ಪುತ್ತೂರು: ತೆರವಾಗಿರುವ ಗ್ರಾಮ ಪಂಚಾಯತ್ ಸದಸ್ಯ ಹುದ್ದೆಗೆ ಶನಿವಾರ ಉಪಚುನಾವಣೆ ನಡೆಯುತ್ತಿದ್ದು, ಬೆಳಗ್ಗಿನಿಂದಲೇ ಬಿರುಸಿನ ಮತದಾನ ಆಗುತ್ತಿದೆ. ಶಾಸಕ ಸಂಜೀವ ಮಠಂದೂರು ಸೇರಿದಂತೆ ರಾಜಕೀಯ ಪ್ರಮುಖರು ಭೇಟಿ ನೀಡಿ, ಚುನಾವಣಾ ಆಗುಹೋಗುಗಳನ್ನು ವೀಕ್ಷಿಸುತ್ತಿದ್ದಾರೆ.
ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ಗಿರೀಶ್ ಗೌಡ ಮರಿಕೆ ಅವರ ನಿಧನದಿಂದ ತೆರವಾಗಿದ್ದ ಹುದ್ದೆಗೆ ಉಪಚುನಾವಣೆ ನಡೆಯುತ್ತಿದೆ. ಸಾಮಾನ್ಯ ಮೀಸಲು ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಯತೀಶ್ ಡಿ.ಬಿ. ಸಂಟ್ಯಾರ್ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಪ್ರಜ್ವಲ್ ರೈ ತೊಟ್ಲ ಸ್ಪರ್ಧಿಸುತ್ತಿದ್ದಾರೆ. ಕಡಬದ ಕುಟ್ರುಪ್ಪಾಡಿಯ ಬಲ್ಯ ವಾರ್ಡ್ 1ರ ಹಿಂದುಳಿದ ವರ್ಗ ಎ ಸ್ಥಾನಕ್ಕೆ ಮೂರು ಮಂದಿ ಕಣದಲ್ಲಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸುದೇಶ್ ಬೀರುಕ್ಕು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಕರುಣಾಕರ ಮತ್ರಾಡಿ, ಪಕ್ಷೇತರ ಅಭ್ಯರ್ಥಿಯಾಗಿ ಸುಧಾಕರ ಬಿ. ಬಾರಿಕೆ ಕಣದಲ್ಲಿದ್ದಾರೆ.
ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾ.ಪಂ.ನ ಹಿಂದುಳಿದ ವರ್ಗ ಎ ಮಹಿಳೆ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಗೀತಾ ಚಂದ್ರಶೇಖರ್ ಹಾಗೂ ಕಾಂಗ್ರೆಸ್ ಬೆಂಬಲತ ಅಭ್ಯರ್ಥಿಯಾಗಿ ಶಶಿಕಲಾ ಹರಿಣಾಕ್ಷ ಪೂಜಾರಿ ಸ್ಪರ್ಧಿಸುತ್ತಿದ್ದಾರೆ. ನೆಟ್ಲಮುಡ್ನೂರು ಗ್ರಾ.ಪಂ.ನ ಹಿಂದುಳಿದ ವರ್ಗ ಎ ಮಹಿಳಾ ಸ್ಥಾನಕ್ಕೆ ಬಿಜೆಪಿ ಬೆಂಬಲತ ಅಭ್ಯರ್ಥಿಯಾಗಿ ಸುಜಾತ ಜಗದೀಶ್ ಪೂಜಾರಿ ಮಿತ್ತಕೋಡಿ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಹರಿಣಾಕ್ಷಿ ಹರೀಶ್ ಪೂಜಾರಿ ಕಣದಲ್ಲಿದ್ದಾರೆ.
ಬೆಳಿಗ್ಗೆ ಶಾಸಕ ಸಂಜೀವ ಮಠಂದೂರು ಸೇರಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು ಚುನಾವಣಾ ಬೂತಿಗೆ ಭೇಟಿ ನೀಡುತ್ತಿದ್ದಾರೆ.
ಮತದಾರರ ಸಂಖ್ಯೆ ಹೀಗಿದೆ
ಬೆಳಿಗೆ 7 ಗಂಟೆಗೆ ಚುನಾವಣೆ ಆರಂಭಗೊಂಡಿದ್ದು, ಸಂಜೆ 5ರವರೆಗೂ ನಡೆಯಲಿದೆ. ಆರ್ಯಾಪು ವಾರ್ಡಿನಲ್ಲಿ 1090 ಮತದಾರರಿದ್ದರೆ, ಅನಂತಾಡಿಯ 2ನೇ ವಾರ್ಡಿನಲ್ಲಿ 664, ನೆಟ್ಲಮುಡ್ನೂರು 2ನೇ ವಾರ್ಡಿನಲ್ಲಿ 816 ಹಾಗೂ ಕುಟ್ರುಪ್ಪಾಡಿ 1ನೇ ವಾರ್ಡಿನಲ್ಲಿ 1055 ಮಂದಿ ಮತದಾರರಿದ್ದಾರೆ. ಫೆ. 28ರಂದು ಮತ ಎಣಿಕೆ ನಡೆಯಲಿದ್ದು, ಫಲಿತಾಂಶ ಘೋಷಣೆಯಾಗಲಿದೆ.