ಕೆಎಸ್‌ಆರ್‌ಟಿಸಿ ಟಿಕೆಟ್ ದರ ಶೇ.15ರಂತೆ ಹೆಚ್ಚಳ; ಜ.5ರಿಂದ ಜಾರಿ
ಬೆಂಗಳೂರು: ನಿರೀಕ್ಷೆಯಂತೆಯೇ ಹೊಸ ವರ್ಷದಲ್ಲಿ ಸರಕಾರ ಜನರಿಗೆ ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ದರ ಏರಿಕೆಯ ಬರೆ ಎಳೆದಿದೆ. ಮಹಿಳೆಯರಿಗೆ ಶಕ್ತಿ ಯೋಜನೆಯಲ್ಲಿ ಉಚಿತ ಪ್ರಯಾಣದ ಕೊಡುಗೆ ನೀಡಿ ಅದರ ಮೂರುಪಟ್ಟು ದರವನ್ನು ಪುರುಷರಿಂದ ವಸೂಲು ಮಾಡಲು ಮುಂದಾಗಿದೆ. ನಿನ್ನೆ ನಡೆದ ಸಂಪುಟ ಸಭೆಯಲ್ಲಿ ಬಸ್ ಟಿಕೆಟ್ ದರ ಶೇ.15 ಏರಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಈ ಮೊದಲು ಸಂಕ್ರಾಂತಿ ನಂತರ ಟಿಕೆಟ್ ದರ ಏರಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಸರಕಾರ ನಿನ್ನೆಯೇ ದರ ಏರಿಕೆ ನಿರ್ಧಾರ ಪ್ರಕಟಿಸಿದ್ದು ಜ.5ರಿಂದಲೇ ಹೊದ ದರಗಳು ಜಾರಿಗೆ ಬರಲಿವೆ.
ಶಕ್ತಿ ಯೋಜನೆ, ಡೀಸೆಲ್ ದರ ಏರಿಕೆ, ವೇತನ ಹೆಚ್ಚಳ ಇತ್ಯಾದಿ ಕಾರಣಗಳಿಂದ ನಷ್ಟಕ್ಕೆ ಸಿಲುಕಿರುವ ಸಾರಿಗೆ ಸಂಸ್ಥೆಯನ್ನು ಉಳಿಸಲು ಅನಿವಾರ್ಯವಾಗಿ ಬಸ್ ಟಿಕೆಟ್ ದರ ಶೇ.15 ಏರಿಕೆ ಮಾಡಲಾಗಿದೆ ಎಂದು ಸರಕಾರ ಸಮರ್ಥಿಸಿಕೊಂಡಿದೆ.
ಬಿಎಂಟಿಸಿ ಬಸ್ ದರ ಏರಿಕೆಯಾಗಿ 10 ವರ್ಷ ಆಗಿದ್ದರೆ ಕೆಎಸ್‌ಆರ್‌ಟಿಸಿ ದರ ಏರಿಕೆಯಾಗಿ 5 ವರ್ಷವಾಗಿದೆ. ಹೀಗಾಗಿ ಕ್ಯಾಬಿನೆಟ್ ಸಭೆಯ ಬಳಿಕ ದರ ಏರಿಕೆಯ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ. ಟಿಕೆಟ್ ದರ ಏರಿಕೆ ಅನಿವಾರ್ಯವಾಗಿ ಮಾಡಲೇಬೇಕಿತ್ತು. ಶೇ.15 ಟಿಕೆಟ್ ದರ ಏರಿಕೆ ಮಾಡಿದ್ದೇವೆ. ಬಿಜೆಪಿ ಸರಕಾರ ಸಾವಿರಾರು ಕೋಟಿ ಸಾಲ ಉಳಿಸಿ ಹೋಗಿತ್ತು. ಸಾರಿಗೆ ಸಂಸ್ಥೆಗಳು ಉಳಿಬೇಕು, ಹೀಗಾಗಿ ಟಿಕೆಟ್ ದರ ಏರಿಕೆ ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡಿದ್ದಾರೆ.
ನಾಲ್ಕು ನಿಗಮಗಳಿಂದ ಬೇರೆ ಬೇರೆ ದರ ಏರಿಕೆಗೆ ಪ್ರಸ್ತಾವನೆ ಬಂದಿದೆ. ಬಿಎಂಟಿಸಿಯಿಂದ ಶೇ.42, ಎನ್‌ಡಬ್ಲ್ಯೂ ಕೆಎಸ್‌ಆರ್‌ಟಿಸಿಯಿಂದ ಶೆ.25, ಕೆಎಸ್‌ಆರ್‌ಟಿಸಿ ಮತ್ತು ಕೆಕೆಆರ್‌ಟಿಸಿಯಿಂದ ಶೇ.28 ದರ ಏರಿಕೆಗೆ ಪ್ರಸ್ತಾವನೆ ಬಂದಿತ್ತು. ಎಲ್ಲವನ್ನೂ ಪರಿಶೀಲಿಸಿ ಸದ್ಯಕ್ಕೆ ಶೇ.15ರಂತೆ ಟಿಕೆಟ್ ದರ ಏರಿಕೆ ಮಾಡಿದ್ದೇವೆ ಎಂದಿದ್ದಾರೆ.
ಐದು ವರ್ಷದಿಂದ ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ದರ ಹೆಚ್ಚಿಸಿಲ್ಲ. ಹತ್ತು ವರ್ಷದಿಂದ ಬಿಎಂಟಿಸಿ ಪ್ರಯಾಣ ದರ ಹೆಚ್ಚಾಗಿಲ್ಲ. ಈ ಅವಧಿಯಲ್ಲಿ ಲೀಟರ್ ಡಿಸೇಲ್ ಬೆಲೆ 100 ರೂ. ಆಗಿದೆ. ತುಟ್ಟಿಭತ್ಯೆ ಹೆಚ್ಚಳವಾಗಿದೆ, ನಿರ್ವಹಣಾ ವೆಚ್ಚ ಏರಿಕೆಯಾಗಿದೆ. 4 ಸಾರಿಗೆ ನಿಗಮಗಳು ಭಾರೀ ನಷ್ಟದಲ್ಲಿದ್ದು 5,527 ಕೋಟಿ ರೂ. ಹಿಂಬಾಕಿ ಪಾವತಿಸಬೇಕಿದೆ. 6,330 ಕೋಟಿ ರೂ.ಹೆಚ್ಚುವರಿ ಹೊಣೆಗಾರಿಕೆ ಬಾಕಿಯಿದೆ. ಸದ್ಯ ಶೇ.15 ದರ ಹೆಚ್ಚಿಸಿದರೂ 1,800 ಕೋಟಿ ರೂ. ನಷ್ಟ ಆಗಲಿದೆ ಎಂದಿದ್ದಾರೆ.