ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಬರೆದಿಟ್ಟ ಪತ್ರದಲ್ಲಿದೆ ಸ್ಫೋಟಕ ಮಾಹಿತಿ
ಬೆಂಗಳೂರು : ಬೀದರ್ ಮೂಲದ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣದಲ್ಲಿ ತನ್ನ ಪಾತ್ರ ಇಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳುತ್ತಿದ್ದರೂ ಸಚಿನ್ ಪಾಂಚಾಲ್ ಬರೆದಿಟ್ಟಿದ್ದ ಆರು ಪುಟಗಳ ಡೆತ್‌ನೋಟ್‌ನಲ್ಲಿ ಹಲವು ಬಾರಿ ಪ್ರಿಯಾಂಕ್ ಖರ್ಗೆ ಹೆಸರು ಉಲ್ಲೇಖಿಸಲ್ಪಟ್ಟಿರುವುದು ಬೆಳಕಿಗೆ ಬಂದಿದೆ.
ಪ್ರಿಯಾಂಕ್ ಖರ್ಗೆಯ ಆಪ್ತ ರಾಜು ಕಪನೂರ್ (ಗುತ್ತಿಗೆದಾರನಿಗೆ ಹಣಕ್ಕಾಗಿ ಬೆದರಿಕೆ ಹಾಕಿದ್ದ ಆರೋಪ ಎದುರಿಸುತ್ತಿರುವ ವ್ಯಕ್ತಿ) ಈ ಪ್ರಕರಣದ ಪ್ರಮುಖ ಆರೋಪಿ ಎನ್ನುವುದನ್ನು ಡೆತ್‌ನೋಟ್ ಆಧಾರದಲ್ಲಿ ತೀರ್ಮಾನಿಸಲಾಗಿದೆ. ಆದರೆ ಪ್ರಿಯಾಂಕ್ ಖರ್ಗೆ ಸೂಚನೆ ಮೇರೆಗೆ ರಾಜು ಕಪನೂರ್ ಕಾರ್ಯನಿರ್ವಹಿಸುತ್ತಿದ್ದಾನೆ ಎಂದು ಸಚಿನ್ ಪಾಂಚಾಳ್ ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ಮೇರೆಗೆ ರಾಜು ಕಪನೂರ್ ಜತೆ ತಾನು ಮಾತುಕತೆ ನಡೆಸಿದ್ದೇನೆ. ಪ್ರಿಯಾಂಕ್ ಖರ್ಗೆ ದೂರವಾಣಿ ಮೂಲಕ ಕರೆ ಮಾಡಿ ಬೇರೊಬ್ಬ ಗುತ್ತಿಗೆದಾರನಿಗೆ ಟೆಂಡರ್ ನೀಡುವಂತೆ ಸೂಚನೆ ನೀಡಿದ್ದರು ಎಂದು ಬರೆದಿದ್ದಾರೆ.
ತಮ್ಮ ಸಾವಿಗೆ ರಾಜು ಕಪನೂರ್ ಮತ್ತು ಗ್ಯಾಂಗ್ ಕಾರಣ ಎಂದು ಹೇಳಿರುವ ಸಚಿನ್ ಪಂಚಾಳ್, ಹಲವು ವಿಚಾರಗಳನ್ನು ಉಲ್ಲೇಖಿಸಿದ್ದಾರೆ. ತಾನು ಸುಮಾರು ಎರಡು ವರ್ಷಗಳಿಂದ ಪ್ರಾಜೆಕ್ಟ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ತನ್ನ ಕಂಪನಿಯ ಎಂಡಿ ಮೂಲಕ ರಾಜು ಕಪನೂರ್ ಪರಿಚಯವಾಗಿತ್ತು ಎಂದು ಬರೆದಿದ್ದಾರೆ.
ಸುಮಾರು 12 ಕೋಟಿ ರೂಪಾಯಿಯ ಒಂದು ಟೆಂಡರ್ ಕರೆಯಲಾಗುತ್ತಿದ್ದು, ಅದನ್ನು ನಿಮಗೆ ಮಾಡಿಸಿ ಕೊಡುತ್ತೇನೆ ಎಂದು ರಾಜು ಕಪನೂರ್ ಭರವಸೆ ನೀಡಿದ್ದ. ಈ ಟೆಂಡರ್ ಮಾಡಿಕೊಡಬೇಕಿದ್ದರೆ ಶೇಕಡ 5ರಷ್ಟು ಕಮಿಷನ್ ನೀಡಬೇಕು. ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ ಮಾತನ್ನು ದಾಟುವುದಿಲ್ಲ ಎಂದು ಹೇಳಿದ್ದ. ಸುಮಾರು ಐದಾರು ಬಾರಿ ನಾವಿಬ್ಬರೂ ಜೊತೆಯಾಗಿ ಬೆಂಗಳೂರಿಗೆ ಹೋಗಿ ಸಚಿವರನ್ನು ಭೇಟಿಯಾಗಿದ್ದೇವೆ. ಆದರೂ ಸಚಿವರು ಮೊಬೈಲ್ ಫೋನ್ ಮೂಲಕ ಕರೆ ಮಾಡಿ, ಸಿಇ ಇಜಾಜ್ ಹುಸೇನ್ ಅವರಿಗೆ ಮಾಡಿಕೊಡು ಎಂದು ಹೇಳಿರುತ್ತಾರೆ. ಈ ಟೆಂಡರ್‌ಗೆ ಶೇ.5 ಕಮಿಷನ್ ಎಂದರೆ 60 ಲಕ್ಷ ರೂಪಾಯಿ ಆಗುತ್ತದೆ. ಇದಕ್ಕೆ ಕಪನೂರ್ ಬೇಡಿಕೆ ಇಟ್ಟಿದ್ದ. 10 ಲಕ್ಷ ರೂಪಾಯಿ ಮುಂಗಡ ಹಣವನ್ನು ಆತನಿಗೆ ನೀಡಿದ್ದೆವು. ಬಳಿಕ ಆತ 15 ಕೋಟಿ ರೂಪಾಯಿ ಮೊತ್ತದ ಬೇರೆ ಟೆಂಡರ್ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದ್ದ ಎಂಬ ಮಾಹಿತಿ ಸಚಿನ್ ಪಂಚಾಳ್ ಡೆತ್ನೋಟ್ನಲ್ಲಿದೆ.
ಈ ವಿಚಾರ ಇದೀಗ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಸಚಿನ್ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಾಗಲೇ ಆ ಬಗ್ಗೆ ಪ್ರತಿಕ್ರಿಯಿಸಿದ್ದ ಪ್ರಿಯಾಂಕ್ ಖರ್ಗೆ ಪ್ರಕರಣದ ಸ್ವತಂತ್ರ ತನಿಖೆ ಆಗಲಿ, ಸಿಐಡಿಗೆ ಒಪ್ಪಿಸಲಿ ಎಂದು ಹೇಳಿದ್ದರು. ಈಗ ಪ್ರಕರಣದ ತನಿಖೆಯ ಹೊಣೆಯನ್ನು ಸಿಐಡಿಗೆ ಒಪ್ಪಿಸಲಾಗಿದೆ.