ಮೂರು ಮಕ್ಕಳ ಶವಗಳನ್ನು ಮಂಚದೊಳಗಿಟ್ಟಿದ್ದ ಹಂತಕರು
ಲಖನೌ: ಉತ್ತರ ಪ್ರದೇಶದ ಮೇರಠ್ ಜಿಲ್ಲೆಯ ಲಿಸಡಿ ಗೇಟ್ ಎಂಬಲ್ಲಿ ಒಂದೇ ಕುಟುಂಬದ ಐದು ಮಂದಿ ಕೊಲೆಯಾದ ಸ್ಥಿತಿಯಲ್ಲಿ ಮನೆಯೊಳಗೆ ಪತ್ತೆಯಾಗಿದ್ದಾರೆ. ತಂದೆ, ತಾಯಿ ಮತ್ತು ಮೂರು ಮಕ್ಕಳನ್ನು ಕೊಲೆಮಾಡಿದ್ದಾರೆ. ತಂದೆ, ತಾಯಿ ಶವ ನೆಲದಲ್ಲಿ ಬಿದ್ದಿದ್ದರೆ ಮಕ್ಕಳ ಶವಗಳು ಮಂಚದೊಳಗಿನ ಬಾಕ್ಸ್ನಲ್ಲಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಯಾದವರನ್ನು ಮೊಯಿನ್, ಅವರ ಹೆಂಡತಿ ಅಸ್ಮಾ ಮಕ್ಕಳಾದ ಅಫ್ಸಾ (8), ಅಜೀಜ (4) ಮತ್ತು ಅದಿಬ(1) ಎಂದು ಗುರುತಿಸಲಾಗಿದೆ. ಕೆಲದಿನಗಳಿಂದ ಮನೆಯವರು ಕಾಣಿಸದ ಹಿನ್ನೆಲೆಯಲ್ಲಿ ನೆರೆಹೊರೆಯವರು ಪೊಲೀಸರಿಗೆ ವಿಷಯ ತಿಳಿಸಿದ್ದರು. ಮನೆಗೆ ಹೊರಗಿನಿಂದ ಬೀಗ ಹಾಕಲಾಗಿತ್ತು. ಪೊಲೀಸರು ಛಾವಣಿ ಮೂಲಕ ಒಳಗಿಳಿದು ನೋಡಿದಾಗ ಶವಗಳು ಕಂಡುಬಂದಿವೆ. ಎಲ್ಲರನ್ನೂ ತಲೆಗೆ ಬಲವಾದ ಆಯುಧದಿಂದ ಹೊಡೆದು ಸಾಯಿಸಲಾಗಿದೆ. ಎಲ್ಲ ಶವಗಳ ತಲೆಯಲ್ಲಿ ಗಾಯದ ಗುರುತು ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೇಲ್ನೋಟಕ್ಕೆ ಯಾರೋ ತಿಳಿದವರೇ ಕೊಲೆ ಮಾಡಿರುವಂತೆ ಕಂಡುಬಂದಿದೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿರಬಹುದು ಎನ್ನಲಾಗಿದೆ. ಇಡೀ ಮನೆ ಚೆಲ್ಲಾಪಿಲ್ಲಿಯಾಗಿರುವ ಸ್ಥಿತಿಯಲ್ಲಿದ್ದು, ಕೊಲೆಯಾಗುವ ಮೊದಲು ಸಾಕಷ್ಟು ಹೋರಾಡಿದ ರೀತಿ ಕಾಣಿಸುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.