ಡಿಕೆಶಿ ವಿದೇಶದಲ್ಲಿರುವಾಗ ಆಪ್ತರೊಂದಿಗೆ ಗೂಢಾಲೋಚನೆ
ಬೆಂಗಳೂರು : ರಾಜ್ಯದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಗುಸುಗುಸು ಪ್ರಾರಂಭವಾಗಿದೆ. ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತನ್ನ ಆಪ್ತ ಸಚಿವರ ಜೊತೆ ನಡೆಸಿದ ಡಿನ್ನರ್ ಮೀಟಿಂಗ್‌ನಲ್ಲಿ ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಜೊತೆಗೆ ಸಂಪುಟ ಪುನರ್ ರಚನೆಯ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರಾಜಕೀಯದ ಪಡಸಾಲೆಯಲ್ಲಿ ಈ ಡಿನ್ನರ್ ಮೀಟಿಂಗ್ ಬಗ್ಗೆ ಬಿಸಿಬಿಸಿ ಚರ್ಚೆಯಾಗುತ್ತದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿದೇಶ ಪ್ರವಾಸದಲ್ಲಿರುವಾಗಲೇ ಸಿದ್ದರಾಮಯ್ಯ ಆಪ್ತರ ಜೊತೆ ಮೀಡಿಂಗ್ ನಡೆಸಿರುವುದು ಗಮನಾರ್ಹವಾಗಿದೆ.
ಡಿ.ಕೆ.ಶಿವಕುಮಾರ್ ಕುಟುಂಬ ಸದಸ್ಯರ ಜೊತೆ ವಿದೇಶದಲ್ಲಿ ಪ್ರವಾಸಕ್ಕೆ ಹೋಗಿದ್ದಾರೆ. ಈ ಹೊತ್ತಿನಲ್ಲೇ ಸಿದ್ದರಾಮಯ್ಯ ಬಣದಿಂದ ಡಿನ್ನರ್ ಮೀಟಿಂಗ್ ನಡೆದಿದೆ. ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಈ ಡಿನ್ನರ್ ಮೀಟಿಂಗ್ ನಡೆದಿದ್ದು, ಗೃಹ ಸಚಿವ ಪರಮೇಶ್ವರ್, ಸಚಿವ ಎಚ್.ಸಿ.ಮಹದೇವಪ್ಪ, ಕೆ.ಎನ್.ರಾಜಣ್ಣ ಪಾಲ್ಗೊಂಡಿದ್ದರು.
ಬಜೆಟ್‌ಗೂ ಮುನ್ನವೇ ಸಂಪುಟ ಪುನಾರಚನೆ ಆಗಬಹುದು ಎಂಬ ವಿಚಾರ ಚರ್ಚೆಗೆ ಬಂದಿದೆ. ಮುಂದಿನ ರಾಜಕೀಯ ಬದಲಾವಣೆಗಳ ಬಗ್ಗೆ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದಾರೆ. ಮೂಲಗಳು ತಿಳಿಸಿದ ಪ್ರಕಾರ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ಅಧಿಕಾರ ಹಂಚಿಕೆ ಒಪ್ಪಂದ ಮಾಡಿಕೊಂಡೇ ಮೊದಲ ಅವಧಿಗೆ ಸಿದ್ದರಾಮಯ್ಯನವರನ್ನು ಸಿಎಂ ಮಾಡಲಾಗಿದೆ. ಮೊದಲ ಎರಡು ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿ ಎಂದು ತೀರ್ಮಾನವಾಗಿತ್ತು. ಮುಂದಿನ ಮೇ ತಿಂಗಳಿಗಾಗುವಾಗ ಸಿದ್ದರಾಮಯ್ಯ ಅವಧಿ ಮುಗಿಯಲಿದ್ದು, ಹೀಗಾಗಿ ಮುಂದಿನ ನಡೆಯ ಬಗ್ಗೆ ಗೂಢಾಲೋಚನೆ ನಡೆಸಲು ಸಿದ್ದರಾಮಯ್ಯ ಆಪ್ತರ ಸಭೆ ಕರೆದಿದ್ದಾರೆ ಎನ್ನಲಾಗುತ್ತಿದೆ.
ಸಚಿವ ಸಂಪುಟ ಪುನಾರಚನೆ ಆಗಬೇಕಾ ಬೇಡ್ವಾ? ವೈಯಕ್ತಿಕವಾಗಿ ಸಂಪುಟ ಪುನಾರಚನೆ ಇಷ್ಟವಿಲ್ಲದಿದ್ದರೂ ಹೈಕಮಾಂಡ್ ಸೂಚನೆ ನೀಡಿದರೆ ಏನು ಎಂಬ ಬಗ್ಗೆ ಸಿಎಂ ಚರ್ಚೆ ನಡೆಸಿದ್ದಾರೆ. ಸಂಪುಟ ಪುನಾರಚನೆ ಅನಿವಾರ್ಯ ಆದರೆ ಹೇಗಿರಬೇಕು ಎಂಬುದರ ಬಗ್ಗೆಯೂ ಚರ್ಚೆ ನಡೆದಿದೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರ ಪ್ರಮುಖವಾಗುತ್ತೆ. ಹೈಕಮಾಂಡ್ ಬದಲಾವಣೆಗೆ ಒಪ್ಪಿದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್ ಹೇಗಿರಲಿದೆ ಎಂಬುದರ ಬಗ್ಗೆಯೂ ಡಿನ್ನರ್ ಮೀಟಿಂಗ್‌ನಲ್ಲಿ ಚರ್ಚೆ ಆಗಿದೆ ಎನ್ನಲಾಗಿದೆ.
ಅಧಿಕಾರ ಬಿಟ್ಟುಕೊಡುವುದು ಅನಿವಾರ್ಯವಾದರೆ ತನ್ನ ಆಪ್ತರು ಒಂದಷ್ಟು ಮಂದಿ ಸಂಪುಟದಲ್ಲಿ ಇರಬೇಕೆಂಬ ಉದ್ದೇಶದಿಂದ ಸಿದ್ದರಾಮಯ್ಯನವರ ಬಣ ಹಲವಾರು ಲೆಕ್ಕಾಚಾರದಲ್ಲಿ ತೊಡಗಿದೆ. ಹೀಗಾಗಿ ಸಂಪುಟ ಪುನಾರಚನೆಗೆ ಸಿದ್ದರಾಮಯ್ಯನವರೇ ಹೈಕಮಾಂಡ್ ಮುಂದೆ ಬೇಡಿಕೆ ಇಡಲಿದ್ದಾರೆ ಎನ್ನಲಾಗುತ್ತಿದೆ.