ಬೆಂಗಳೂರಿನ ಇಬ್ಬರು ಮಕ್ಕಳಲ್ಲಿ ಸೋಂಕು ಪತ್ತೆ; ಮುನ್ನೆಚ್ಚರಿಕೆ ವಹಿಸಲು ಸೂಚನೆ
ಬೆಂಗಳೂರು: ಬೆಂಗಳೂರಿನ ಇಬ್ಬರು ಮಕ್ಕಳಲ್ಲಿ ಎಚ್‌ಎಂಪಿವಿ ವೈರಸ್ ಕಾಣಿಸಿಕೊಂಡಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ. ಎರಡೂ ಪ್ರಕರಣಗಳಲ್ಲಿ ಟ್ರಾವೆಲ್ ಹಿಸ್ಟರಿ ಇಲ್ಲ, ಹೀಗಾಗಿ ಮಕ್ಕಳಿಗೆ ಈ ವೈರಸ್ ಸೋಂಕು ಹೇಗೆ ಹರಡಿತು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಚೀನದಲ್ಲಿ ಹ್ಯೂಮನ್ ಮೆಟಾನ್ಯೂಮೋ ವೈರಸ್ (ಎಚ್‌ಎಂಪಿವಿ) ಭಾರಿ ಹಾವಳಿಯಿಟ್ಟಿದ್ದು, ಐದು ವರ್ಷ ಹಿಂದಿನ ಕೊರೊನ ಪರಿಸ್ಥಿತಿ ಮರುಕಳಿಸುವ ಭೀತಿ ತಲೆದೋರಿದೆ. ಈಗ ಭಾರತಕ್ಕೂ ಈ ವೈರಸ್ ಕಾಲಿಟ್ಟಿರುವುದು ಗಾಬರಿಗೆ ಕಾರಣವಾಗಿದೆ.
ಬೆಂಗಳೂರಿನ ಇಬ್ಬರು ಮಕ್ಕಳಲ್ಲಿ ಪತ್ತೆಯಾಗಿದ್ದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ದೃಢಪಡಿಸಿದೆ. 3 ತಿಂಗಳ ಮಗು ಚಿಕಿತ್ಸೆ ಪಡೆದು ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದರೆ 8 ತಿಂಗಳ ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಕೆ ಕಾಣುತ್ತಿದೆ. ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿದ ಐಸಿಎಂಆರ್, ದೇಶದಾದ್ಯಂತ ಉಸಿರಾಟದ ಕಾಯಿಲೆಗಳನ್ನು ಮೇಲ್ವಿಚಾರಣೆ ಮಾಡಲು ನಡೆಸುತ್ತಿರುವ ಪ್ರಯತ್ನಗಳ ಭಾಗವಾಗಿ ಎರಡೂ ಪ್ರಕರಣಗಳನ್ನು ಗುರುತಿಸಲಾಗಿದೆ. ಎಚ್‌ಎಂಪಿವಿ ಭಾರತ ಸೇರಿದಂತೆ ವಿಶ್ವಾದ್ಯಂತ ಹರಡಿದ್ದು, ಹಲವು ದೇಶಗಳಲ್ಲಿ ಸೋಂಕು ಪತ್ತೆಯಾಗಿದೆ ಎಂದು ತಿಳಿಸಿದೆ.
ಎಚ್‌ಎಂಪಿವಿ ಉಸಿರಾಟದ ಸಮಸ್ಯೆ ತಂದೊಡ್ಡುವ ವೈರಸ್ ಆಗಿದ್ದು, ಸಾಮಾನ್ಯವಾಗಿ ಶೀತವನ್ನು ಹೋಲುವ ಸೌಮ್ಯ ರೋಗ ಲಕ್ಷಣಗಳನ್ನು ಉಂಟುಮಾಡುತ್ತದೆ. ನಿರ್ದಿಷ್ಟವಾಗಿ ಮಕ್ಕಳು, ಹಿರಿಯರು, ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಂದಿಗೆ ಬೇಗ ಹರಡಬಹುದು ಎಂದು ತಿಳಿಸಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಮಗುವಿಗೆ ಯಾವುದೇ ಸಮಸ್ಯೆ ಇಲ್ಲ. ಹೆಚ್ಚಿನ ಪರೀಕ್ಷೆಗೆ ಮಕ್ಕಳ ಸ್ವಾಬ್ ಅನ್ನು ಪುಣೆ ಲ್ಯಾಬ್‌ಗೆ ಕಳುಹಿಸುವ ಬಗ್ಗೆ ಚರ್ಚೆಮಾಡುತ್ತೇವೆ. ಐಸಿಎಂಆರ್, ಕೇಂದ್ರ ಮಾಹಿತಿ ಪಡೆದು ಮುಂದೆ ಚರ್ಚೆ ಮಾಡುತ್ತೇವೆ. ಎಲ್ಲ ಕಡೆ ಟೆಸ್ಟ್ ಮಾಡಿದರೂ ಮಕ್ಕಳು, ವಯಸ್ಸಾದವರಲ್ಲೂ ಸಿಗಬಹುದು. ಹೀಗಾಗಿ ಎಚ್ಚರಿಕೆ ಅಗತ್ಯ, ಈ ಸಂಬಂಧ ಈಗಾಗಲೇ ಮಾರ್ಗಸೂಚಿ ಪ್ರಕಟಿಸಿದ್ದೇವೆ ಎಂದು ತಿಳಿಸಿದರು.