ಹುಷಾರ್‌! ಹೊಸ ವರ್ಷದ ಶುಭಾಶಯ ಸಂದೇಶದಲ್ಲಿರಬಹುದು ಮೋಸದ ಲಿಂಕ್‌

ಹ್ಯಾಪಿ ನ್ಯೂ ಇಯರ್‌ ಸಂದೇಶ ಕಳುಹಿಸಿ ಹಣ ಲಪಟಾಯಿಸುವ ತಂತ್ರ

ಬೆಂಗಳೂರು : ಅಮಾಯಕ ಜನರ ಬ್ಯಾಂಕ್‌ ಖಾತೆಗಳಿಂದ ಹಣ ಲಪಟಾಯಿಸಲು ನಾನಾ ತಂತ್ರಗಳನ್ನು ಬಳಸುತ್ತಿರುವ ಸೈಬರ್‌ ಕಳ್ಳರು ಈಗ ಕಂಡುಕೊಂಡಿರುವ ಹೊಸ ತಂತ್ರ ಹೊಸ ವರ್ಷದ ಶುಭಾಶಯ. ಹೊಸ ವರ್ಷವನ್ನು ಗಮನದಲ್ಲಿಟ್ಟುಕೊಂಡ ವಂಚಕರು ಈಗ ಜನರ ಖಾತೆಯನ್ನು ಖಾಲಿ ಮಾಡಲು ಹೊಸ ತಂತ್ರವನ್ನು ರೂಪಿಸಿದ್ದಾರೆ.

ವಾಟ್ಸಪ್‌, ಫೇಸ್‌ಬುಕ್‌ ಅಥವಾ ಟಿಲಿಗ್ರಾಂನಂಥ ಸೋಷಿಯಲ್‌ ಮೀಡಿಯಾ ಖಾತೆಗಳಿಗೆ ಹೊಸ ವರ್ಷದ ಶುಭಾಶಯದ ಗ್ರೀಟಿಂಗ್‌ ಕಳುಹಿಸುತ್ತಾರೆ. ಇದನ್ನು ತೆರೆದ ಕೂಡಲೇ ಖಾತೆಯಲ್ಲಿದ್ದ ಹಣ ಮಂಗಮಾಯವಾಗುತ್ತದೆ. ಹೀಗಾಗಿ ಅಪರಿಚಿತ ಸಂಖ್ಯೆಗಳಿಂದ ಬರುವ ಶುಭಾಶಯದ ಬಗ್ಗೆ ಕಟ್ಟೆಚ್ಚರದಿಂದಿರಬೇಕೆಂದು ಪೊಲೀಸರು ಹೇಳಿದ್ದಾರೆ. ಯಾವುದೇ ಕಾರಣಕ್ಕೆ ಇಂಥ ಶುಭಾಶಯಗಳನ್ನು ತೆರೆಯುವ ಗೋಜಿಗೆ ಹೋಗಬಾರದು. ತೆರೆದರೆ ಅದರಲ್ಲಿರುವ ಲಿಂಕ್‌ ಆಕ್ಟಿವೇಟ್‌ ಆಗಿ ಮೊಬೈಲ್‌ನಲ್ಲಿರುವ appಗಳನ್ನು ಜಾಲಾಡಿ ಖಾತೆಯಿಂದ ಹಣ ಎಗರಿಸುತ್ತದೆ. ಹೊಸ ವರ್ಷವನ್ನು ಆನಂದದಿಂದ ಆಚರಿಸಿ ಎಂದು ಸೈಬರ್ ವಂಚಕರು ಸಾಮಾಜಿಕ ಜಾಲತಾಣಗಳಾದ ವಾಟ್ಸಪ್, ಫೇಸ್‌ಬುಕ್, ಟೆಲಿಗ್ರಾಮ್ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಲಿಂಕ್‌ಗಳು, ಗ್ರೀಟಿಂಗ್ಸ್‌ಗಳನ್ನು ಕಳುಹಿಸಿ ಸೈಬರ್ ವಂಚನೆಗೆ ಒಳಗಾಗುವಂತೆ ಮಾಡುತ್ತಾರೆ. ಹೀಗಾಗಿ ಅಪರಿಚಿತ, ಅನುಮಾನಾಸ್ಪದ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಲೇ ಬಾರದು ಎಂದು ಪೊಲೀಸರು ಎಚ್ಚರಿಸಿದ್ದಾರೆ.































 
 

ಹೊಸ ವರ್ಷದ ಶುಭಾಶಯದಲ್ಲಿ ನಿಮ್ಮ ಮೊಬೈಲ್‌ ಹ್ಯಾಕ್‌ ಮಾಡುವ ಲಿಂಕ್ ಅಥವಾ APK ಫೈಲ್‌ ಇರಬಹುದು. ಸೈಬರ್ ಕ್ರಿಮಿನಲ್‌ಗಳು ಇಂಥ ಲಿಂಕ್ ಕಳುಹಿಸುತ್ತಾರೆ. ಹ್ಯಾಕ್ ಮಾಡಿದ ಮೊಬೈಲ್‌ನಿಂದ ವಾಟ್ಸಾಪ್ ಸೇರಿ ಸಾಮಾಜಿಕ ಜಾಲತಾಣ ಮೂಲಕ ಲಿಂಕ್ ಮತ್ತು APK ಫೈಲ್‌ ಶೇರ್ ಮಾಡುವ ಸಾಧ್ಯತೆ ಇರುತ್ತದೆ. ಸಾರ್ವಜನಿಕರು ಈ ರೀತಿಯ ಹೊಸ ವರ್ಷದ ಶುಭಾಶಯ ಕೋರುವ ಯಾವುದೇ ಹಾನಿಕಾರಕ ಲಿಂಕ್‌ಗಳು ಮತ್ತು APK ಫೈಲ್‌ಗಳನ್ನು ವಾಟ್ಸಾಪ್ ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣಕ್ಕೆ ಬಂದರೆ ತೆರೆಯದೆ ಅಲ್ಲೇ ತಕ್ಷಣ ಡಿಲೀಟ್‌ ಮಾಡಿಬಿಡಬೇಕು ಎಂದು ಪೊಲೀಸರು ಸಲಹೆ ನೀಡಿದ್ದಾರೆ.

ಯಾವುದೇ ಕಾರಣಕ್ಕೆ ಈ ಮಾದರಿಯ ವಂಚಕ ಲಿಂಕ್ ಮತ್ತು APK ಫೈಲ್‌ಗಳನ್ನು ಶೇರ್ ಮಾಡಬಾರದು. ಲಿಂಕ್ ಮತ್ತು APK ಫೈಲ್‌ಗಳನ್ನು ಯಾವುದಾದರೂ ವಾಟ್ಸಾಪ್ ಗ್ರೂಪ್‌ಗಳಿಗೆ ನಿಮ್ಮ ಪರಿಚಿತ ವಾಟ್ಸಾಪ್ ಸಂಖ್ಯೆಯಿಂದಲೇ ಪೋಸ್ಟ್ ಮಾಡಿದ್ದರೆ ಗ್ರೂಪ್‌ ಅಡ್ಮಿನ್ ಅಂತಹ ಲಿಂಕ್ ಮತ್ತು APK ಫೈಲ್‌ಗಳನ್ನು ಪರಿಶೀಲನೆ ಮಾಡಿ ಡಿಲೀಟ್ ಮಾಡಬೇಕು. ಯಾವುದೇ ಸೈಬರ್ ಕ್ರೈಂ ಅಪರಾಧಕ್ಕೆ ಒಳಗಾದಲ್ಲಿ ಕೂಡಲೇ 1930 ಸಂಖ್ಯೆಗೆ ಕರೆ ಮಾಡಿ ಅಥವಾ www.cybercrime.gov.in ಈ ವೆಬ್‌ಸೈಟ್‌ನಲ್ಲಿ ದೂರು ದಾಖಲಿಸಿ ಎಂದು ಪೊಲೀಸರು ಹೇಳಿದ್ದಾರೆ.

ಡಿಜಿಟಲೀಕರಣ ಯುಗದಲ್ಲಿ ಸೈಬರ್ ಕ್ರೈಂ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೈಬರ್ ಕ್ರೈಂ ತಡೆಯುವ ಕುರಿತು ಜನರು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಸೈಬರ್ ಅಪರಾಧಗಳಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ವಹಿಸಬೇಕಿದೆ. ಈ ಕುರಿತು ಪೊಲೀಸ್ ಇಲಾಖೆ ಸಹ ಜನರಲ್ಲಿ ಜಾಗೃತಿಯನ್ನು ಮೂಡಿಸುತ್ತಿದೆ. ಸಾಮಾಜಿಕ ತಾಣಗಳು ಎಷ್ಟು ಒಳಿತಾಗಿದೆಯೋ, ಅಷ್ಟೇ ಕೆಡುಕು ಸಹ ಇದೆ. ಕ್ಯೂಆರ್ ಕೋಡ್ ನಿರ್ವಹಿಸುವಾಗ ಬಹಳ ಮುನ್ನೆಚ್ಚರಿಕೆ ವಹಿಸಬೇಕು. ಜಿ-ಮೇಲ್, ಫೇಸ್‍ಬುಕ್, ಟ್ವಿಟರ್ ಕಡ್ಡಾಯವಾಗಿ ಸೈನ್‍ಔಟ್ ಮಾಡಬೇಕು. ಮೊಬೈಲ್ ಮತ್ತು ಲ್ಯಾಪ್‍ಟಾಪ್‌ಗಳ ಮೂಲಕ ವಂಚನೆ ಮಾಡಲಾಗುತ್ತಿದೆ. ವಿವಿಧ ಅಪ್ಲಿಕೇಷನ್ ಮೂಲಕವೂ ವಂಚನೆ ಮಾಡಲಾಗುತ್ತಿದೆ. ಇಂಟರ್‌ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ಅಪ್ಲಿಕೇಶನ್ ಸುರಕ್ಷತೆಯ ಕುರಿತು ಹೆಚ್ಚಿನ ಎಚ್ಚರಿಕೆ ವಹಿಸಬೇಕಿದೆ ಎಂದು ಪೊಲೀಸರು ಜನರಿಗೆ ಮುನ್ನೆಚ್ಚರಿಕೆ ನೀಡಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top