ಪತ್ತನಂತಿಟ್ಟ : ಲೈಂಗಿಕ ಹಗರಣಗಳಿಗೆ ಕುಖ್ಯಾತವಾಗಿರುವ ಕೇರಳದಲ್ಲಿ ಇನ್ನೊಂದು ಬೆಚ್ಚಿಬೀಳಿಸುವ ಪ್ರಕರಣ ಬೆಳಕಿಗೆ ಬಂದಿದೆ.ಈಗ 18 ವರ್ಷ ಪ್ರಾಯವಾಗಿರುವ ದಲಿತ ಸಮುದಾಯದ ಕ್ರೀಡಾಪಟುವೊಬ್ಬಳ ಮೇಲೆ ಕಳೆದ ಐದು ವರ್ಷಚಗಳಿಂದ 60ಕ್ಕೂ ಹೆಚ್ಚು ಮಂದಿ ಅತ್ಯಾಚಾರ ಎಸಗಿರುವ ಘಟನೆ ಸಂಭವಿಸಿದೆ. ಅಪ್ರಾಪ್ತ ವಯಸ್ಸಿನವಳ ಆಕೆಯ ಕ್ರೀಡಾ ಕೋಚ್‌ಗಳು, ಸಹ ಆಟಗಾರರು ಸೇರಿದಂತೆ 64 ಪುರುಷರು 5 ವರ್ಷಗಳಿಂದ ಅತ್ಯಾಚಾರ ಎಸಗಿದ್ದಾರೆ. ಸಂತ್ರಸ್ತೆ ಇದೀಗ ದೂರು ನೀಡಿದ್ದು, ಇದರನ್ವಯ ಪೊಲೀಸರು ಆರೋಪಿಗಳ ವಿರುದ್ಧ 4 ಎಫ್‌ಐಆರ್ ದಾಖಲಿಸಿ 15 ಮಂದಿಯನ್ನು ಬಂಧಿಸಿದ್ದಾರೆ.
8ನೇ ತರಗತಿಯಲ್ಲಿದ್ದಾಗ ಅಂದರೆ 13 ವರ್ಷದ ಬಾಲಕಿಯಿದ್ದಾಗಲೇ ಲೈಂಗಿಕ ಕಿರುಕುಳ ಆರಂಭವಾಯಿತು. ಪಕ್ಕದ ಮನೆಯ ವ್ಯಕ್ತಿಯೊಬ್ಬ ನನಗೆ ಅಶ್ಲೀಲ ವೀಡಿಯೊ ತೋರಿಸಿ ಲೈಂಗಿಕವಾಗಿ ಬಳಸಿಕೊಂಡ. ನಂತರ ಕೆಲವರು ನನ್ನ ಬಡತನ ದುರ್ಬಳಕೆ ಮಾಡಿಕೊಂಡು ಶೋಷಣೆ ಮಾಡಿದರು. ನಾನು ಅಥ್ಲೀಟ್ ಆಗಿದ್ದ ಕಾರಣ ಕೋಚ್‌ಗಳು, ಆಟಗಾರರೂ ರೇಪ್ ಮಾಡಿದರು. ಈ ವೇಳೆ ನನ್ನ ಅಶ್ಲೀಲ ವಿಡಿಯೋ ಶೂಟ್ ಮಾಡಿಕೊಂಡು ಅವರು ಇತರ ಪರಿಚಯಸ್ಥರ ಜತೆ ಹಂಚಿಕೊಂಡರು ಹಾಗೂ ಬ್ಲಾಕ್‌ಮೇಲ್ ಆರಂಭಿಸಿದರು. ಆಗ ಇತರರು ಕೂಡ ವೀಡಿಯೊ ತೋರಿಸಿ ಲೈಂಗಿಕ ಶೋಷಣೆ ಮಾಡಿದರು ಎಂದು ಆಕೆದೂರಿನಲ್ಲಿ ಹೇಳಿಕೊಂಡಿದ್ದಾಳೆ.
ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲುಸಿ) ಸದಸ್ಯರು ವಾಡಿಕೆಯಂತೆ ಫೀಲ್ಡ್ ವಿಸಿಟ್ ಮಾಡುವಾಗ ಯುವತಿಯ ಮನೆಗೂ ಹೋಗಿದ್ದು, ಆಗ ಯುವತಿ ಕರಾಳ ಕೃತ್ಯದ ಬಗ್ಗೆ ಬಾಯಿ ಬಿಟ್ಟಿದ್ದಾಳೆ. ಬಳಿಕ ಈ ಸಮಿತಿ ದೂರು ನೀಡಿದ್ದು, ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಯುವತಿಯು ಅತ್ಯಾಚಾರಿಗಳ ಜತೆ ಮಾತನಾಡಲು ತಂದೆಯ ಫೋನ್ ಬಳಸಿದ್ದು, ಅದನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಪ್ರಕರಣದ ತನಿಖೆ ನಡೆಸಲು ಪತ್ತನಂತಿಟ್ಟ ಎಸ್ಪಿ ವಿಶೇಷ ತಂಡ ರಚಿಸಿದ್ದಾರೆ. 15 ಜನರನ್ನು ಬಂಧಿಸಿ ಉಳಿದವರಿಗೆ ಬಲೆ ಬೀಸಿದ್ದಾರೆ.