ಒಂದು ಕೋಟಿ ರೂ. ವೆಚ್ಚದ ಯೋಜನೆ
ಬೆಂಗಳೂರು: ಮೈಸೂರಿನ ರಸ್ತೆಯೊಂದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಿಡುವ ಪ್ರಸ್ತಾವ ಚರ್ಚೆಗೀಡಾದ ಬೆನ್ನಿಗೆ ಈಗ ಸಿದ್ದರಾಮಯ್ಯನವರ ಪುತ್ಥಳಿ ನಿರ್ಮಿಸುವ ವಿಚಾರ ಮುನ್ನೆಲೆಗೆ ಬಂದಿದೆ. ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 50 ಅಡಿ ಎತ್ತರದ ಕಂಚಿನ ಪ್ರತಿಮೆ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ವರದಿಯೊಂದು ತಿಳಿಸಿದೆ.
ಈ ಬಗ್ಗೆ ಸರ್ವೋದಯ ಮುಖಂಡ ಪಂಚಾಕ್ಷರಯ್ಯ ನೀಲಕಂಠಯ್ಯ ಗುಣಾಚಾರಿ ಎಂಬುವರು ಮಾಹಿತಿ ನೀಡಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕೊಂಡಾಡಿದ್ದಾರೆ. ಸಮಕಾಲೀನ ಸಮಾಜ ಗಾಂಧಿ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವ ಅಗತ್ಯವಿದೆ. ಸಿದ್ದರಾಮಯ್ಯ ಮಹಾತ್ಮ ಗಾಂಧೀಜಿ ಕನಸಿನ ಭಾರತವನ್ನು ನನಸು ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ, ಸರ್ವೋದಯ ಸಮಾಜ ರಚನೆಯ ಹರಿಕಾರ ಎಂದು ಹೇಳಿದರು.
ಗಾಂಧೀಜಿ ತತ್ವಗಳನ್ನು ಅಳವಡಿಸಿಕೊಂಡು ಕೆಲಸ ಮಾಡುತ್ತಿರುವ ಸಿದ್ದರಾಮಯ್ಯ ಅವರ ಪ್ರತಿಮೆ ನಿಲ್ಲಿಸಲು ಇದು ಸಕಾಲವಾಗಿದೆ. ಅದಕ್ಕಾಗಿ 1 ಕೋಟಿ ವೆಚ್ಚದಲ್ಲಿ ಯೋಜನೆ ಹಮ್ಮಿಕೊಳ್ಳಲಾಗಿದೆ. ಪ್ರತಿಮೆ ಪ್ರತಿಷ್ಠಾಪಿಸುವ ಸ್ಥಳ ಇನ್ನೂ ಅಂತಿಮಗೊಂಡಿಲ್ಲ, ಶೀಘ್ರವೇ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದು ತಿಳಿಸಿದರು.