ಸಿದ್ದರಾಮಯ್ಯ ಪರವಾಗಿ ಮಾತನಾಡಿದ ವದಂತಿಗಳಿಗೆ ಸ್ಪಷ್ಟೀಕರಣ
ಮೈಸೂರು: ಕಾಂಗ್ರೆಸ್ ಸೇರುವ ಉದ್ದೇಶ ಖಂಡಿತ ತನಗೆ ಇಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಸ್ಪಷ್ಟಪಡಿಸಿದ್ದಾರೆ. ಮೈಸೂರಿನ ರಸ್ತೆಗೆ ಸಿದ್ದರಾಮಯ್ಯನವರ ಹೆಸರಿಡುವ ಪ್ರಸ್ತಾವದ ಕುರಿತು ಇತ್ತೀಚೆಗೆ ಪ್ರತಾಪ್ ಸಿಂಹ ಹೇಳಿದ ಮಾತೊಂದು ಅವರು ಕಾಂಗ್ರೆಸ್ ಸೇರುವ ಬಗ್ಗೆ ವದಂತಿ ಹುಟ್ಟು ಹಾಕಿತ್ತು. ಈ ಹಿನ್ನೆಲೆಯಲ್ಲಿ ಅಸವರು ಸ್ಪಷ್ಟೀಕರಣ ನೀಡಿದ್ದಾರೆ.
ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಟಿಕೆಟ್ ವಂಚಿತರಾದ ಬಳಿಕ ಪ್ರತಾಪ ಸಿಂಹ ನಡೆಗಳು ತುಸು ನಿಗೂಢವಾಗಿವೆ. ಈ ಹಿನ್ನೆಲೆಯಲ್ಲಿ ಪ್ರತಾಪ್ ಸಿಂಹ ಹೇಳಿದ ಮಾತುಗಳು ರಾಜಕೀಯ ಚರ್ಚೆಗೆ ಕಾರಣವಾಗಿದ್ದವು.
ಅಟಲ್ ಬಿಹಾರಿ ವಾಜಪೇಯಿ ಜನ್ಮಶತಾಬ್ದಿ ಆಚರಣೆ ಕಾರ್ಯಕ್ರಮವೊಂದರ ಹೊರಗೆ ಪತ್ರಕರ್ತರು ಮೈಸೂರು ರಸ್ತೆಗೆ ಸಿದ್ದರಾಮಯ್ಯನವರ ಹೆಸರಿಡುವ ಪ್ರಸ್ತಾವಪದ ಬಗ್ಗೆ ಅಭಿಪ್ರಾಯ ಕೇಳಿದಾಗ ಎರಡು ಸಲ ರಾಜ್ಯದ ಮುಖ್ಯಮಂತ್ರಿಯಾದವರ ಹೆಸರಿಡುವುದರಲ್ಲಿ ತಪ್ಪೇನಿದೆ ಎಂದು ಪ್ರತಿಕ್ರಿಸಿಯಿದ್ದೇನೆಯೇ ಹೊರತು ನಾನು ಸಿದ್ದರಾಮಯ್ಯನವರನ್ನು ಬೆಂಬಲಿಸಿ ಮಾತನಾಡಿಲ್ಲ. ಅಧಿಕಾರದಲ್ಲಿ ಇಲ್ಲದಿದ್ದರೂ ಸಿದ್ದರಾಮಯ್ಯನವರನ್ನು ಸೈದ್ಧಾಂತಿಕವಾಗಿ ವಿರೋಧಿಸುವ ಬಿಜೆಪಿ ನಾಯಕ ನಾನೊಬ್ಬನೇ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಮೈಸೂರು ನಗರದಲ್ಲಿ ಕಾರ್ಪೋರೇಷನ್ ಅಸ್ತಿತ್ವಕ್ಕೆ ಬಂದ ಬಳಿಕ ಕೆ.ಆರ್ ಎಸ್ ರಸ್ತೆಗೆ ಯಾವುದೇ ನಿರ್ದಿಷ್ಟವಾದ ಹೆಸರಿಲ್ಲ, ಆ ರಸ್ತೆಯಲ್ಲಿರುವ ಆಸ್ಪತ್ರೆಗಳ ನಿರ್ಮಾಣಕ್ಕೆ ಸಿದ್ದರಾಮಯ್ಯ ಹಣ ಸಹಾಯ ಮಾಡಿರುವುದರಿಂದ ಅದಕ್ಕೆ ಸಿದ್ದರಾಮಯ್ಯ ಆರೋಗ್ಯ ಪಥ ಅಂತ ಹೆಸರಿಟ್ಟುಕೊಂಡರೆ ಅದರಲ್ಲಿ ತಪ್ಪೇನು ಬಂತು ಎಂದಷ್ಟೇ ತಾನು ಹೇಳಿದ್ದು ಎಂದಿರುವ ಪ್ರತಾಪ್ ಸಿಂಹ ತಮಗೆ ಕಾಂಗ್ರೆಸ್ ಸೇರುವ ಉದ್ದೇಶವಿಲ್ಲ ಅಂತ ಹೇಳಿದ್ದಾರೆ.
ಸ್ನೇಹಮಯಿ ಕೃಷ್ಣ ವಿರೋಧ
ಮೈಸೂರಿನ ರಸ್ತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರಿಡುವ ವಿಚಾರವಾಗಿ ನಗರಪಾಲಿಕೆ ಆಯುಕ್ತರಿಗೆ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಪತ್ರ ಬರೆದಿದ್ದು, ಕೂಡಲೇ ರಾಜಕುಮಾರಿ ರಸ್ತೆ ನಾಮಫಲಕ ಅಳವಡಿಸುವಂತೆ ಆಗ್ರಹಿಸಿದ್ದಾರೆ. ಮೈಸೂರು ನಗರ ಪಾಲಿಕೆ ವತಿಯಿಂದ ಪ್ರಿನ್ಸೆಸ್ ರೋಡ್ ನಾಮಫಲಕ ಅಳವಡಿಸಿ ಗೊಂದಲವನ್ನು ನಿವಾರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ಎಂಬ ಹೆಸರನ್ನು ನಾಮಕರಣ ಮಾಡುವ ಪ್ರಸ್ತಾವನೆ ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿರುವ ಅವರು, ಹಲವು ದಾಖಲೆಗಳನ್ನೂ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪ್ರಿನ್ಸೆಸ್ ರಸ್ತೆ ಹೆಸರಿನ ದಾಖಲೆಗಳನ್ನೂ ನೀಡಿದ್ದಾರೆ. ಜತೆಗೆ ರೈಲ್ವೆ ಇಲಾಖೆಯಲ್ಲಿ ಉಲ್ಲೇಖವಿರುವ ಬಗ್ಗೆಯೂ ದಾಖಲೆ ನೀಡಿದ್ದಾರೆ.