ಪರಮಾದ್ಭುತ ಧಾರ್ಮಿಕ ಕಾರ್ಯಕ್ರಮ ಮಹಾಕುಂಭಮೇಳ

144 ವರ್ಷಗಳ ಬಳಿಕ ನಡೆಯುತ್ತಿರುವ ಮಹಾ ಉತ್ಸವಕ್ಕೆ ನಡೆದ ತಯಾರಿಯೂ ಅದ್ಭುತ

ಇಲ್ಲಿದೆ ಪ್ರಯಾಗ್‌ರಾಜ್‌ ಮಹಾಕುಂಭಮೇಳದ ಸಂಪೂರ್ಣ ಚಿತ್ರಣ

ಲಖನೌ: ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ ಮಹಾಕುಂಭಮೇಳಕ್ಕೆ ಕ್ಷಣಗಣನೆ ಶುರುವಾಗಿದೆ. ಜ.13ರಂದು ಪ್ರಾರಂಭವಾಗಲಿರುವ ಕುಂಭಮೇಳಕ್ಕಾಗಿ ಪ್ರಯಾಗ್‌ರಾಜ್‌ನಲ್ಲಿ ವರ್ಷದಿಂದಲೇ ತಯಾರಿ ನಡೆಯುತ್ತಿದ್ದು, ಉತ್ತರ ಪ್ರದೆಶ ಸರಕಾರ ಮತ್ತು ಕೇಂದ್ರ ಸರಕಾರ ಎಲ್ಲ ವ್ಯವಸ್ಥೆಗಳನ್ನು ಮಾಡಿದೆ.
ಇದು 144 ವರ್ಷಗಳ ನಂತರ ನಡೆಯುತ್ತಿರುವ ಮಹಾಕುಂಭಮೇಳ. ವಿಶ್ವಾದ್ಯಂತ ಕೋಟಿಗಟ್ಟಲೆ ಜನರು ಈ ಪರಮಾದ್ಭುತ ಧಾರ್ಮಿಕ ಕಾರ್ಯವನ್ನು ನೋಡಲು ಕಾತರರಾಗಿದ್ದಾರೆ. ಕುಂಭಮೇಳಕ್ಕೆ ಜಗತ್ತಿನ ಅತಿಹೆಚ್ಚು ಸಂಖ್ಯೆಯಲ್ಲಿ ಜನ ಸೇರುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಉತ್ಸವ ಎಂಬ ಹಿರಿಮೆ ಇದೆ.































 
 

ಏನೆಲ್ಲ ಸಿದ್ಧತೆ?

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ವತಹ ಈ ಮಹಾಕುಂಭಮೇಳದ ಸಿದ್ಧತೆಯ ಉಸ್ತುವಾರಿ ವಹಿಸಿಕೊಂಡು ವಿಶೇಷ ಮುತುವರ್ಜಿ ವಹಿಸಿ ಮಹಾಕುಂಭಮೇಳ ಯಶಸ್ವಿಯಾಗಿ ನಡೆಸಲು ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ. ಕೇಂದ್ರ ಸರಕಾರವೂ ಸಾಕಷ್ಟು ನೆರವು ನೀಡಿದ್ದು, ಕುಂಭಮೇಳ ನಡೆಯುವ ಸ್ಥಳವನ್ನು ತಾತ್ಕಾಲಿಕವಾಗಿ ಒಂದು ಜಿಲ್ಲೆ ಎಂದು ಘೋಷಿಸಲಾಗಿದೆ. ಇದರಿಂದಾಗಿ ಜಿಲ್ಲೆಗೆ ಸಿಗುವ ಸಕಲ ಸೌಲಭ್ಯವೂ ಕುಂಭಮೇಳ ನಡೆಯುವ ತನಕ ಪ್ರಯಾಗ್‌ರಾಜ್‌ಗೆ ಸಿಗಲಿದೆ. ಸಾವಿರಾರು ಕೋಟಿ ರೂಪಾಯಿ ಸಿದ್ಧತೆಗಾಗಿ ಖರ್ಷು ಮಾಡಲಾಗಿದೆ. ಯೋಗಿ ಆದಿತ್ಯನಾಥ್‌ ಹೇಳುವ ಪ್ರಕಾರ ಕುಂಭಮೇಳದಿಂದ 2 ಲಕ್ಷ ಕೋಟಿ ರೂಪಾಯಿಯ ವ್ಯವಹಾರ ದೇಶಾದ್ಯಂತ ನಡೆಯಲಿದೆ.

ಸಾರಿಗೆ ವ್ಯವಸ್ಥೆ

ಮಹಾಕುಂಭಮೇಳಕ್ಕಾಗಿ ವಿಶೇಷ ಸಾರಿಗೆ, ರೈಲು ಮತ್ತು ವಿಮಾನ ಯಾನ ಸೌಲಭ್ಯಗಳನ್ನು ಮಾಡಲಾಗಿದೆ. ರೈಲ್ವೆ ಇಲಾಖೆ ದೇಶದ ವಿವಿಧೆಡೆಗಳಿಂದ ವಿಶೇಷ ರೈಲುಗಳು ವ್ಯವಸ್ಥೆ ಮಾಡಿದೆ. ಅಂತೆಯೇ ಸಾಕಷ್ಟು ಬಸ್‌ ಮತ್ತಿತರ ವಾಹನಗಳು ಪ್ರಯಾಗ್‌ರಾಜ್‌ನತ್ತ ಹೋಗಲಿವೆ. ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳಿಂದಲೇ 7,550ಕ್ಕೂ ಹೆಚ್ಚು ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದ್ದು ಇದರ ಜೊತೆಗೆ ಪ್ರಯಾಗ್‌ರಾಜ್ ವಿಮಾನ ನಿಲ್ದಾಣದಿಂದ ಸಂಗಮ ಕ್ಷೇತ್ರಕ್ಕೆ 550ಕ್ಕೂ ಹೆಚ್ಚು ಷಟಲ್ ಬಸ್ ವ್ಯವಸ್ಥೆ ಮಾಡಲಾಗಿದೆ. ಸಂಚಾರ ವ್ಯವಸ್ಥೆ ನಿರಂತರವಾಗಿ ನಡೆಯಲಿದೆ. ಪ್ರಯಾಗರಾಜ್ ರೈಲು ನಿಲ್ದಾಣದಿಂದ ಕುಂಭಮೇಳ ಕಾರ್ಯಕ್ರಮಕ್ಕೆ ತಲುಪಲು ಆಟೋ-ರಿಕ್ಷಾಗಳು, ಬಸ್‌ಗಳು ಮತ್ತು ಟ್ಯಾಕ್ಸಿಗಳು ಸೇರಿದಂತೆ ಹಲವಾರು ಸಾರಿಗೆ ಸೌಲಭ್ಯಗಳ ವ್ಯವಸ್ಥೆ ಮಾಡಲಾಗಿದೆ.

ವಸತಿ ಸೌಲಭ್ಯ

ಮಹಾಕುಂಭಮೇಳ ನಡೆಯುವ ಸ್ಥಳದ ಸುತ್ತಮುತ್ತಲಿನ ಪ್ರದೇಶದಲ್ಲಿ ಭಕ್ತರು ಉಳಿದುಕೊಳ್ಳಲು ಸುಮಾರು 1.6 ಲಕ್ಷ ತಾತ್ಕಾಲಿಕ ಟೆಂಟ್‌ಗಳನ್ನು ಟೆಂಟ್‌ಗಳನ್ನು ನಿರ್ಮಿಸಲಾಗಿದೆ. ಇದರ ಜೊತೆಗೆ ಹಿಂದೆ ಋಷಿಮುನಿಗಳು ವಾಸಿಸುತ್ತಿದ್ದ ಮಾದರಿಯಲ್ಲೀ ಬರೀ ಹುಲ್ಲು ಬಳಸಿ ಪರ್ಣಕುಟೀರಗಳನ್ನು ನಿರ್ಮಾಣ ಮಾಡಲಾಗಿದೆ.
ಮಹಾಕುಂಭಮೇಳ ನಡೆಯುವ 4 ಸಾವಿರ ಎಕರೆಗೂ ಹೆಚ್ಚು ಪ್ರದೇಶದಲ್ಲಿ 67,000 ಎಲ್ಇಡಿ ಮತ್ತು 2000 ಸೋಲಾರ್ ಹೈಬ್ರಿಡ್ ಬೀದಿದೀಪಗಳನ್ನು ಅಳವಡಿಸಲಾಗಿದೆ. ಕೋಟ್ಯಂತರ ಭಕ್ತರ ಸುಗಮ ಮತ್ತು ಸುರಕ್ಷಿತ ಓಡಾಟಕ್ಕೆ ಮಹಾಕುಂಭಮೇಳ ನಡೆಯುವ ಸುತ್ತಮುತ್ತಲಿನ ಸ್ಥಳದಲ್ಲಿ 400 ಕಿ.ಮೀ.ಗೂ ಹೆಚ್ಚು ತಾತ್ಕಾಲಿಕ ರಸ್ತೆಗಳನ್ನು ಹಾಗೂ 14 ನೂತನ ಫ್ಲೈ ಓವರ್‌ಗಳನ್ನು ನಿರ್ಮಾಣ ಮಾಡಲಾಗಿದೆ.
30 ಪಾಂಟೂನ್ ಸೇತುವೆಗಳನ್ನು ನದಿಗೆ ನಿರ್ಮಿಸಲಾಗಿದೆ, 1850 ಎಕರೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. 1.5 ಲಕ್ಷ ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ.

ಡಿಜಿಟಲ್‌ ಸ್ಪರ್ಶ

ಇಡೀ ಕುಂಭಮೇಳಕ್ಕೆ ಡಿಜಿಟಲ್‌ ಸ್ಪರ್ಶ ನೀಡಿ ಅತ್ಯಾಧುನಿಕ ಸೌಲಭ್ಯ ಕಲ್ಪಿಸಲಾಗಿದೆ. ಕುಂಭಮೇಳಕ್ಕೆ ಆಗಮಿಸವ ಜನರ ಲೆಕ್ಕ ತಿಳಿಯುವ ವ್ಯವಸ್ಥೆಯನ್ನು ಡಿಜಿಟಲ್‌ ತಂತ್ರಜ್ಞಾನದ ನೆರವಿನಂದ ಮಾಡಲಾಗಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಹೊಂದಿರುವ 328 ಸಿಸಿಟಿವಿಗಳು ಸೇರಿ ಒಟ್ಟು 2600 ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಹೊಸ ತಂತ್ರಜ್ಞಾನ ಹೊಂದಿರುವ ನೀರಿನ ಒಳಗಡೆ ಚಲಿಸುವ ಡ್ರೋನ್‌ಗಳನ್ನು ಈ ಬಾರಿ ಬಳಸಲಾಗುತ್ತಿದೆ. ಮಹಾಕುಂಭಕ್ಕೆ ಬರುವ ಭಕ್ತರಿಗೆ ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ತಂತ್ರಜ್ಞಾನ ಹೊಂದಿರುವ ರಿಸ್ಟ್ ಬ್ಯಾಂಡ್‌ಗಳನ್ನು ಒದಗಿಸಲಾಗುತ್ತದೆ. ಇದರ ಸಹಾಯದಿಂದ ಮೇಳದಲ್ಲಿ ಯಾರಾದರೂ ಕಳೆದು ಹೋದಲ್ಲಿ ಅವರನ್ನು ಈ ತಂತ್ರಜ್ಞಾನದ ಮೂಲಕ ಟ್ರ್ಯಾಕ್ ಮಾಡಲಾಗುತ್ತದೆ.

ಸುರಕ್ಷೆ, ವೈದ್ಯಕೀಯ ಸೌಲಭ್ಯ, ಸ್ವಚ್ಛತೆ

ಮಹಾಕುಂಭಮೇಳದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಐಸಿಯು ಸೌಲಭ್ಯ ಹೊಂದಿರುವ ಆಂಬ್ಯುಲೆನ್ಸ್‌ಗಳನ್ನು ನದಿ ಮೇಲೆ ಆಯಕಟ್ಟಿನ ಸ್ಥಳದಲ್ಲಿ ನಿಲ್ಲಿಸಲಿದೆ. ಈ ಆಂಬ್ಯುಲೆನ್ಸ್‌ಗಳಿಗೆ ವೈದ್ಯಕೀಯ ಸಿಬ್ಬಂದಿ ಮತ್ತು ಹಾಸಿಗೆಗಳು ಜೊತೆಗೆ ಆಮ್ಲಜನಕ ಮತ್ತು ವೆಂಟಿಲೇಟರ್‌ಗಳ ಸೌಲಭ್ಯಗಳನ್ನು ಒದಗಿಸಲಾಗಿದೆ. ನದಿಯಲ್ಲಿ ಮುಳುಗೇಳುವವರ ಸುರಕ್ಷೆಯ ದೃಷ್ಟಿಯಿಂದ 800 ಪ್ರಾದೇಶಿಕ ಸಶಸ್ತ್ರ ಕಾನ್ಸ್‌ಟೇಬಲ್ ಹಾಗೂ 150 ಎಸ್‌ಡಿಆರ್‌ಎಫ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಸುಮಾರು 37 ಸಾವಿರ ಪೊಲೀಸರನ್ನು ಹಾಗೂ 14 ಸಾವಿರ ಹೋಮ್‌ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ. 10,200 ಸ್ವಚ್ಛತಾ ಕಾರ್ಮಿಕರನ್ನು ನಿಯೋಜಿಸಲಾಗಿದೆ.
ಮಹಾಕುಂಭಮೇಳ ನಡೆಯುವ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಪೌರಾಣಿಕ ಮಹತ್ವವನ್ನು ಸಾರುವ 30 ಕಮಾನುಗಳನ್ನು ನಿರ್ಮಾಣ ಮಾಡಲಾಗಿದ್ದು ಭಕ್ತರಿಗೆ ದೇವಲೋಕದ ದಿವ್ಯ ದರ್ಶನ ಅನುಭವವಾಗಲಿದೆ. ಸುಮಾರು 12 ಕಿ.ಮೀನಲ್ಲಿ ತಾತ್ಕಾಲಿಕ ಘಾಟ್‌ಗಳನ್ನು ನಿರ್ಮಾಣ ಮಾಡಲಾಗಿದೆ, 450 ಕಿ.ಮೀನಷ್ಟು ಪೈಪ್‌ಗಳ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.

ಪೌರಾಣಿಕ ಹಿನ್ನೆಲೆ

ಕುಂಭ ಎಂದರೆ ಮಡಕೆ ಎಂದು ಅರ್ಥ. ಸಮುದ್ರ ಮಂಥನದ ಸಮಯದಲ್ಲಿ ನಾಲ್ಕು ಹನಿ ಅಮೃತ ನಾಲ್ಕು ಪವಿತ್ರ ತೀರ್ಥ ಕ್ಷೇತ್ರದಲ್ಲಿ ಬಿದ್ದವು ಎಂಬ ಪ್ರತೀತಿ ಇದೆ. ಹರಿದ್ವಾರದಲ್ಲಿ ಹರಿಯುವ ಗಂಗಾ ನದಿ, ಗಂಗಾ, ಯಮುನಾ ಮತ್ತು ಸರಸ್ವತಿ ಸೇರುವ ಪ್ರಯಾಗರಾಜ್, ಮಧ್ಯಪ್ರದೇಶದ ಉಜ್ಜಯಿನಿಯ ಕ್ಷಿಪ್ರ ನದಿ ಮತ್ತು ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಗೋದಾವರಿ ನದಿ ಅಮೃತ ಕಲಶದಿಂದ ನಾಲ್ಕು ಹನಿ ಅಮೃತ ಬಿದ್ದ ಪವಿತ್ರ ಸ್ಥಳಗಳು. ಈ ಸ್ಥಳಗಳಲ್ಲಿ ಸರತಿಯಂತೆ ಕುಂಭಮೇಳ ನಡೆಯುತ್ತದೆ.

ನಾಲ್ಕು ರೀತಿಯ ಕುಂಭಮೇಳ

  1. ಕುಂಭಮೇಳ (4 ವರ್ಷಗಳಿಗೊಮ್ಮೆ ಹರಿದ್ವಾರ, ಪ್ರಯಾಗ್‌ರಾಜ್‌, ಉಜ್ಜಯಿನಿ ಹಾಗೂ ನಾಸಿಕ್)
  2. ಅರ್ಧ ಕುಂಭಮೇಳ (6 ವರ್ಷಗಳಿಗೊಮ್ಮೆ ಪ್ರಯಾಗ್‌ರಾಜ್‌ ಮತ್ತು ಹರಿದ್ವಾರ)
  3. ಪೂರ್ಣ ಕುಂಭಮೇಳ (12 ವರ್ಷಗಳಿಗೊಮ್ಮೆ ಪ್ರಯಾಗ್‌ರಾಜ್‌)
  4. ಮಹಾಕುಂಭಮೇಳ (144 ವರ್ಷಗಳಿಗೊಮ್ಮೆ ಪ್ರಯಾಗ್‌ರಾಜ್)
    ಈ ಬಾರಿ ಜ.13 ಪುಷ್ಯ ಪೂರ್ಣಿಮೆಯಂದು ಪ್ರಾರಂಭವಾಗಿ ಫೆ.26ರ ಮಹಾಶಿವರಾತ್ರಿಯಂದು ಮಹಾಕುಂಭಮೇಳ ಮುಕ್ತಾಯವಾಗಲಿದೆ.

ಚಿತ್ರವಿಚಿತ್ರ ನಾಗಸಾಧುಗಳು

ಕುಂಭಮೇಳದಲ್ಲಿ ನಾಗಾಸಾಧುಗಳಿಗೆ ಬಹಳ ಮಹತ್ವವಿದೆ. ಅವರ ಸ್ನಾನಕ್ಕೆ ಪ್ರತ್ಯೇಕ ದಿನಗಳಿವೆ. ಚಿತ್ರವಿಚಿತ್ರ ನಾಗಸಾಧುಗಳು ಕುಂಭಮೇಳದ ವಿಶೇಷ ಆಕರ್ಷಣೆಯೂ ಹೌದು. ನಿಗದಿತ ಪವಿತ್ರ ದಿನಗಳಲ್ಲಿ ನಗಾಸಾಧುಗಳ ಸ್ನಾನವಾಗುವುದಕ್ಕಿಂತ ಮುಂಚಿತವಾಗಿ ಬೇರೆಯವರು ನದಿಗೆ ಇಳಿಯಬಾರದು ಎಂಬಂಥ ನಿಯಮಗಳೂ ಇವೆ. ನಾಗಸಾಧುಗಳ ಸ್ನಾನ ಮಾಡುವ ದಿನಗಳನ್ನು ಶಾಹಿಸ್ನಾನ ಎನ್ನುತ್ತಾರೆ.
ನಾಗಸಾಧುಗಳ ಜೀವನ ನಿಗೂಢವಾಗಿರುತ್ತದೆ. ಲೌಕಿಕ ಭೋಗಗಳಿಂದ ದೂರವಿದ್ದು ದೇವರ ಆರಾಧನೆಯಲ್ಲಿ ಆಳವಾಗಿ ತಲ್ಲೀನರಾಗುವ ಈ ಸಾಧುಗಳಲ್ಲಿ 13 ಅಖಾಡಗಳಿವೆ (ಪಂಗಡ). ಅದರಲ್ಲಿ ಏಳು ಶೈವ (ಶಿವನ ಆರಾಧಕರು) ಮತ್ತು ತಲಾ ಮೂರು ವೈಷ್ಣವ(ವಿಷ್ಣುವಿನ ಆರಾಧಕರು) ಹಾಗೂ ಉದಾಸೀನ(ಸಿಖ್) ಅಖಾಡಗಳು. ಆಧ್ಯಾತ್ಮಿಕ ಮತ್ತು ರಕ್ಷಣಾತ್ಮಕ ಕೆಲಸಗಳೆರಡನ್ನೂ ಅಖಾಡದ ಸಾಧುಗಳು ನಿರ್ವಹಿಸುತ್ತಾರೆ.
ಸನಾತನ ಜೀವನ ವಿಧಾನವನ್ನು ಸಂರಕ್ಷಿಸಲು ಜಗದ್ಗುರು ಆದಿಶಂಕರಾಚಾರ್ಯರು ಎಂಟನೇ ಶತಮಾನದಲ್ಲಿ ಈ ಅಖಾಡಗಳನ್ನು ಸ್ಥಾಪಿಸಿದರು.

ಈ ಬಾರಿ ಶಾಹಿ ಸ್ನಾನ ನಡೆಯುವ ದಿನಗಳು ಹೀಗಿವೆ

ಜನವರಿ 13 (ಪುಷ್ಯ ಪೂರ್ಣಿಮೆಯ ಸ್ನಾನ)
ಜನವರಿ 15 (ಮಕರ ಸಂಕ್ರಾಂತಿ ಸ್ನಾನ)
ಜನವರಿ 29 (ಮೌನಿ ಅಮಾವಾಸ್ಯೆ ಸ್ನಾನ)
ಫೆಬ್ರುವರಿ 3 (ಬಸಂತ್‌ ಪಂಚಮಿ ಸ್ನಾನ)
ಫೆಬ್ರುವರಿ 12 (ಮಾಘ ಹುಣ್ಣಿಮೆ ಸ್ನಾನ)
ಫೆಬ್ರುವರಿ 26 (ಮಹಾಶಿವರಾತ್ರಿ ಸ್ನಾನ)

45 ಕೋಟಿ ಜನರು ಭಾಗವಹಿಸುವ ನಿರೀಕ್ಷೆ

ಈ ಬಾರಿಯ ಮಹಾಕುಂಭಮೇಳದಲ್ಲಿ ಸುಮಾರು 45 ಕೋಟಿಗೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ. ಈ ಮಟ್ಟಕ್ಕೆ ತಯಾರಿಯನ್ನೂ ಮಾಡಿಕೊಳ್ಳಲಾಗಿದೆ. ಈ ಅದ್ಭುತವಾದ ಕಾರ್ಯಕ್ರಮವನ್ನು ಲೈವ್ ಪ್ರಸಾರ ಮಾಡಲು ಅಮೆರಿಕ, ಆಫ್ರಿಕ ಹಾಗೂ ಆಸ್ಟ್ರೇಲಿಯಾ ಸೇರಿದಂತೆ 82 ದೇಶಗಳು ಕೇಂದ್ರ ಸರ್ಕಾರದಿಂದ ಅನುಮತಿ ಪಡೆಯಲು ಅರ್ಜಿ ಸಲ್ಲಿಕೆ ಮಾಡಿವೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top