ಚಿತ್ರನಟನಿಂದ ಡಿಕೆಸು ಧ್ವನಿಯಲ್ಲಿ ಕರೆಮಾಡಿಸಿ ಬೆದರಿಕೆಯೊಡ್ಡಿದ್ದ ಖಿಲಾಡಿ
ಬೆಂಗಳೂರು: ಕಾಂಗ್ರೆಸ್ ಮಾಜಿ ಸಂಸದ ಡಿ.ಕೆ ಸುರೇಶ್ ಸಹೋದರಿ ಎಂದು ಹೇಳಿಕೊಂಡು ಮಹಿಳೆಯೊಬ್ಬಳು ಬರೋಬ್ಬರಿ 14.600 ಕೆಜಿ ಚಿನ್ನಾಭರಣ ಖರೀದಿಸಿ ವಂಚನೆ ಮಾಡಿರುವ ಪ್ರಕರಣ ಬೆಂಗಳೂರಿನಲ್ಲಿ ಸಂಭವಿಸಿದೆ. ಪೊಲೀಸರು ಮಹಿಳೆ ಹಾಗೂ ಆಕೆಯ ಪತಿಯನ್ನು ಬಂಧಿಸಿದ್ದು, ಇಬ್ಬರನ್ನು ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ.
ಚಂದ್ರ ಲೇಔಟ್ ಪೊಲೀಸರು ನಿನ್ನೆ ಆರೋಪಿ ಐಶ್ವರ್ಯ ಗೌಡ ಆಕೆಯ ಪತಿ ಹರೀಶ್‌ನನ್ನು ಬಂಧಿಸಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಬಳಿಕ ಕೋರಮಂಗಲದ ಜಡ್ಜ್ ಮನೆಯಲ್ಲಿ ಹಾಜರುಪಡಿಸಿದ್ದರು.
ಐಶ್ವರ್ಯ ಗೌಡ ಕಳೆದ ಅಕ್ಟೋಬರ್‌ನಿಂದ ಇಲ್ಲಿಯವರೆಗೂ ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಶಾಪ್ ಎಂಬ ಚಿನ್ನಾಭರಣ ಅಂಗಡಿಯಲ್ಲಿ 14.600 ಚಿನ್ನಾಭರಣ ಖರೀದಿಸಿದ್ದಳು. ಹಣ ಕೊಡದೆ ಇದ್ದಾಗ ಡಿ.ಕೆ ಸುರೇಶ್ ಕಡೆಯಿಂದ ಮಾಲೀಕರಿಗೆ ಕರೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ಸಿನಿಮಾ ನಟ ಧರ್ಮೇಂದ್ರ ಎಂಬುವವರಿಂದ ಐಶ್ವರ್ಯ ಗೌಡ ಕರೆ ಮಾಡಿಸಿ, ಬೆದರಿಕೆ ಹಾಕಿಸಿದ್ದಾಳೆ.
ಡಿ.ಕೆ ಸುರೇಶ್ ಧ್ವನಿಯಲ್ಲಿ ಕರೆ ಮಾಡಿದ್ದ ಧರ್ಮೇಂದ್ರ ಮಾಲೀಕರಾದ ವನಿತಾ ಐತಾಳ್‌ಗೆ ಹಣ ಪಾವತಿಸಲು ಸಮಯಾವಕಾಶ ಕೇಳಿದ್ದ. ಕೊನೆಗೆ ಐಶ್ವರ್ಯಾ ಗೌಡ ತಾನೇ ಧರ್ಮೇಂದ್ರನನ್ನು ಕಳುಹಿಸಿ ಕೊಲೆ ಮಾಡಿಸುವುದಾಗಿಯೂ ಬೆದರಿಕೆ ಹಾಕಿದ್ದಳು. ಈ ಕುರಿತು ವನಿತಾ ಐತಾಳ್ ಆರ್.ಆರ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಟ ಧಮೇಂದ್ರನಿಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ.
2023ರ ಅಕ್ಟೋಬರ್ 12ರಿಂದ ತೊಡಗಿ ಐಶ್ವರ್ಯಾ ಗೌಡ , ಡಿ.ಕೆ ಸುರೇಶ್ ಸಹೋದರಿ ಎಂದು ಹೇಳಿಕೊಂಡು ಸುಮಾರು 8.5 ಕೋ. ರೂ. ಮೌಲ್ಯದ 14.600 ಕೆಜಿ ಚಿನ್ನಾಭರಣಗಳನ್ನು ಒಂದೇ ಅಂಗಡಿಯಿಂದ ಖರೀದಿಸಿದ್ದಾಳೆ. ಇದೇ ರೀತಿ ಈಕೆ ಬೇರೆ ಅಂಗಡಿಯವರಿಗೂ ಮೋಸ ಮಾಡಿರುವ ಸಾಧ್ಯತೆ ಕುರಿತು ಪೊಲೀಸರು ತನಿಖೆ ಮಾಡುತ್ತಿದ್ದಾರೆ.
ನಮಗಿರುವುದು ಒಬ್ಬಳೇ ತಂಗಿ
ನನ್ನ ಹೆಸರು ದುರ್ಬಳಕೆ ಆಗಿದೆ. ನಮಗೆ ಇರೋದು ಒಬ್ಬಳೇ ತಂಗಿ. ನಮ್ಮ ಅಣ್ಣಾನೆ ಬೇಜಾರು ಮಾಡಿಕೊಂಡಿದ್ದಾನಂತೆ. ನನಗೆ ಗೊತ್ತಿಲ್ಲದೆ ಇವನಿಗೆ ಇನ್ನೊಬ್ಬಳು ತಂಗಿ ಯಾರು ಅಂತ ಎಂದು ಡಿ.ಕೆ ಸುರೇಶ್ ಹೇಳಿದ್ದಾರೆ.