ಕಾರ್ಕಳ : ಸ್ವಚ್ಛ ಸುಂದರ ಪ್ರಕೃತಿಯಿಂದಲೇ ಪ್ರಸಿದ್ಧಿ ಪಡೆಯುತ್ತಿರುವ ಕಾರ್ಕಳದ ಕೆಲವು ಪ್ರದೇಶದಲ್ಲಿ ವಿವಿಧ ಸಂಘ ಸಂಸ್ಥೆಗಳು ಪರಿಸರ ದಿನಾಚರಣೆ ಮತ್ತಿತರ ಸಂದರ್ಭಗಳಲ್ಲಿ ನೆಟ್ಟ ಗಿಡಗಳು ಕೇವಲ ಆ ಒಂದು ದಿನದ ಸಂಭ್ರಮಕ್ಕೆ ಮಾತ್ರ ಸೀಮಿತವಾಗುತ್ತಿರುವದು ವಿಷಾದದ ಸಂಗತಿ. ಜನತೆಗೆ ಪರಿಸರದ ಮಹತ್ವ ಸಾರುವ ಹಾಗೂ ಜಾಗೃತಿಗೊಳಿಸುವ ಉದ್ದೇಶದಿಂದ ವಿಶ್ವಸಂಸ್ಥೆ ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆ ಪ್ರಾರಂಭ ಮಾಡಿದೆ. ಆದರೆ ಇದೀಗ ಗಿಡ ನೆಡುವುದು, ಅದರ ಪೋಷಣೆ ಕೇವಲ ಪರಿಸರ ದಿನಾಚರಣೆಗೆ ಮಾತ್ರ ಸೀಮಿತವಾಗುತ್ತಿದೆ.
ಕಾರ್ಕಳದ ತಾಲೂಕು ಜಂಕ್ಷನ್‌ನಿಂದ ಜೋಡು ರಸ್ತೆ, ಸರ್ವಜ್ಞ ಸರ್ಕಲ್‌ನಿಂದ ಬಂಗ್ಲೆಗುಡ್ಡೆ ಮತ್ತು ಬಂಗ್ಲೆಗುಡ್ಡೆಯಿಂದ ಜೋಡುರಸ್ತೆಯಲ್ಲಿರುವ ರಸ್ತೆ ಡಿವೈಡರ್‌ಗಳಲ್ಲಿ ಹಾಗೂ ಕಾರ್ಕಳದ ವಿವಿಧೆಡೆ ಪರಿಸರ ದಿನಾಚರಣೆಯ ಸಂಭ್ರಮಾಚರಣೆಗಾಗಿ ಅನೇಕ ಸಂಘ ಸಂಸ್ಥೆಗಳು ನೆಟ್ಟ ಗಿಡಗಳು ನಂತರದ ದಿನಗಳಲ್ಲಿ ನೀರು ಹಾಕುವವರಿಲ್ಲದೆ, ಸರಿಯಾದ ಪೋಷಣೆ ಇಲ್ಲದೆ ಬಿಸಿಲಿನ ಬೇಗೆಗೆ ಕರಟಿ ಹೋಗುತ್ತಿದೆ. ಈ ಕುರಿತು ಯಾರೂ ಚಿಂತಿಸುತ್ತಿಲ್ಲ.
ಸಂಘ-ಸಂಸ್ಥೆಗಳು ಪರಿಸರ ದಿನಾಚರಣೆಯ ಸಲುವಾಗಿ ಗಿಡಗಳನ್ನು ನೆಡುತ್ತಿರುವುದು ಒಳ್ಳೆಯ ವಿಚಾರವೇ. ಆದರೆ ಅದರ ಪೋಷಣೆಯ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ. ನೆಟ್ಟ ಸಸಿಗಳ ಬೆಳವಣಿಗೆಗೆ ಬೇಕಾದ ಪೂರಕ ವಾತಾವರಣವನ್ನು ನಿರ್ಮಿಸಿದಾಗ ಆಚರಣೆ ಸಾರ್ಥಕವಾಗುತ್ತದೆ. ಇಲ್ಲವಾದರೆ ಅಂತಹ ಆಚರಣೆಗಳೇ ಅನವ್ಯಶಕ. ಬರೀ ತೋರಿಕೆಗಾಗಿ ಕಾಟಾಚಾರದ ಪರಿಸರ ದಿನ ಆಚರಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಆಡಳಿತ ವ್ಯವಸ್ಥೆಯೂ ಸರಿಯಾದ ಗಮನಹರಿಸಬೇಕಾಗಿದೆ.
ವರದಿ : ನಳಿನಿ ಎಸ್. ಸುವರ್ಣ