ಲ್ಯಾಂಡಿಂಗ್ ಗೇರ್ ವಿಫಲಗೊಂಡು ತಡೆಗೋಡೆಗೆ ಡಿಕ್ಕಿ ಹೊಡೆದ ವಿಮಾನ
ಸಿಯೋಲ್ : ದಕ್ಷಿಣ ಕೊರಿಯಾದಲ್ಲಿ 175 ಪ್ರಯಾಣಿಕರು ಮತ್ತು 6 ಸಿಬ್ಬಂದಿಯಿದ್ದ ವಿಮಾನವೊಂದು ಪತನಗೊಂಡಿದ್ದು, ಇದುವರೆಗೆ 62 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ವಿಮಾನ ಸಂಪೂರ್ಣ ನಾಶವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ದಕ್ಷಿಣ ಕೊರಿಯಾದ ನಗರವಾದ ಮುವಾನ್‌ನಲ್ಲಿರುವ ವಿಮಾನ ನಿಲ್ದಾಣದಲ್ಲಿ ಭಾನುವಾರ ಜೆಜು ಏರ್ ವಿಮಾನ ಲ್ಯಾಂಡಿಂಗ್ ಆಗುವಾಗ ಬೆಂಕಿ ಕಾಣಿಸಿಕೊಂಡಿದೆ. ವಿಮಾನವು ಬ್ಯಾಂಕಾಕ್‌ನಿಂದ ಹಿಂತಿರುಗುತ್ತಿತ್ತು. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಕಳೆದ ವಾರ ಕಜಾಕಿಸ್ಥಾನದ ಅಕ್ಟೌ ಬಳಿ ಸಂಭವಿಸಿದ ಅಜೆರ್‌ಬೈಜಾನ್ ಏರ್‌ಲೈನ್ ವಿಮಾನ ಅಪಘಾತದ ಬೆನ್ನಲ್ಲೇ ಈ ಸುದ್ದಿ ಕೇಳಿಬಂದಿದೆ.
ರಕ್ಷಣಾ ಮತ್ತು ಅಗ್ನಿಶಾಮಕ ದಳದ ತಂಡ ಕಾರ್ಯಾಚರಣೆ ನಡೆಸುತ್ತಿದೆ. ವಿಮಾನವು ಥೈಲ್ಯಾಂಡ್‌ನಿಂದ ಹಿಂತಿರುಗುತ್ತಿದ್ದಾಗ ಲ್ಯಾಂಡಿಂಗ್ ಸಮಯದಲ್ಲಿ ಅಪಘಾತ ಸಂಭವಿಸಿದೆ. ಬೆಂಕಿ ನಂದಿಸುವ ಕಾರ್ಯ ಪೂರ್ಣಗೊಂಡಿದೆ. ಈ ಅವಘಡದಲ್ಲಿ ಗಾಯಗೊಂಡಿರುವ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ವಿಮಾನದ ಲ್ಯಾಂಡಿಂಗ್ ಗೇರ್ ವಿಫಲಗೊಂಡದ್ದು ಅಪಘಾತಕ್ಕೆ ಕಾರಣ ಎನ್ನಲಾಗಿದೆ. ರನ್‌ವೇ ದಾಟಿ ಹೋದ ವಿಮಾನ ಕಾಂಕ್ರೀಟ್ ತಡೆಗೋಡೆಗೆ ದಿಕ್ಕಿ ಹೊಡೆದಾಗ ಬೆಂಕಿಹತ್ತಿಕೊಂಡು ಹೊತ್ತಿ ಉರಿದಿದೆ. ಹಕ್ಕಿಗಳಿಗೆ ವಿಮಾನ ಡಿಕ್ಕಿಯಾದ ಪರಿಣಾಮ ಲ್ಯಾಂಡಿಂಗ್ ಗೇರ್ ಸಮಸ್ಯೆಯಾಗಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಪ್ರಯಾಣಿಕರ ರಕ್ಷಣಾ ಕಾರ್ಯಾಚರಣೆ ವೇಳೆ ಓರ್ವ ಜೀವಂತವಾಗಿ ಪತ್ತೆಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.