ಶರಣಾಗುವ ನಕ್ಸಲರಿಗೆ ಸಿಗಲಿದೆ ಸರಕಾರದ ಭರ್ಜರಿ ಪ್ಯಾಕೇಜ್‌

ನಕ್ಸಲರ ಪುನರ್‌ವಸತಿಗಾಗಿ ಲಕ್ಷಗಟ್ಟಲೆ ವ್ಯಯಿಸಲಿದೆ ಸರಕಾರ

ಬೆಂಗಳೂರು: ಆರು ನಕ್ಸಲರು ಇಂದು ಶಸ್ತ್ರತ್ಯಾಗ ಮಾಡಿ ಶರಣಾಗುವುದು ಬಹುತೇಕ ಖಚಿತವಾಗಿದ್ದು, ಶರಣಾಗತಿಗಾಗಿ ಚಿಕ್ಕಮಗಳೂರು ಪೊಲೀಸರು ಮತ್ತು ಜಿಲ್ಲಾಡಳಿತ ತಯಾರಿ ಮಾಡಿಕೊಂಡಿದೆ. ಎಲ್ಲವೂ ಯೋಜನೆ ಪ್ರಕಾರ ನಡೆದು ನಕ್ಸಲರು ಶರಣಾದರೆ ಅದು ರಾಜ್ಯದ ನಕ್ಸಲ್‌ ನಿಗ್ರಹ ಹೋರಾಟದ ಇತಿಹಾದಲ್ಲೇ ಒಂದು ಮೈಲುಗಲ್ಲು ಆಗಲಿದೆ.

ಶರಣಾಗುವ ನಕ್ಸಲರಿಗೆ ಸರಕಾರ ಏನೆಲ್ಲ ಸೌಲಭ್ಯ ಕೊಡಲಿದೆ ಎಂಬ ಕುತೂಹಲ ಇದೆ. ಶರಣಾಗಲು ಬಯಸಿರುವ ನಕ್ಸಲರು ಈಗಾಗಲೇ ತಮ್ಮ ಬೇಡಿಕೆಗಳನ್ನು ಸರಕಾರದ ಮುಂದೆ ಇಟ್ಟಿದ್ದಾರೆ. ಸರಕಾರ ಕೂಡ ನಕ್ಸಲ್‌ ಶರಣಾಗತಿ ಪ್ಯಾಕೇಜ್‌ ರೆಡಿ ಮಾಡಿದ್ದು, ಈ ಪ್ಯಾಕೇಜ್‌ ಪ್ರಕಾರ ನಕ್ಸಲರಿಗೆ ಹಲವು ಲಕ್ಷ ರೂಪಾಯಿಯ ನೆರವು ಸಿಗಲಿದೆ.































 
 

ಪ್ಯಾಕೇಜನ್ನು ಎ, ಬಿ, ಸಿ ಕೆಟಗರಿ ಎಂದು ವಿಭಜಿಸಲಾಗಿದೆ. ನಕ್ಸಲರ ಸ್ಥಾನಮಾನಗಳ ಆಧಾರದಲ್ಲಿ ಈ ಪ್ಯಾಕೇಜ್‌ ಸಿಗಲಿದೆ. ಮೂಲತಃ ರಾಜ್ಯದ ನಕ್ಸಲರನ್ನು ಎ ಕ್ಯಾಟಗರಿ ಅಡಿಯಲ್ಲಿ ತರಲಾಗಿದೆ. ಈ ನಕ್ಸಲರು ನಕ್ಸಲ್‌ ಹೋರಾಟದಲ್ಲಿ ಈಗಲೂ ಇದ್ದು, ಕೇಸ್‌ಗಳು ಇದ್ದರೆ ಅಂತಹವರಿಗೆ ಎ ಕೆಟಗರಿ ಅಡಿಯಲ್ಲಿ 7.50 ಲಕ್ಷ ರೂ. ನೀಡಲಾಗುತ್ತದೆ.

ಹೊರರಾಜ್ಯದ ನಕ್ಸಲರನ್ನು ಬಿ ಕ್ಯಾಟಗರಿ ಅಡಿ ತರಲಾಗಿದೆ. ಇವರು ಶಸ್ತ್ರಸಜ್ಜಿತ ನಕ್ಸಲ್ ಗುಂಪಿನ ಸದಸ್ಯರಾಗಿದ್ದು, ಒಂದಕ್ಕಿಂತ ಹೆಚ್ಚು ಪ್ರಕರಣ ಇದ್ದರೆ 4 ಲಕ್ಷ ರೂ. ನೀಡಲಾಗುತ್ತದೆ.
ಎಡಪಂಥೀಯ ಭಯೋತ್ಪಾದನಾ ಚಟುವಟಿಕೆ ಬೆಂಬಲಿಸುವ ನಕ್ಸಲರ ಸಂಪರ್ಕ ಹೊಂದಿದ್ದರೆ ಅವರನ್ನು ಸಿ ಕ್ಯಾಟಗರಿಯಡಿಯಲ್ಲಿ ತರಲಾಗಿದ್ದು, ಪ್ರಕರಣಗಳು ಇದ್ದರೆ ಅಂತಹವರಿಗೆ 2 ಲಕ್ಷ ರೂ.ಸರ್ಕಾರ ನೀಡುತ್ತದೆ. ನಕ್ಸಲರು ಒಟ್ಟು ಮೂರು ಕಂತುಗಳಲ್ಲಿ ಈ ಪರಿಹಾರದ ಹಣ ಪಡೆಯುತ್ತಾರೆ.

ಆಯುಧಗಳನ್ನು ಹಾಜರುಪಡಿಸಿದರೆ ಕೆಟಗರಿ ಹಾಗೂ ಆಯುಧಗಳ ಮೇಲೆ ಹಣ ನೀಡಲಾಗುತ್ತದೆ. ಶರಣಾದ ನಕ್ಸಲರ ವ್ಯಾಪಾರ, ವೃತ್ತಿಗೆ ಸರ್ಕಾರ ಸಹಕಾರ ನೀಡುತ್ತದೆ. ನಕ್ಸಲರು ತರಬೇತಿ ಸಂಸ್ಥೆಗೆ ಸೇರಿದ ಬಳಿಕ ವರ್ಷದವರೆಗೆ 5,000 ರೂ. ನೀಡಲಾಗುವುದು. ಇಷ್ಟು ಮಾತ್ರವಲ್ಲದೆ ಶರಣಾಗುವ ನಕ್ಸಲರಿಗೆ ಸರ್ಕಾರದ ಎಲ್ಲ ನಾಗರಿಕ ಸೌಲಭ್ಯಗಳು ಸಿಗಲಿವೆ.

ವಿಕ್ರಂ ಗೌಡ ಎನ್‌ಕೌಂಟರ್ ಪ್ರಕರಣದ ಬಳಿಕ ತಲೆಮರೆಸಿಕೊಂಡಿದ್ದ 6 ಮಂದಿ ನಕ್ಸಲರು ಶಸ್ತ್ರತ್ಯಾಗ ಮಾಡಲು ನಿರ್ಧರಿಸಿದ್ದಾರೆ. ಶರಣಾಗತಿ ಸಮಿತಿ ಮತ್ತು ಶಾಂತಿಗಾಗಿ ನಾಗರಿಕ ಸಮಿತಿ ಶರಣಾಗತಿಯ ಮಧ್ಯಸ್ಥಿಕೆ ವಹಿಸಿದ್ದು, ಸತತ ಪ್ರಯತ್ನದ ಅಂಗವಾಗಿ ಇಂದು ನಕ್ಸಲರು ಶರಣಾಗಲಿದ್ದಾರೆ.

ಮುಂಡುಗಾರು ಲತಾ, ವನಜಾಕ್ಷಿ, ಸುಂದರಿ, ಮಾರಪ್ಪ ಅರೋಳಿ, ವಸಂತ್ ಹಾಗೂ ಎನ್.ಜೀಶಾ ಶರಣಾಗಲಿರುವ ನಕ್ಸಲರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top