ಜ.25ರವರೆಗೆ ರಾಜ್ಯಾದ್ಯಂತ ಬಿಜೆಪಿಯಿಂದ ವಿವಿಧ ಹಂತಗಳಲ್ಲಿ ಅಭಿಯಾನ
ಬೆಂಗಳೂರು: ಕಾಂಗ್ರೆಸ್‌ನ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್ ಸಮಾವೇಶಕ್ಕೆ ಪ್ರತಿಯಾಗಿ ಬಿಜೆಪಿ ಭೀಮ ಸಮಗಮ ಸಭಿಯಾನ ನಡೆಸಲಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನದ ಕಾರಣ ಅರ್ಧಕ್ಕೆ ನಿಂತಿದ್ದ ಬೆಳಗಾವಿಯ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್ ಸಮಾವೇಶ 21ರಂದು ನಡೆಸಲು ತೀರ್ಮಾನಿಸಲಾಗಿದೆ. ಇದಕ್ಕೆ ತಿರುಗೇಟು ನೀಡುವ ಸಲುವಾಗಿ ಬಿಜೆಪಿ ಭೀಮ ಸಂಗಮ ಅಭಿಯಾನ ಆರಂಭಿಸಲು ಚಿಂತನೆ ನಡೆಸಿದೆ.
ಬಿಜೆಪಿ ಕಾರ್ಯಾಲಯದಲ್ಲಿ ನಡೆದ ‘ಸಂವಿಧಾನ ಸನ್ಮಾನ ದಿನ, ನಮ್ಮ ಸಂವಿಧಾನ– ನಮ್ಮ ಹೆಮ್ಮೆ’ ಅಭಿಯಾನ ಕುರಿತ ಪಕ್ಷದ ಶಾಸಕರು, ಸಂಸದರ ಸಮಾಲೋಚನಾ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಜ.25 ರವರೆಗೆ ರಾಜ್ಯಮಟ್ಟದಿಂದ ಬೂತ್ ಮಟ್ಟದವರೆಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಭೀಮ ಸಂಗಮ ನಡೆಸಲು ಹೆಚ್ಚಿನ ಒತ್ತು ನೀಡಬೇಕು. ನಾವು ಯಾವಾಗ ಮತ್ತು ಯಾವ ಕಾರಣಕ್ಕೆ ಸಂವಿಧಾನ ತಿದ್ದುಪಡಿ ಮಾಡಿದ್ದೆವು. ಕಾಂಗ್ರೆಸ್ ಯಾವಾಗ ಮತ್ತು ಯಾವ ಕಾರಣಕ್ಕೆ ತಿದ್ದುಪಡಿ ಮಾಡಿತ್ತು ಎಂಬುದನ್ನು ದಾಖಲೆ ಸಮೇತ ವಿವರಿಸಬೇಕು. ಜ. 25ರಂದು ಪ್ರತಿ ಮತಗಟ್ಟೆಯಲ್ಲಿ 30 ರಿಂದ 40 ಜನರನ್ನು ಸೇರಿಸಿ ಅಂಬೇಡ್ಕರ್ ಭಾವಚಿತ್ರ ಮತ್ತು ಸಂವಿಧಾನದ ಪ್ರತಿಗೆ ಪುಷ್ಪ ಅರ್ಪಿಸಿ ಸಂವಿಧಾನದ ಪೀಠಿಕೆ ಓದಬೇಕು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸಲಹೆ ನೀಡಿದ್ದಾರೆ.
ಪ್ರತಿಯೊಬ್ಬ ಶಾಸಕ, ಮಾಜಿ ಶಾಸಕ, ಸಂಸದ, ಮಾಜಿ ಸಂಸದರು ಸೇರಿ ತಮ್ಮ ಮನೆಗೆ ಕನಿಷ್ಠ 50 ದಲಿತ ಕುಟುಂಬಗಳನ್ನು ಕರೆಸಿ, ಊಟೋಪಚಾರ ಮಾಡಬೇಕು. ಪ್ರತಿ ಕ್ಷೇತ್ರದಲ್ಲಿ ಶಾಸಕರು, ಸಂಸದರು ಇದನ್ನು ನಡೆಸಬೇಕು. ಇದರ ಜತೆಗೆ ಸಂವಿಧಾನದ ಮಹತ್ವ ತಿಳಿಸುವುದು ಮತ್ತು ಯಾರು ಏನೇನು ಮಾಡಿದರು ಎಂಬುದರ ಬಗ್ಗೆ ಅರಿವು ಮೂಡಿಸಬೇಕು. ಕಾಂಗ್ರೆಸ್‌ನ ನಯವಂಚಕತನವನ್ನೂ ವಿವರಿಸಬೇಕು. ಪ್ರತಿ ವಿಧಾನಸಭಾ ಕ್ಷೇತ್ರ, ಮಂಡಲ ವ್ಯಾಪ್ತಿಯಲ್ಲಿ ಶಾಸಕರಿಂದ ಬಹಿರಂಗ ಸಮ್ಮೇಳನವನ್ನು ಸಹ ಆಯೋಜಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.