ವೇಗದೂತದಲ್ಲಿ ಮಂಗಳೂರು-ಬೆಂಗಳೂರು ನಡುವೆ 56 ರೂ. ಹೆಚ್ಚಳ
ಬೆಂಗಳೂರು : ವಿರೋಧ, ಟೀಕೆಗಳನ್ನೆಲ್ಲ ಲೆಕ್ಕಿಸದೆ ಕಾಂಗ್ರೆಸ್ ಸರಕಾರ ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ದರ ಏರಿಕೆ ಮಾಡಿದ್ದು, ಶನಿವಾರ ಮಧ್ಯರಾತ್ರಿಯಿಂದಲೇ ಹೊಸ ದರ ಜಾರಿಗೆ ಬಂದಿದೆ. ಪರಿಣಾಮವಾಗಿ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸುವ ಪುರುಷರು ಇಂದಿನಿಂದ ಹೆಚ್ಚುವರಿ ಹಣ ಖರ್ಚು ಮಾಡುವುದು ಅನಿವಾರ್ಯ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಬಸ್ ಪ್ರಯಾಣ ದರ ಶನಿವಾರ ಮಧ್ಯರಾತ್ರಿಯಿಂದಲೇ ಹೆಚ್ಚಳವಾಗಿದೆ. ಬಿಎಂಟಿಸಿಯ ಸಾಮಾನ್ಯ ಬಸ್ ದರ 1 ರೂ.ನಿಂದ 6 ರೂ.ವರೆಗೆ ಹೆಚ್ಚಳವಾಗಿದ್ದರೆ, ಉಳಿದ ಮೂರು ನಿಗಮಗಳ ಸಾಮಾನ್ಯ ಮತ್ತು ವೇಗದೂತ ಬಸ್‌ಗಳ ಪ್ರಯಾಣ ದರ 7 ರೂ. ನಿಂದ 115 ರೂ.ವರೆಗೆ ಏರಿಕೆಯಾಗಿದೆ. ಸಾಮಾನ್ಯ ಮತ್ತು ಡೀಲಕ್ಸ್ ಬಸ್‌ಗಳಿಗೆ ಹೋಲಿಸಿದರೆ ಎಸಿ ಬಸ್‌ಗಳ ಪ್ರಯಾಣ ದರ ಶೇ. 15ಕ್ಕಿಂತಲೂ ಹೆಚ್ಚು ಏರಿಕೆಯಾದಂತಾಗಿದೆ. ಇದು ಪ್ರಯಾಣಿಕರ ಪಾಲಿಗೆ ಇನ್ನಷ್ಟು ಆಘಾತಕಾರಿಯಾಗಿದೆ.
ವೇಗದೂತ ಬಸ್‌ಗಳಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಇದ್ದ 398 ರೂ. ದರ ಏರಿಕೆಯಿಂದಾಗಿ 454 ರೂ. ಆಗಿದೆ. ಹೀಗೆ ಎಲ್ಲ ರೂಟ್‌ಗಳಲ್ಲಿ ಟಿಕೆಟ್ ದರ ಏರಿಕೆ ಮಾಡಿ ಸಾಮಾನ್ಯ ಪ್ರಯಾಣಿಕರಿಗೆ ಬರೆ ಎಳೆಯಲಾಗಿದೆ.
ಬಿಎಂಟಿಸಿಯಲ್ಲಿ 10 ವರ್ಷಗಳ ನಂತರ ಹಾಗೂ ಕೆಎಸ್ಸಾರ್ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಮತ್ತು ಕೆಕೆಆರ್‌ಟಿಸಿಯಲ್ಲಿ ವರ್ಷಗಳ ನಂತರ ಬಸ್ ಪ್ರಯಾಣ ದರ ಹೆಚ್ಚಳವಾಗಿದೆ. ಶೇ.15ರಷ್ಟು ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು. ಅದಕ್ಕೆ ಸಂಬಂಧಿಸಿ ಶನಿವಾರ ರಾಜ್ಯ ಸರ್ಕಾರ ಅಧಿಕೃತ ಆದೇಶ ಮಾಡಿದೆ. ಅದರಂತೆ ನಾಲ್ಕೂ ನಿಗಮಗಳ ಪ್ರಯಾಣ ದರ ಶೇ.15ರಷ್ಟು ಹೆಚ್ಚಳ ಮಾಡಲಾಗಿದೆ. ಆದರೆ ಎಸಿ ಬಸ್ ದರ ಜಿಎಸ್ಟಿ ಹಾಗೂ ಟೋಲ್ ಶುಲ್ಕ ಸೇರಿ ಶೇ.15ಕ್ಕಿಂತ ಹೆಚ್ಚಿದೆ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಲ್ಲಿ ಉತ್ತಮ ಬಸ್ ಸೇವೆ ನೀಡುವುದು ಸೇರಿ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಕಳೆದ ಕೆಲ ತಿಂಗಳ ಹಿಂದೆಯೇ ಪ್ರಯಾಣ ದರ ಏರಿಕೆ ಪ್ರಸ್ತಾವ ಸಲ್ಲಿಕೆಯಾಗಿತ್ತು. ಕೆಎಸ್ಸಾರ್ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಮತ್ತು ಕೆಕೆಆರ್‌ಟಿಸಿ ಶೇ.33ರಷ್ಟು ಹಾಗೂ ಬಿಎಂಟಿಸಿ ಪ್ರಯಾಣ ದರ ಶೇ.42ರಷ್ಟು ಹೆಚ್ಚಳಕ್ಕೆ ಅನುಮತಿ ನೀಡಲು ಕೋರಿದ್ದವು. ಆದರೆ, ಅದರಲ್ಲಿ ಶೇ. 15ರಷ್ಟು ಬಸ್ ಪ್ರಯಾಣ ದರಕ್ಕೆ ಅನುಮತಿಸಲಾಗಿದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.