ಬಾರಿಸು ಕನ್ನಡ ಡಿಂಡಿಮವ ಉತ್ಸವಕ್ಕೆ ಪ್ರಧಾನಿ ಚಾಲನೆ
ಹೊಸದಿಲ್ಲಿ : ಇಲ್ಲಿನ ಟಾಲ್ಕಟೋರಾ ಸ್ಟೇಡಿಯಂನಲ್ಲಿ ಎರಡು ದಿನ ನಡೆಯಲಿರುವ ‘ಬಾರಿಸು ಕನ್ನಡ ಡಿಂಡಿಮವ’ ಸಾಂಸ್ಕೃತಿಕ ಉತ್ಸವವನ್ನು ಇಂದು ಸಂಜೆ 5ಕ್ಕೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.
ದೆಹಲಿ ಕರ್ನಾಟಕ ಸಂಘದ 75ನೇ ವಾರ್ಷಿಕೋತ್ಸವದ ನಿಮಿತ್ತ ಎರಡು ದಿನ (25 ಮತ್ತು 26)ದಿಲ್ಲಿಯಲ್ಲಿ ಕನ್ನಡ ಕಲರವ ಕೇಳಿಸಲಿದೆ. ಪ್ರಧಾನಿ ನರೇಂದ್ರ ಮೋದಿಯವರ ‘ಏಕ್ ಭಾರತ ಶ್ರೇಷ್ಠ್ ಭಾರತ್’ ಆಶಯಕ್ಕೆ ಅನುಗುಣವಾಗಿ, ಕರ್ನಾಟಕದ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಇತಿಹಾಸವನ್ನು ಕೊಂಡಾಡಲು ‘ಬಾರಿಸು ಕನ್ನಡ ಡಿಂಡಿಮವ’ ಸಾಂಸ್ಕೃತಿಕ ಹಬ್ಬವನ್ನು ಆಯೋಜಿಸಲಾಗಿದೆ.
ಕೇಂದ್ರ ಸಂಸ್ಕೃತಿ ಸಚಿವ ಜಿ. ಕಿಶನ್ ರೆಡ್ಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಮಹಾಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಶ್ರೀ ಸ್ಪಟಿಕಪುರ ನಂಜಾವಧೂತ ಸ್ವಾಮೀಜಿ, ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭಾಗವಹಿಸಲಿದ್ದಾರೆ.
ಎರಡು ದಿನದ ಉತ್ಸವದಲ್ಲಿ ಸಾಂಪ್ರದಾಯಿಕ ಸಂಗೀತ, ನೃತ್ಯ ಮತ್ತು ಕವನ ವಾಚನದ ಮೂಲಕ ರಾಜ್ಯದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರದರ್ಶನವಾಗುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ರಾಜ್ಯದ ಎಲ್ಲ ಜಿಲ್ಲೆಗಳಿಂದ 1 ಸಾವಿರಕ್ಕೂ ಹೆಚ್ಚು ಕಲಾವಿದರನ್ನು ಆಹ್ವಾನಿಸಲಾಗಿದೆ.
ಉದ್ಘಾಟನಾ ಸಮಾರಂಭದಲ್ಲಿ ಧರ್ಮಸ್ಥಳದ ಡಿ. ವೀರೇಂದ್ರ ಹೆಗ್ಗಡೆ, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಬಿಜೆಪಿ ಮುಖಂಡ ಸಿ.ಟಿ. ರವಿ ಸೇರಿದಂತೆ ಗಣ್ಯರು ಉಪಸ್ಥಿತರಿರಲಿದ್ದಾರೆ. ಫೆ.26 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್, ಕರ್ನಾಟಕ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ಉಪಸ್ಥಿತರಿರುತ್ತಾರೆ.