ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ವತಿಯಿಂದ ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಎರಡು ದಿನ ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಚಾಲನೆ ನೀಡಲಾಗಿದ್ದು, ಶನಿವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರೀದೇವಿ ಭೂದೇವಿ ಸಹಿತನಾದ ಶ್ರೀನಿವಾಸ ದೇವರನ್ನು ವೈಭವದಿಂದ ಮೆರವಣಿಗೆಯ ಮೂಲಕ ಕಲ್ಯಾಣೋತ್ಸವ ನಡೆಯುವ ಈಶ ಮಂಟಪಕ್ಕೆ ಕರೆತರಲಾಯಿತು.
ಬೊಳುವಾರಿನಲ್ಲಿ ವೈಭವದ ಮೆರವಣಿಗೆಯನ್ನು ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ತೆಂಗಿನ ಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು. ಬಳಿಕ ಚೆಂಡೆಕುಣಿತ, ನೃತ್ಯ ಭಜನೆ ತಂಡದೊಂದಿಗೆ, ಕೇಸರಿ ಶಲ್ಯ ಧರಿಸಿದ ಮಹಿಳೆಯರು ಕಲಶವನ್ನು ಹಿಡಿದು ಮೆರವಣಿಗೆಯುದ್ದಕ್ಕೂ ಪುಷ್ಪಾರ್ಚಣೆ ಮಾಡುವ ಮೂಲಕ ಪುತ್ತೂರು ನಗರದ ಮುಖ್ಯರಸ್ತೆಯಲ್ಲಿ ಸಂಚರಿಸಿ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ರಸ್ತೆಯ ಮೂಲಕ ನೆಲ್ಲಿಕಟ್ಟೆಯಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಗೆ ಬಂದು ಅಲ್ಲಿಂದ ಶ್ರೀನಿವಾಸ ಕಲ್ಯಾಣೋತ್ಸವದ ಸಭಾಂಗಣದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಅಧ್ಯಕ್ಷ ಶಿವಪ್ರಸಾದ್ ಇಜ್ಜಾವು ಸಹಿತ ಪದಾಧಿಕಾರಿಗಳು ಶ್ರೀದೇವಿ ಭೂದೇವಿ ಸಹಿತನಾದ ಶ್ರೀನಿವಾಸ ದೇವರಿರುವ ಪಲ್ಲಕಿಯನ್ನು ತಾವೆ ಹೆಗಲಮೇಲಿರಿಸಿ ಪ್ರಧಾನ ವೇದಿಕೆಗೆ ತಂದು ಅರ್ಚಕರಿಗೆ ಅರ್ಪಿಸಿದರು. ಬಳಿಕ ವಿಶಾಲವಾದ ಈಶ ಮಂಟಪದಲ್ಲಿ ಸುಂದರ ವೇದಿಕೆ ನಿರ್ಮಿಸಿ ತಿರುಪತಿ ತಿಮ್ಮಪ್ಪನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಭಕ್ತರು ಶ್ರೀ ವೆಂಕಟರಮಣ ದೇವರ ದರ್ಶನ ಪಡೆದು ಪುನೀತರಾದರು. ಈ ಸಂದರ್ಭ ವೆಂಕಟರಮಣ ಗೋವಿಂದ.. ಗೋವಿಂದಾ.. ಶ್ರೀನಿವಾಸ ಗೋವಿಂದ.. ಸ್ಮರಣೆಯಲ್ಲಿ ಭಕ್ತರು ಮುಳುಗಿದರು. ಶ್ರೀನಿವಾಸನನ್ನು ಕೊಂಡಾಡುವ ಭಕ್ತಿಗೀತೆ, ಭಜನೆ, ಮಂತ್ರಗಳು ಎಲ್ಲೆಡೆ ಮೊಳಗಿದವು.
ಶ್ರೀನಿವಾಸ ದೇವರ ಪುರಪ್ರವೇಶ ಸಂದರ್ಭ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ, ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಮುಗೆರೋಡಿ ಬಾಲಕೃಷ್ಣ ರೈ, ಕುಂಟಾರು ಗುರು ತಂತ್ರಿ ಸಹಿತ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಮತ್ತು ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿ, ಇಲ್ಲಿ ಧರ್ಮ ಸಂಗಮದ ಜತೆ ಸಂತ ಸಂಗಮವೂ ಆಗಿದೆ. ಅದರಲ್ಲೂ ಇಂದು ಯುವ ಸನ್ಯಾಸಿಗಳು ಎದ್ದಿರುವುದು ಭಾರತದ ಮೌಲ್ಯವನ್ನು ಉಳಿಸುವುದಕ್ಕಾಗಿ ಎಂದು ನಾವು ತಿಳಿದು ಕೊಳ್ಳಬಹುದು. ಅದೇ ರೀತಿ ಕಲ್ಯೋಣೋತ್ಸವದ ಮೂಲಕ ಧರ್ಮ ಮತ್ತು ಸಂಸ್ಕೃತಿಯ ಅನಾವರಣವಾಗುತ್ತಿದೆ. ಭಗವಂತನ ಕಲ್ಯಾಣ ಗುಣಗಳನ್ನು ಅನುಸರಿಸುವ ಕಾರ್ಯವಾಗಬೇಕು. ಸನಾತನ ಹಿಂದು ಧರ್ಮದ ಸಂರಕ್ಷಣೆ ನಡೆಸುವ ಕಾರ್ಯ ನಮ್ಮಿಂದಲೇ ನಡೆಯಬೇಕಾಗಿದೆ ಎಂದರು.
ಅರಕಲಗೂಡು ವಿಶ್ವ ಬ್ರಾಹ್ಮಣ ಮಹಾ ಸಂಸ್ಥಾನ ಪೀಠದ ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಭಾರತೀಯ ಸಂಸ್ಕೃತಿ ಎಲ್ಲ ದೇಶಕ್ಕೆ ಆದರ್ಶಮಯವಾಗಿದ್ದು, ಪಾಶ್ಚತ್ಯಾ ಜಗತ್ತು ಭಾರತೀಯ ಸಂಸ್ಕೃತಿಯನ್ನು ಅನುಸರಿಸುವುದಕ್ಕೆ ಮುಂದಾಗುತ್ತಿದೆ. ಪರಮಾತ್ಮನ ಕಲ್ಯಾಣ ಮಾಡುವ ಮೂಲಕ ನಮ್ಮ ಕಲ್ಯಾಣ ಆಗಬೇಕು. ಅದಕ್ಕಾಗಿ ಪ್ರಸ್ತುತ ದಿನ ಸಂಸ್ಕೃತಿಯ ಮೇಲಾಗುವ ಆಗಂತುಕಗಳನ್ನು ತಡೆಯಬೇಕು. ಇದಕ್ಕಾಗಿ ನಿಸ್ವಾರ್ಥ ಭಾವನೆಯಿಂದ ಹಿಂದು ಸಂಘಟನೆಗಾಗಿ ಕಟಿಬದ್ದರಾಗಿರಬೇಕೆಂದು ಹೇಳಿದರು.
ಕಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ದೇಶಕ್ಕಾಗಿ ಒಂದುಷ್ಟು ಸಮಯವನ್ನು ತ್ಯಾಗ ಮಾಡಬೇಕು. ಇಂತಹ ತ್ಯಾಗ ಮನೋಭಾವನೆಯನ್ನು ಉಳ್ಳ ಪುತ್ತಿಲರಂತಹ ದೇಶ ಭಕ್ತರು ಹತ್ತಾರು ಮಂದಿ ಹುಟ್ಟಬೇಕು. ಹಿಂದು ಸನಾತನ ಧರ್ಮ ಉಳಿಸಬೇಕಾದರೆ ಪ್ರತಿಯೊಬ್ಬ ಹಿಂದು ಕಟ್ಟಿಬದ್ದರಾಗಿರಬೇಕು ಎಂದರು.
ಉಡುಪಿ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ನಾವು ಧರ್ಮ ರಕ್ಷಣೆಗೆ ಮನಸ್ಸು ಮಾಡಿದರೆ ಸಾಲದು ಮುಂದೆ ಬರಬೇಕು. ಈ ನಿಟ್ಟಿನಲ್ಲಿ ಧರ್ಮರಕ್ಷಣೆಗೆ ಮೊದಲು ದೇವರು, ನಂತರ ದೇಶ, ನಂತರ ನಾವು ಎಂಬ ವಿಚಾರ ಮುಂದಿಟ್ಟು ಸಂಘಟನೆಯ ಕೆಲಸ ಮಾಡಬೇಕು ಎಂದರು.
ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಕಲಿಯುಗದಲ್ಕಿ ಭಗವಂತ ಅವತಾರಾವಿಲ್ಲ. ಆದರೆ ಭಗವಂತ ವ್ಯಕ್ತಿಯ ರೂಪದಲ್ಲಿ ಭಗವಂತನ ಸೇವೆಗೆ ಅವಕಾಶ ಮಾಡುತ್ತಾನೆ. ಅದು ಶ್ರೀನಿವಾಸ ಕಲ್ಯಾಣೋತ್ಸವದ ಮೂಲಕ ನಮಗೆ ಲಭಿಸುತ್ತದೆ. ಹಾಗಾಗಿ ಕಲಿಯುಗದಲ್ಲಿ ಭಗವಂತ ಶ್ರೀನಿವಾಸ ಕಲ್ಯಾಣೋತ್ಸವದ ಮೂಲಕ ಪ್ರತಿ ವರ್ಷ ಅವತರಿಸುತ್ತಾನೆ ಎಂದರು.
ಶ್ರೀನಿವಾಸ ಕಲ್ಯೋಣೋತ್ಸವ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.
ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀನಿವಾಸನ ಪ್ರೇರಣೆಯಿಂದ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಒಂದು ವರ್ಷದಲ್ಲಿ ಸುಮಾರು೨೫ಲಕ್ಷ ಕ್ಕೂ ಹೆಚ್ಚಿನ ಆರ್ಥಿಕ ಸೇವೆಯನ್ನು ಬಡ ಜನರಿಗೆ ನೀಡಿದೆ. ನೂರಾರು ಕುಟುಂಬಗಳ ನೋವಿಗೆ ಸ್ಪಂಧಿಸುವ ಕೆಲಸ ಮಾಡಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಶಿಕ್ಷಣ ಪಡೆದವರು ನಮಗೆ ಸ್ವಲ್ಪ ಸಮಾಜಕ್ಕೆ ಎಲ್ಲವನ್ನು ಅರ್ಪಣೆ ಮಾಡುವ ಚಿಂತನೆಯೊಂದಿಗೆ ಧರ್ಮ ಜಾಗೃತಿ ಮಾಡುವ ಶಕ್ತಿ ಭಗವಂತ ನೀಡಿದ್ದಾನೆ. ಅದನ್ನು ಮುಂದುವರಿಸುತ್ತಿದ್ದೇವೆ. ಮುಂದಿನ ವರ್ಷ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನೂರು ವರ್ಷ ತುಂಬುವ ಸಂದರ್ಭ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮತ್ತು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ನೇತೃತ್ವದಲ್ಲಿ ನೂರು ಮಂದಿಗೆ ಸಾಮೂಹಿಕ ವಿವಾಹವನ್ನು ಮಾಡುವ ಯೋಜನೆ ಚಿಂತನೆ ನಮ್ಮ ಮುಂದಿದೆ ಎಂದರು. ಶ್ರೀನಿವಾಸ ಕಲ್ಯೋಣೋತ್ಸವ ಸಮಿತಿ ಗೌರವಾಧ್ಯಕ್ಷರಾದ ಶಶಾಂಕ ಕೊಟೇಚಾ, ಬೂಡಿಯಾರು ರಾಧಾಕೃಷ್ಣ ರೈ, ಚಂದಪ್ಪ ಮೂಲ್ಯ, ಕೋಶಾಧಿಕಾರಿ ಉದಯ ಕುಮಾರ್ ರೈ ಎಸ್. ಸಂಪ್ಯ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಅಧ್ಯಕ್ಷ ಮಹೇಂದ್ರ ವರ್ಮ ಬಜತ್ತೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಜಯಶ್ರೀ ಮುಳಿಯಾರು ಪ್ರಾರ್ಥಿಸಿದರು. ಶ್ರೀನಿವಾಸ ಕಲ್ಯಾಣೋತ್ಸ ಸಮಿತಿ ಸ್ವಯಂ ಸೇವಕ ಸಮಿತಿ ಕಾರ್ಯಾಧ್ಯಕ್ಷ ಉಮೇಶ್ ಕೋಡಿಬೈಲು ಸ್ವಾಗತಿಸಿ, ಕಾರ್ಯದರ್ಶಿ ರವಿಕುಮಾರ್ ಕೆದಂಬಾಡಿ ಮಠ ವಂದಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್, ವಿ.ಜೆ.ವಿಕ್ಯಾತ್ ಕಾರ್ಯಕ್ರಮ ನಿರೂಪಿಸಿದರು.