ನೇತ್ರಾವತಿ ಉಪನದಿಯಲ್ಲಿ ಗೋಮಾಂಸ ತ್ಯಾಜ್ಯ : ಧಾರ್ಮಿಕ ಭಾವನೆ ಕೆಡಿಸುವ ಹುನ್ನಾರದ ಆರೋಪ

ಧರ್ಮಸ್ಥಳದಲ್ಲಿ ನೇತ್ರಾವತಿ ಸೇರುವ ಉಪನದಿಯನ್ನು ಮಲಿನಗೊಳಿಸಿದ ದುಷ್ಕರ್ಮಿಗಳು

ಧರ್ಮಸ್ಥಳ : ನೇತ್ರಾವತಿಯನ್ನು ಸೇರುವ ಮೃತ್ಯುಂಜಯ ನದಿಗೆ ಗೋಮಾಂಸ ತ್ಯಾಜ್ಯ ಎಸೆದಿರುವ ಕೃತ್ಯದ ಹಿಂದೆ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಹುನ್ನಾರ ಇದೆ ಎಂದು ಆರೋಪಿಸಿರುವ ಹಿಂದು ಸಂಘಟನೆಗಳು ಒಂದು ವಾರದೊಳಗೆ ಆರೋಪಿಗಳನ್ನು ಬಂಧಿಸದಿದ್ದರೆ ಪ್ರತಿಭಟನೆಯ ಎಚ್ಚರಿಕೆ ನೀಡಿವೆ.
ಧರ್ಮಸ್ಥಳದ ಪುಣ್ಯನದಿಯಾಗಿರುವ ನೇತ್ರಾವತಿಯನ್ನು ಗೋ ಹಂತಕರು ಗೋಮಾಂಸ ತ್ಯಾಜ್ಯ ಎಸೆದು ಮಲಿನ ಮಾಡಿದ್ದಾರೆ. ಇದರ ಹಿಂದೆ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಸ್ಪಷ್ಟ ಉದ್ದೇಶ ಇದೆ ಎಂದು ಬಜರಂಗ ದಳ ಗಂಭೀರ ಆರೋಪ ಮಾಡಿದೆ.

ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಅನ್ನಾರ್ ಎಂಬಲ್ಲಿ ನೇತ್ರಾವತಿಯನ್ನು ಸೇರುವ ಉಪನದಿ ಮೃತ್ಯುಂಜಯ ಹೊಳೆಗೆ ಕೆಲ ದಿನಗಳ ಹಿಂದೆ ಗೋಮಾಂಸದ ತ್ಯಾಜ್ಯಗಳನ್ನು ಮೂಟೆಕಟ್ಟಿ ತಂದು ಎಸೆಯಲಾಗಿದೆ. ಪಶ್ಚಿಮ ಘಟ್ಟದಿಂದ ಹರಿದು ಧರ್ಮಸ್ಥಳ ಬಳಿ ನೇತ್ರಾವತಿಯನ್ನು ಸೇರುವ ಮೃತ್ಯುಂಜಯ ಹೊಳೆಯಲ್ಲಿ ಮೂಟೆಗಟ್ಟಲೆ ಗೋವಿನ ರುಂಡ, ಮುಂಡ, ಚರ್ಮ ಎಸೆದಿರುವುದು ಕಂಡು ಬಂದಿದೆ.
ಮೃತ್ಯುಂಜಯ ನದಿಯಲ್ಲಿ ನಿತ್ಯ ಇಲ್ಲಿನ ಅಯ್ಯಪ್ಪ ವ್ರತಧಾರಿಗಳು ಸ್ನಾನ ಮಾಡುತ್ತಾರೆ. ಅಲ್ಲದೆ ಮೃತ್ಯುಂಜಯ ನದಿ ತುಸುದೂರ ಹರಿದು ನೇತ್ರಾವತಿ ನದಿಗೆ ಸೇರುತ್ತದೆ. ಧರ್ಮಸ್ಥಳದ ಸ್ನಾನಘಟ್ಟದಲ್ಲಿ ನಿತ್ಯ ಸಾವಿರಾರು ಭಕ್ತರು ನೇತ್ರಾವತಿಯಲ್ಲಿ ಪುಣ್ಯ ಸ್ನಾನ ಮಾಡುತ್ತಾರೆ. ಧರ್ಮಸ್ಥಳ ದೇಗುಲದ ಮಂಜುನಾಥ ಸ್ವಾಮಿಯ ನಿತ್ಯ ಅಭಿಷೇಕಕ್ಕೂ ನೇತ್ರಾವತಿಯ ನದಿಯ ನೀರನ್ನೇ ಬಳಸಲಾಗುತ್ತಿದೆ. ಅಯ್ಯಪ್ಪ ಭಕ್ತರು ಮತ್ತು ಧರ್ಮಸ್ಥಳದ ಪಾವಿತ್ರ್ಯ ಕೆಡಿಸುವ ಉದ್ದೇಶದಿಂದ ನದಿಗೆ ಗೋಮಾಂಸ ಎಸೆದಿದ್ದು, ಇದರಲ್ಲಿ ದೊಡ್ಡ ಕೋಮು ಷಡ್ಯಂತ್ರವಿದೆ ಎಂದು ಬಜರಂಗ ದಳ ಆರೋಪಿಸಿದೆ.































 
 

ಚಾರ್ಮಾಡಿ ಗ್ರಾಮದ ಅನ್ನಾರ್ ಬಳಿ ನದಿಯಲ್ಲಿ ಗೋವಿನ ರುಂಡ ಮುಂಡಗಳು ಪತ್ತೆಯಾಗಿರುವುದು ಈ ಪ್ರದೇಶದ ಹಲವು ಮನೆಗಳಲ್ಲಿ ಮತ್ತು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಗೋ ಹತ್ಯೆ ನಡೆಯುತ್ತಿರುವ ಬಗ್ಗೆ ಅನುಮಾನಗಳನ್ನು ಸೃಷ್ಟಿಸಿದೆ. ಹೀಗೆ ಗೋ ಹತ್ಯೆ ಮಾಡಿದ ಬಳಿಕ ಅವುಗಳ ಅವಶೇಷವನ್ನು ಮೂಟೆ ಕಟ್ಟಿ ನದಿಗೆ ಎಸೆಯಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ನೇತ್ರಾವತಿ ನದಿಯನ್ನು ಮಲಿನಗೊಳಿಸಿದವರನ್ನು ಒಂದು ವಾರದೊಳಗೆ ಬಂಧಿಸಬೇಕೆಂದು ಪೊಲೀಸರಿಗೆ ಗಡುವು ವಿಧಿಸಿದೆ. ಒಂದು ವೇಳೆ, ತಪ್ಪಿತಸ್ಥರ ಬಂಧನವಾಗದಿದ್ದಲ್ಲಿ ಜಿಲ್ಲೆಯ ಹಿಂದೂ ನಾಯಕರೆಲ್ಲ ಸೇರಿ ಉಗ್ರ ಹೋರಾಟ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದೆ.

ಮೃತ್ಯುಂಜಯ ನದಿಯಲ್ಲಿ ಗೋವಿನ ಮೃತದೇಹ ಮತ್ತು ಅವಶೇಷಗಳು ಪತ್ತೆ ಆಗಿರುವ ಬಗ್ಗೆ ಈ ಹಿಂದೆ ಕೆಲವು ಬಾರಿ ದೂರು ನೀಡಿದ್ದರೂ ಧರ್ಮಸ್ಥಳ ಪೊಲೀಸರು ಕ್ರಮ ಕೈಗೊಂಡಿರಲಿಲ್ಲ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ಇದೀಗ ಒಮ್ಮಿಂದೊಮ್ಮೆಲೆ 11 ಮೂಟೆಗೂ ಹೆಚ್ಚಿನ ಗೋಮಾಂಸ ತ್ಯಾಜ್ಯ ಪತ್ತೆ ಆಗಿರುವುದು ಸ್ಥಳೀಯರನ್ನು ಮತ್ತು ಧರ್ಮಸ್ಥಳದ ಭಕ್ತರನ್ನು ಆಘಾತಕ್ಕೆ ಈಡುಮಾಡಿದೆ

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top