ಕಾಣಿಯೂರು: ಶಮಾನೋತ್ಸವ ಹೊಸ್ತಿಲಲ್ಲಿರುವ ಕಾಣಿಯೂರು ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ ಆಚರಣೆಯ ಸಲುವಾಗಿ ನೂತನ ಕಟ್ಟಡ ಉದ್ಘಾಟನೆ ಹಾಗೂ ಕೃಷಿಮೇಳದ ಅಂಗವಾಗಿ ಭಾನುವಾರ ಬೆಳಿಗ್ಗೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿಚಾರಗೋಷ್ಠಿ ನಡೆಯಿತು.
ಬೆಳಿಗ್ಗೆ ಕಾರ್ಯಕ್ರಮದ ಉದ್ಘಾಟನೆ ಬಳಿಕ ಇಡ್ಯಡ್ಕ ಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.
ಬಳಿಕ ಸ್ವ ಉದ್ಯೋಗ ಎಂಬ ವಿಷಯದ ಕುರಿತು ನಡೆದ ವಿಚಾರಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಉಜಿರೆ ರುಡ್ ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್‍ಮಾತನಾಡಿ, ಭಾರತ ದೇಶ ಕೃಷಿ ಪ್ರಧಾನವಾದ ದೇಶ. ರೈತ ಕೃಷಿಯಲ್ಲಿ ಹೆಚ್ಚಿನ ಕಾಳಜಿಯಿಂದ ತೊಡಗಿಸಿಕೊಂಡಲ್ಲಿ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ. ಇಡೀ ಭಾರತದಲ್ಲಿ 27 ರುಡ್ ಸೆಟ್ ಕಾರ್ಯಾಚರಿಸುತ್ತಿದೆ. ಎಲ್ಲಾ ತರಗತಿಗಳು ಉಚಿತವಾಗಿದೆ. ಕೆನರಾ ಬ್ಯಾಂಕ್‍ಹಾಗೂ ಎಸ್‍ಡಿಎಂ ಟ್ರಸ್ಟ್ ನೋಡಿಕೊಳ್ಳುತ್ತಿದೆ. ಕೆನರಾ ಬ್ಯಾಂಕ್, ರುಡ್‍ಸೆಟ್ ಸ್ವ ಉದ್ಯೋಗಗಳನ್ನು ಕೈಗೊಳ್ಳುತ್ತಿದೆ. ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿ ವರೆಗೆ ನಡೆಯುತ್ತಿದ್ದು, ಕ್ರಾಂತಿಯನ್ನು ಸೃಷ್ಟಿಸಿದೆ. ಅಲ್ಲದೆ ಚಳುವಳಗಳು ನಡೆಯುತ್ತಿದೆ. ಆರ್ಥಿಕವಾಗಿ ಮೇಲೆ ಬರಲು ಸ್ವ ಉದ್ಯೋಗದಿಂದ ಮಾತ್ರ ಸಾಧ್ಯ. ಕೃಷಿಗೆ ಪೂರಕವಾದ ಏನಾದರೂ ಮಾಡಲು ಸಾಧ್ಯ ಎಂಬ ಯೋಜನೆ ಮಾಡಲಾಗಿದೆ. ತರಬೇತಿಗಳಲ್ಲಿ, ವಿಶೇಷತೆಗಳಲ್ಲಿ ಪಾಲ್ಗೊಂಡಾಗ ಧೈರ್ಯ, ಆತ್ಮವಿಶ್ವಾಸ ಸಿಗುತ್ತದೆ. ಬೆಳೆಯಬೇಕು ಎಂಬ ಆಸಕ್ತಿ ಇದ್ದಾಗ ಭಗವಂತ ದಾರಿ ತೋರಿಸುತ್ತಾನೆ. ಇದಕ್ಕೆ ಇಚ್ಛಾಶಕ್ತಿ ಜಾಸ್ತಿ ಬೆಳೆಸಿಕೊಳ್ಳಬೇಕು. ಈ ಅವಕಾಶಗಳನ್ನು ಬಳಸಿಕೊಳ್ಳಿ. ಸ್ವ ಉದ್ಯೋಗ ಮಾಡಿ ನಾಲ್ಕು ಜನರಿಗೆ ಉದ್ಯೋಗ ನೀಡಿದರೆ ಅದೇ ರುಡ್ ಸೆಟ್ ಗೆ ನೀಡುವ ಗೌರವ ಎಂದರು. ಬಳಿಕ ಕಾರ್ಯಕ್ರಮದಲ್ಲಿ ನೆರೆದಿದ್ದ ಜನ ರುಡ್‍ಸೆಟ್ ಸಂಸ್ಥೆಯ ತರಬೇತಿಗೆ ಪೂರಕವಾಗಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.
ಮರ್ದಾಳ ಶ್ರೀ ಜನನಿ ಫ್ಯಾಷನ್ ವರ್ಲ್ಡ್ ನ ಸುಜಾತ ದಿನೇಶ್ ಕುಂದರ್ ಮಾತನಾಡಿ, ಯಾವುದೇ ಉದ್ಯೋಗವನ್ನು ಕೈಗೊಳ್ಳುವ ಮನಸ್ಸು ನಮ್ಮಲ್ಲಿರಬೇಕು. ನಾವು ಸ್ವಾವಲಂಬಿಯಾಗಿ ಹೇಗೆ ಬದುಕಬೇಕು ಎಂಬ ಕನಸು ನಮ್ಮಲ್ಲಿದ್ದರೆ ಅದು ಸಾಧ್ಯವಾಗುತ್ತದೆ. ನಮ್ಮಲ್ಲಿರುವ ಮಾಹಿತಿಯನ್ನು ನಾವು ಇನ್ನೊಬ್ಬರಿಗೆ ಹಂಚುವ ಮೂಲಕ ಮಾದರಿಯಾಗಬೇಕು. ಹಿಂಜರಿಕೆ ಎಲ್ಲರಿಗೂ ಇದ್ದದ್ದೆ. ಅದನ್ನು ಮೆಟ್ಟಿ ನಿಂತು ಸಾಗಬೇಕು. ಪ್ರತಿಯೊಬ್ಬರಲ್ಲೂ ಸಾಧಿಸುವ ಛಲ ಇದೆ. ಅವಕಾಶಗಳನ್ನು ಬಳಸಿಕೊಳ್ಳುವುದು ಮುಖ್ಯ ಎಂದರು.
ಮುಖ್ಯ ಅತಿಥಿಯಾಗಿ ಚಾರ್ವಾಕ ಹಸ್ತಾ ಫುಡ್ ಪ್ರೊಡಕ್ಟ್ ನ ವಿಶ್ವನಾಥ ಗೌಡ ಅಂಬುಲ ಮಾತನಾಡಿ, ಉದ್ಯೋಗ ಎಂದರೆ ಕೇವಲ ಎಣಿಸಿದಂತೆ ಇಲ್ಲ. ಯಾವುದೇ ಸ್ವ ಉದ್ಯೋಗ ಮಾಡುವುದಾದರೂ ತರಬೇತಿ ಅಗತ್ಯ. ಅದಕ್ಕೆ ಹಠ, ಸಾಧಿಸುವ ಛಲ ಮುಖ್ಯ. ಈ ನಿಟ್ಟಿನಲ್ಲಿ ಸರಿಯಾದ ಮಾರ್ಗದರ್ಶಕರ ಮೂಲಕ ಸ್ವ ಉದ್ಯೋಗ ಕೈಗೊಳ್ಳಿ ಎಂದರು.
ಮುಖ್ಯ ಅತಿಥಿಗಳಾಗಿ ಬ್ಯಾಂಕ್ ಆಫ್ ಬರೋಡ ಕಾಣಿಯೂರು ಶಾಖಾ ವ್ಯವಸ್ಥಾಪಕ ಅತಿಥ್ ರೈ ಪಾಲ್ಗೊಂಡಿದ್ದರು. ಚಾರ್ವಾಕ ಪ್ರಾಥಮಿಕ ಕೃಷಿಪತ್ತಿನ ಸಹಕಾರದ ಸಂಘದ ಅಧ್ಯಕ್ಷ ಗಣೇಶ್‍ಕೆ.ಎಸ್.ಉದನಡ್ಕ ಸ್ವಾಗತಿಸಿ, ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ ಗೌಡ ಪಿ. ಉಪಸ್ಥಿತರಿದ್ದರು. ನಿರ್ದೇಶಕ ಪರಮೇಶ್ವರ ಗೌಡ ಅನಿಲ ವಂದಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಮುಂದುವರಿಯಿತು.