ನಕ್ಸಲರು ಬಳಸುತ್ತಿದ್ದ ಎಕೆ 47, ಮಷಿನ್ ಗನ್ ಅರಣ್ಯದೊಳಗೆ ಬಚ್ಚಿಟ್ಟಿರುವ ಶಂಕೆ
ಬೆಂಗಳೂರು: ಮುಖ್ಯಮಂತ್ರಿ ಸಮ್ಮುಖದಲ್ಲಿ ಶರಣಾದ ನಕ್ಸಲರು ಆಧುನಿಕ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದ್ದರು. ಆದರೆ ಇನ್ನೂ ಆ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿಲ್ಲ. ಒಪ್ಪಿಸುವ ಪ್ರತಿ ಶಸ್ತ್ರಾಸ್ತ್ರಕ್ಕೆ ಪರಿಹಾರ ರೂಪದಲ್ಲಿ ಹಣ ಕೊಡುವುದಾಗಿ ಸರಕಾರ ಪ್ಯಾಕೇಜ್ನಲ್ಲಿ ಘೋಷಿಸಿದೆ. ಹೀಗಾಗಿ ನಕ್ಸಲರ ಶಸ್ತ್ರಾಸ್ತ್ರಗಳು ಎಲ್ಲಿವೆ ಎಂಬ ಕುತೂಹಲ ಇದೆ. ಆಧುನಿಕ ಶಸ್ತ್ರಾಸ್ತ್ರಗಳನ್ನು ನಕ್ಸಲರು ಕಾಡಿನ ರಹಸ್ಯ ಸ್ಥಳದಲ್ಲಿ ಅಡಗಿಸಿಟ್ಟಿರುವ ಶಂಕೆ ವ್ಯಕ್ತವಾಗಿದೆ.
ಶರಣಾದ ಯಾವೊಬ್ಬ ನಕ್ಸಲ್ ಕೂಡ ಆಯುಧಗಳನ್ನು ಪೊಲೀಸರಿಗೆ ನೀಡಿಲ್ಲ. ಪ್ರಸ್ತುತ ಜೈಲಿಲ್ಲಿರುವ ನಕ್ಸಲರನ್ನು ಮುಂದಿನ ವಾರ ಪೊಲೀಸರು ತನಿಖೆಗಾಗಿ ವಶಕ್ಕೆ ಪಡೆಯಲಿದ್ದು, ಬಳಿಕ ಅಡಗಿಸಿಟ್ಟ ಶಸ್ತ್ರಾಸ್ತ್ರಗಳ ಬಗ್ಗೆ ವಿಚಾರಣೆ ನಡೆಸುವ ಸಾಧ್ಯತೆಯಿದೆ. .
ಪೊಲೀಸರು 6 ಮಂದಿ ನಕ್ಸಲರನ್ನು ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸುವ ಮೊದಲು ಶಸ್ತ್ರಾಸ್ತ್ರಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಕೆಲವರು ಅರಣ್ಯದ ರಹಸ್ಯ ಅಡಗಿಸಿ ಇಟ್ಟಿರುವುದಾಗಿ ತಿಳಿಸಿದ್ದಾರೆ. ಈ ಸ್ಥಳಗಳ ಮಾಹಿತಿ ಪೊಲೀಸರಿಗೆ ಇಲ್ಲ. ಹೀಗಾಗಿ ಪೊಲೀಸರು ಬಾಡಿ ವಾರಂಟ್ ಪಡೆದು ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ ಬಳಿಕ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಿದ್ದಾರೆ ಎನ್ನಲಾಗಿದೆ.
ಎಕೆ 47, ಮಷಿನ್ ಗನ್ಗಳನ್ನು ನಕ್ಸಲರು ಬಳಸುತ್ತಿದ್ದರು. ಶರಣಾಗಲು ಹೋಗುವ ಮುನ್ನ ಶಸ್ತ್ರಾಸ್ತ್ರ ಕಾಡಿನಲ್ಲಿಯೇ ಬಿಟ್ಟಿದ್ದಾರೆ ಎನ್ನಲಾಗುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ.ಪರಮೇಶ್ವರ ಅವರ ಎದುರು ಬುಧವಾರ ರಾತ್ರಿ ಶರಣಾದ ನಕ್ಸಲರಾದ ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಟಿ.ಎನ್. ಜಿಶಾ, ಕೆ.ವಸಂತ್, ಮಾರೆಪ್ಪ ಅರೋಲಿ ಅವರನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈಗ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿಡಲಾಗಿದೆ.