ಪ್ರಕರಣಗಳ ಸಂಖ್ಯೆ 5ಕ್ಕೇರಿಕೆ; ಕೇಂದ್ರದಿಂದ ಮಾರ್ಗಸೂಚಿ ಪ್ರಕಟ
ಹೊಸದಿಲ್ಲಿ: ಚೀನದಲ್ಲಿ ಕಾಣಿಕೊಂಡು ಭಾರತವೂ ಸೇರಿದಂತೆ ಜಗತ್ತಿನ ಹಲವು ದೇಶಗಳಿಗೆ ಹರಡುತ್ತಿರುವ ಹ್ಯೂಮನ್ ಮೆಟಾನ್ಯೂಮೋ ವೈರಸ್ (ಎಚ್‌ಎಂಪಿಸಿ) ಹೊಸ ವೈರಸ್ ಅಲ್ಲ. 2001ರಲ್ಲೇ ಇದನ್ನು ಗುರುತಿಸಲಾಗಿತ್ತು ಮತ್ತು ಇದು ಅಪಾಯಕಾರಿಯಲ್ಲ ಎಂದು ಐಸಿಎಂಆರ್ ಹೇಳಿದೆ. 2001ರಲ್ಲಿ ಮೊದಲ ಬಾರಿಗೆ ಗುರುತಿಸಲಾದ ಈ ವೈರಸ್ ಹಲವು ವರ್ಷಗಳಿಂದ ಜಾಗತಿಕವಾಗಿ ಅಸ್ತಿತ್ವದಲ್ಲಿದೆ. ಹಾಗಾಗಿ ಜನರು ಆತಂಕ ಪಡಬೇಕಿಲ್ಲ. ಹಾಗಂತ ನಿರ್ಲಕ್ಷ್ಯವೂ ಮಾಡುವಂತಿಲ್ಲ ಎಂದು ಐಸಿಎಂಆರ್ ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ಮೂಡಿಸಿದೆ.
ಕರ್ನಾಟಕದಲ್ಲಿ ಇಬ್ಬರು ಸೋಂಕಿತರು ಸೇರಿದಂತೆ ದೇಶಾದ್ಯಂತ ಸೋಂಕಿತರ ಸಂಖ್ಯೆ 5ಕ್ಕೇರಿದೆ. ಹೀಗಾಗಿ ಕೇಂದ್ರ ಆರೋಗ್ಯ ಸಚಿವಾಲಯ ಈ ವೈರಸ್ ಬಗ್ಗೆ ಮಾರ್ಗಸೂಚಿ ಪ್ರಕಟಿಸಿದೆ. ಕರ್ನಾಟಕ, ಗುಜರಾತ್ ಮತ್ತು ತಮಿಳುನಾಡು, ಪಶ್ಚಿಮ ಬಂಗಾಲದಲ್ಲಿ ಎಚ್‌ಎಂಪಿವಿ ಸೋಂಕಿತರು ಪತ್ತೆಯಾಗಿದ್ದಾರೆ. ಮಕ್ಕಳಲ್ಲೇ ವೈರಸ್ ಕಾಣಿಸಿಕೊಂಡಿರುವುದು ಪೋಷಕರನ್ನು ಚಿಂತೆಗೀಡುಮಾಡಿದೆ.
ಕಫ, ಶೀತ, ಗಂಟಲು ನೋವು, ಜ್ವರ, ಸೀನು, ನ್ಯೂಮೋನಿಯಾ ಜ್ವರದ ಮಾದರಿಯ ಲಕ್ಷಣ ಸೋಂಕಿತರಲ್ಲಿ ಕಾಣಿಸಿಕೊಳ್ಳುತ್ತದೆ. ಸೋಂಕಿತ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಎಚ್‌ಎಂಪಿವಿಗೆ ಪ್ರತ್ಯೇಕ ಚಿಕಿತ್ಸೆ ಇಲ್ಲ. ವಿಶ್ರಾಂತಿ ತೆಗೆದುಕೊಳ್ಳುವುದು, ನೀರಿನಾಂಶ ಇರುವ ಆಹಾರ ಹಣ್ಣುಗಳ ಸೇವನೆ ಮಾಡಬೇಕು. ಸಾಮಾನ್ಯ ಶೀತ ಜ್ವರಕ್ಕೆ ನೀಡುವ ಚಿಕಿತ್ಸೆಯನ್ನೇ ನೀಡಲಾಗುತ್ತದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಕೇಂದ್ರದಿಂದ ಮುನ್ನೆಚ್ಚರಿಕೆ ಸೂಚನೆ
ಈ ನಡುವೆ ಕೇಂದ್ರ ಸರಕಾರ ಸಾರ್ವಜನಿಕರಿಗೆ ಎಚ್‌ಎಂಪಿವಿ ವೈರಸ್ ಕುರಿತು ಮುನ್ನೆಚ್ಚರಿಕೆ ಕೈಗೊಳ್ಳಲು ಕೆಲವು ಮಾರ್ಗಸೂಚಿಗಳನ್ನು ನೀಡಿದೆ. ನಾವು ಪರಿಸ್ಥಿತಿಯನ್ನು ಗಮನಿಸುತ್ತಿದ್ದೇವೆ ಮತ್ತು ನೆರೆಯ ದೇಶಗಳಲ್ಲಿ ವೈರಸ್‌ನ ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತಿದೆ ಎಂದು ಆರೋಗ್ಯ ಸಚಿವ ಜೆಪಿ ನಡ್ಡಾ ಹೇಳಿದ್ದಾರೆ. ನಾವು ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಿದ್ದೇವೆ, ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಇದು ಹೊಸ ವೈರಸ್ ಅಲ್ಲ, 2001ರಲ್ಲಿಯೇ ವೈರಸ್ ಅನ್ನು ಗುರುತಿಸಲಾಗಿದೆ ಎಂದು ಜೆ.ಪಿ ನಡ್ಡಾ ಧೈರ್ಯ ತುಂಬಿದ್ದಾರೆ.
ಚೀನದಲ್ಲಿ ಎಚ್‌ಎಂಪಿವಿ ಹಾವಳಿ ಶುರುವಾದ ಬಳಿಕ ಭಾರತದ ಮೊದಲ ಪ್ರಕರಣ ಬೆಂಗಳೂರಿನಲ್ಲಿ 3 ತಿಂಗಳ ಹೆಣ್ಣುಮಗುವಿನಲ್ಲಿ ಪತ್ತೆಯಾಗಿತ್ತು. ಬ್ರಾಂಕೋನ್ಯೂಮೋನಿಯಾದೊಂದಿಗೆ ಆಸ್ಪತ್ರೆಗೆ ದಾಖಲಾದ ನಂತರ ಎಚ್‌ಎಂಪಿವಿ ಎಂದು ದೃಢವಾಗಿದೆ. ಈ ಮಗು ಚಿಕಿತ್ಸೆ ಪಡೆದುಕೊಂಡು ಗುಣಮುಖವಾಗಿದೆ. ಎರಡನೇ ಪ್ರಕರಣವು 8 ತಿಂಗಳ ಗಂಡು ಶಿಶುವಿನಲ್ಲಿ ಪತ್ತೆಯಾಗಿದ್ದು ಪ್ರಸ್ತುತ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.
ಈ ಎರಡು ಶಿಶುಗಳಿಗೂ ಯಾವುದೇ ಅಂತಾರಾಷ್ಟ್ರೀಯ ಪ್ರಯಾಣದ ಇತಿಹಾಸವಿಲ್ಲ ಎಂದು ಐಸಿಎಂಆರ್ ದೃಢಪಡಿಸಿದೆ. ಇದರ ಬೆನ್ನಲ್ಲೇ ಗುಜರಾತ್‌ನಲ್ಲಿ ಮತ್ತೊಂದು ಪ್ರಕರಣ ವರದಿಯಾಗಿತ್ತು. ಗುಜರಾತ್‌ನಲ್ಲಿ ಇದು ಮೊದಲ ಎಚ್‌ಎಂಪಿವಿ ಪ್ರಕರಣವಾಗಿದೆ. 2 ವರ್ಷ ವಯಸ್ಸಿನ ಮಗುವಿನಲ್ಲಿ ವೈರಸ್ ಪತ್ತೆಯಾಗಿದೆ. ಮಗುವನ್ನು ಅಹಮದಾಬಾದ್‌ನ ಚಂದ್‌ಖೇಡಾ ಪ್ರದೇಶದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಂದೆಡೆ ಚೆನ್ನೈನಲ್ಲಿ ಇಬ್ಬರಲ್ಲಿ ಸೋಂಕು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.