.30ರ ಸುಮಾರಿಗೆ ಅಂಗಡಿಗೆ ಹೋಗುತ್ತಿದ್ದ ರೇವತಿ ಅವರು ಮರವೂರು ಸೇತುವೆಯ ಬಳಿ ಏಕಾಏಕಿ ನದಿಗೆ ಬಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸ್ಥಳೀಯರು ಅವರ ಮೃತದೇಹವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಅಂಗಡಿಗೆ ಹೋಗಿದ್ದ ರೇವತಿಯನ್ನು ಕಾಣದಾದಾಗ ಮನೆಯವರು ಅವರನ್ನು ಹುಡುಕುತ್ತಾ ಬಂದಿದ್ದರು. ಬಳಿಕ ಮೃತರ ಮಗ ಮೃತದೇಹ ತಾಯಿ ರೇವತಿಯದ್ದು ಎಂದು ದೃಢ ಪಡಿಸಿದ್ದರು. ಮೃತದೇಹವನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ರೇವತಿಯವರ ಪುತ್ರ ನೀಡಿದ ದೂರಿನಂತೆ ಕಾವೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.