2024ರ ಟಾಪ್ 26 ಮೆಗಾ ಸುದ್ದಿಗಳು

ಗತಿಸಿ ಹೋದ ವರ್ಷ ಬಿಟ್ಟುಹೋದದ್ದು ವಿವಾದಗಳನ್ನು, ನೋವುಗಳನ್ನು ಮತ್ತು ಒಂದಷ್ಟು ಸಂತಸದ ಕ್ಷಣಗಳನ್ನು…

2024ರ ವರ್ಷ ಇಂದು ರಾತ್ರಿ ಇತಿಹಾಸದ ಭಾಗವಾಗಿ ನೇಪಥ್ಯಕ್ಕೆ ಸರಿದು 2025ಕ್ಕೆ ದಾರಿ ಮಾಡಿಕೊಡುತ್ತಾ ಇದೆ. ಒಮ್ಮೆ ಹಿಂತಿರುಗಿ 2024ರ ಮಹತ್ವದ ಘಟನೆಗಳನ್ನು ಇಣುಕಿ ನೋಡುತ್ತಾ ಹೋದಾಗ ‘ಕಭಿ ಖುಷ್‌ ಕಭಿ ಗಮ್’ ಹಾಡು ನೆನಪಾಗುತ್ತದೆ. ಇಡೀ ವರ್ಷ ವಿವಾದಗಳು, ನೋವುಗಳು ಮತ್ತು ಒಂದಿಷ್ಟು ಸಂತಸಗಳು ಈ ವರ್ಷದಲ್ಲಿ ನಡೆದಿವೆ. ಅವುಗಳ ಒಂದು ಇಣುಕು ನೋಟ ಇಲ್ಲಿದೆ.

1) ದೋಮ್ಮರಾಜು ಗುಕೇಶ್ ಚೆಸ್ಸಿನಲ್ಲಿ ವಿಶ್ವ ಚಾಂಪಿಯನ್ ಪಟ್ಟ ಏರಿದ ಅತ್ಯಂತ ಕಿರಿಯ ಆಟಗಾರನಾಗಿ ದಾಖಲಾದರು. ವಿಶ್ವನಾಥನ್ ಆನಂದ್ ನಂತರ ಬೇರೆ ಯಾವ ಭಾರತೀಯನೂ ಏರದ ಎತ್ತರ ಇದು (ಡಿಸೆಂಬರ್ 12). ವರ್ಷದ ಕೊನೆಗೆ ಭಾರತದ ಕೊನೆರು ಹಂಪಿ ಮಹಿಳಾ ರಾಪಿಡ್ ಚೆಸ್ ಟೂರ್ನಿಯಲ್ಲಿ ವಿಶ್ವ ಚಾಂಪಿಯನ್ ಪಟ್ಟಕ್ಕೆ ಏರಿದ್ದು ಕೂಡ ರೋಮಾಂಚಕ ಸಂಗತಿ.































 
 

2) ರೋಹಿತ್ ಶರ್ಮ ನಾಯಕತ್ವದಲ್ಲಿ ಈ ವರ್ಷ ಭಾರತ T20 ವಿಶ್ವಕಪ್ ಎತ್ತಿತು. ದಕ್ಷಿಣ ಆಫ್ರಿಕಾವನ್ನು ಫೈನಲ್ ಪಂದ್ಯದಲ್ಲಿ ಮಣಿಸಿದ್ದು, ಅದಕ್ಕೆ ಸೂರ್ಯಕುಮಾರ್ ಯಾದವ್ ಹಿಡಿದ ಶತಮಾನದ ಕ್ಯಾಚ್ ಕಾರಣವಾದದ್ದು ಭಾರತಕ್ಕೆ ಬಹಳ ದೊಡ್ಡ ಪ್ರಾಪ್ತಿ (ಜೂನ್ 29).

3) ಅಯೋಧ್ಯೆಯ ರಾಮಲಲ್ಲಾ ಮಂದಿರದ ಲೋಕಾರ್ಪಣೆ ಭಾರತೀಯರು ಮರೆಯಲಾಗದ ಸುದ್ದಿ. ಅದರಲ್ಲಿಯೂ ಮೈಸೂರಿನ ಶಿಲ್ಪಿ ಯೋಗಿರಾಜ್ ಆ ಮೂರ್ತಿಯನ್ನು ಕೆತ್ತಿದ್ದು ನಮ್ಮ ಖುಷಿಯನ್ನು ಇಮ್ಮಡಿ ಮಾಡಿತ್ತು (ಜನವರಿ 22).

4) ಹೆಸರಾಯಿತು ಕರ್ನಾಟಕ, ಉಸಿರಾಯಿತು ಕನ್ನಡ. 1973ರಲ್ಲಿ ಆಗಿನ ಮೈಸೂರು ರಾಜ್ಯವನ್ನು ಮುಖ್ಯಮಂತ್ರಿ ದೇವರಾಜ ಅರಸ್ ಅವರು ಕರ್ನಾಟಕ ಎಂದು ನಾಮಕರಣ ಮಾಡಿದ್ದು, ಆ ಘಟನೆಗೆ ಈ ವರ್ಷ ನೂರು ತುಂಬಿದ್ದು, ಅದರ ನೆನಪಿಗೆ 100 ಜನ ಸಾಧಕರಿಗೆ ಸುವರ್ಣ ಮಹೋತ್ಸವ ಸನ್ಮಾನ ಮಾಡಿದ್ದು ಸ್ಮರಣೀಯ. ಕನ್ನಡಿಗರಿಗೆ ಎದೆ ಉಬ್ಬಿಸುವ ಘಟನೆ.

5) ಅಕ್ಟೋಬರ್ 9ರಂದು ಉದ್ಯಮಿ ರತನ್ ಟಾಟಾ ನಿರ್ಗಮನ. ನೂರಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ಉದ್ಯಮಗಳನ್ನು ವಿಸ್ತರಿಸಿದ್ದ, ಬಹಳ ದೊಡ್ಡ ದಾನಿಯಾಗಿದ್ದ, ಅಷ್ಟೇ ಸರಳವಾಗಿ ಬದುಕಿದ್ದ ರತನ್ ಟಾಟಾ ನಿಧನ ( 86 ವರ್ಷ) ಭಾರತೀಯರಿಗೆ ಅತಿದೊಡ್ಡ ಆಘಾತಕಾರಿ ಸುದ್ದಿ.

6) ಜೂನ್ ತಿಂಗಳಲ್ಲಿ ಲೋಕಸಭಾ ಚುನಾವಣೆಯ ಫಲಿತಾಂಶ ಬಂದು ಬಿಜೆಪಿ 240 ಸೀಟ್ ಗೆದ್ದದ್ದು, NDA 291 ಸೀಟ್ ಗೆದ್ದು ಅಧಿಕಾರಕ್ಕೆ ಏರಿದ್ದು ದೊಡ್ಡ ಸುದ್ದಿ. ಹಿಂದಿನ ಎರಡು ಅವಧಿಗೆ ಹೋಲಿಸಿದರೆ NDA ಕಡಿಮೆ ಸೀಟ್ ಪಡೆದರೆ, ಕಾಂಗ್ರೆಸ್ ಬೆಂಬಲಿತ INDIA ಒಕ್ಕೂಟ ತನ್ನ ಸಾಮರ್ಥ್ಯವನ್ನು ವೃದ್ಧಿಸಿಕೊಂಡದ್ದು ಬಹಳ ದೊಡ್ಡ ಸುದ್ದಿ.

7) ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಿ ಪ್ರಮಾಣ ಸ್ವೀಕಾರ ಮಾಡಿದ್ದು (ಜೂನ್ 9) ದೊಡ್ಡ ಸುದ್ದಿ. ಆದರೆ ಎರಡು ಪ್ರಾದೇಶಿಕ ನಾಯಕರ ಹಂಗಿನಲ್ಲಿ ಪ್ರಧಾನಿ ಮೋದಿ ಸರಕಾರ ರಚನೆ ಮಾಡಬೇಕಾಗಿ ಬಂದದ್ದು ರಾಜಕಾರಣದ ಕೌತುಕ.

8) ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ವತಂತ್ರ ಚುನಾವಣೆ ಈ ವರ್ಷ ನಡೆಯಿತು. ಆರ್ಟಿಕಲ್ 370 ಹಿಂದೆ ಪಡೆದ ನಂತರ ನಡೆದ ಮೊದಲ ಚುನಾವಣೆಯ ಬಗ್ಗೆ ದೇಶಾದ್ಯಂತ ತೀವ್ರ ಕುತೂಹಲವಿತ್ತು. ಚುನಾವಣೆ ಹೆಚ್ಚು ಕಡಿಮೆ ಶಾಂತಿಯುತವಾಗಿ ನಡೆದದ್ದು ಪ್ರಜಾಪ್ರಭುತ್ವದ ವಿಜಯ. ನ್ಯಾಶನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಅಲ್ಲಿ ಜೊತೆಯಾಗಿ ಅಧಿಕಾರ ಹಿಡಿದವು.

9) ಅಂಕೋಲಾ ಸಮೀಪದ ಶಿರೂರಿನಲ್ಲಿ ಭೀಕರವಾದ ಭೂಕುಸಿತ. ಹಲವು ಸಾವು-ನೋವುಗಳು. ಮಣ್ಣಿನ ಅಡಿ ಸೇರಿಹೋದ ಟ್ರಕ್ ಮತ್ತು ವ್ಯಕ್ತಿಗಳನ್ನು ಪಡೆಯಲು ಮಾಡಿದ ಸುದೀರ್ಘ ಹೋರಾಟವೇ ಒಂದು ಯಶೋಗಾಥೆ.

10) ಜುಲೈ 24ರ ರಾತ್ರಿ ವಯನಾಡು ಕಂಪಿಸಿತು. ವ್ಯಾಪಕವಾದ ಭೂಕುಸಿತದಲ್ಲಿ ಕೊಚ್ಚಿಹೋದದ್ದು ಸಾವಿರಾರು ಸಂತ್ರಸ್ತರು. 200ಕ್ಕಿಂತ ಹೆಚ್ಚು ಜನರು ಪ್ರಾಣ ಕಳೆದುಕೊಂಡ ಘಟನೆ ಅಪಾರವಾದ ನೋವನ್ನು ಬಿಟ್ಟುಹೋಯಿತು.

11) ಪ್ರಜ್ವಲ್ ರೇವಣ್ಣ ಎಂಬ ಮಾಜಿ ಸಂಸದ ಅತ್ಯಂತ ಅಮಾನವೀಯ ಆದ ಲೈಂಗಿಕ ಹಗರಣಗಳ ಹಿನ್ನೆಲೆಯಲ್ಲಿ ಅರೆಸ್ಟ್ ಆದದ್ದು, ಅವರ ಮತ್ತು ಗೆಳೆಯರ ಮೊಬೈಲ್ ಫೋನಿನಲ್ಲಿ 2900ಕ್ಕಿಂತ ಹೆಚ್ಚು ಅಶ್ಲೀಲ ವಿಡಿಯೋಗಳು ಪತ್ತೆ ಆದದ್ದು ಅವರ ಪೈಶಾಚಿಕ ಕೃತ್ಯಗಳಿಗೆ ಸಾಕ್ಷಿ ಆಗಿತ್ತು.

12) ಜೂನ್ 9ರಂದು ಇಡೀ ಕರ್ನಾಟಕ ಬೆಚ್ಚಿಬಿದ್ದ ಸುದ್ದಿ ಅಂದರೆ ಸಿನೆಮಾ ಸ್ಟಾರ್ ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆದದ್ದು. ಆತನ ಜೊತೆಗೆ ಆತನ ಗೆಳತಿ ಪವಿತ್ರಾ ಗೌಡ ಸೇರಿ ಒಟ್ಟು 17 ಜನರು ಅರೆಸ್ಟ್ ಆದದ್ದು ರೇಣುಕಸ್ವಾಮಿ ಎಂಬ ಬಡಪಾಯಿಯ ಕೊಲೆ ಪ್ರಕರಣದಲ್ಲಿ. ಹಲವು ತಿಂಗಳು ಮಾಧ್ಯಮಗಳಿಗೆ ಹೈ TRP ತಂದುಕೊಟ್ಟ ಘಟನೆ ಇದು. ವರ್ಷದ ಕೊನೆಗೆ ದರ್ಶನ್‌ಗೆ ಜಾಮೀನು ಸಿಕ್ಕಿದೆ.

13) ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಮಹಾರಾಷ್ಟ್ರದಲ್ಲಿ ರಾಜ್ಯಪಾಲರಾಗಿದ್ದ ಎಸ್.ಎಂ ಕೃಷ್ಣ ನಿಧನ ನಿಜಕ್ಕೂ ಶಾಕಿಂಗ್ ಸುದ್ದಿ. (ಡಿಸೆಂಬರ್ 10). ಕರ್ನಾಟಕದ ಐಟಿ ಮತ್ತು ಬಿಟಿ ಕ್ಷೇತ್ರಕ್ಕೆ ಮುನ್ನುಡಿ ಬರೆದ ಅವರನ್ನು ಕನ್ನಡಿಗರು ಮರೆಯಲು ಸಾಧ್ಯವೇ ಇಲ್ಲ.
(ಮುಗಿದಿಲ್ಲ)

ರಾಜೇಂದ್ರ ಭಟ್‌ ಕೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top