ಸ್ಮಾರಕ ನಿರ್ಮಿಸುವಂತೆ ಪ್ರಧಾನಿಗೆ ಕಾಂಗ್ರೆಸ್ ಆಗ್ರಹ
ಹೊಸದಿಲ್ಲಿ: ಗುರುವಾರ ರಾತ್ರಿ ತೀರಿಕೊಂಡಿರುವ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 11.45ಕ್ಕೆ ನಿಗಮ್ ಬೋಧ್ ಘಾಟ್‌ನಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ನಡೆಯಲಿದೆ.
ದೇಶದ ಗಣ್ಯಾತಿಗಣ್ಯರು ಡಾ.ಮನಮೋಹನ್ ಸಿಂಗ್ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಏಳು ದಿನ ಶೋಕಾಚರಣೆ ಜಾರಿಯಲ್ಲಿದೆ. ಕೇಂದ್ರ ಸಚಿವರು, ಸಂಸದರು, ಹಿರಿಯ ರಾಜಕಾರಣಿಗಳು ಅವರ ಪಾರ್ಥಿವ ಶರೀರದ ದರ್ಶನ ಪಡೆಯುತ್ತಿದ್ದಾರೆ. ಇಂದು ಅಂತ್ಯಕ್ರಿಯೆಗೂ ಮುನ್ನ ಸಾರ್ವಜನಿಕರು, ಪಕ್ಷದ ಕಾರ್ಯಕರ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಮನಮೋಹನ್ ಸಿಂಗ್ ಅಂತ್ಯಕ್ರಿಯೆ ನಡೆಸುವ ಬಗ್ಗೆ ಕೇಂದ್ರ ಗೃಹ ಇಲಾಖೆಯು ರಕ್ಷಣಾ ಇಲಾಖೆಗೆ ಪತ್ರ ಬರೆದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನ ಹಿನ್ನೆಲೆ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲು ಸಕಲ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಿದೆ.
ಸದ್ಯ ಮನಮೋಹನ್ ಸಿಂಗ್ ಅವರ ಪಾರ್ಥಿವ ಶರೀರವನ್ನು ಅವರ ನಿವಾಸದಲ್ಲಿ ಇಡಲಾಗಿದ್ದು, ಗಣ್ಯರು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಬೆಳಗ್ಗೆ ದಿಲ್ಲಿಯಲ್ಲಿರುವ ಎಐಸಿಸಿ ಕಚೇರಿಗೆ ಪಾರ್ಥಿವ ಶರೀರವನ್ನು ತರಲಾಗುವುದು. ನಂತರ ಸಾರ್ವಜನಿಕರು ಮತ್ತು ಕಾರ್ಯಕರ್ತರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಬಳಿಕ ಡಾ.ಮನಮೋಹನ್ ಸಿಂಗ್ ಅವರ ಅಂತಿಮ ಯಾತ್ರೆ ಆರಂಭವಾಗಲಿದೆ. 11.45ರ ವೇಳೆ ಸಿಖ್ ಧಾರ್ಮಿಕ ವಿಧಿವಿಧಾನಗಳ ಮೂಲಕ ಅಂತ್ಯಕ್ರಿಯೆ ನಡೆಯಲಿದ್ದು, ಸರ್ಕಾರಿ ಗೌರವ ಸಲ್ಲಿಕೆಯಾಗಲಿದೆ.
ಸ್ಮಾರಕ ನಿರ್ಮಾಣಕ್ಕೆ ಮನವಿ
ವಿಶ್ವಶ್ರೇಷ್ಠ ಆರ್ಥಿಕ ತಜ್ಞರಾಗಿದ್ದ ಮನಮೋಹನ್ ಸಿಂಗ್ ಸ್ಮಾರಕ ನಿರ್ಮಾಣಕ್ಕೆ ಜಾಗ ಕೋರಿ ರಾಷ್ಟ್ರೀಯ ಕಾಂಗ್ರೆಸ್ ಪ್ರಧಾನಮಂತ್ರಿಗೆ ಪತ್ರ ಬರೆದಿದೆ. ಅವರ ಅಂತ್ಯಕ್ರಿಯೆ ನಡೆಯುವ ಸ್ಥಳದಲ್ಲೇ ಸ್ಮಾರಕ ನಿರ್ಮಾಣ ಮಾಡುವ ಸಾಧ್ಯತೆಗಳ ಕುರಿತು ಪರಿಶೀಲಿಸುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸ್ಮಾರಕಕ್ಕೆ ಜಾಗ ಕೋರಿ ಪ್ರಧಾನಿ ಮೋದಿ ಅವರಿಗೆ ಬರೆದ ಪತ್ರವನ್ನು ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಅವರ ಅಂತಿಮ ವಿಶ್ರಾಂತಿ ಸ್ಥಳದಲ್ಲಿ ಸ್ಮಾರಕ ನಿರ್ಮಿಸುವ ಸಾಧ್ಯತೆಗಳ ಕುರಿತು ಪರಿಶೀಲನೆ ನಡೆಸಬೇಕು. ಏಕೆಂದರೆ ಅದು ಭಾರತದ ಮಹಾನ್ ಸುಪುತ್ರನ ಸ್ಮಾರಕಕ್ಕೆ ಪವಿತ್ರ ಸ್ಥಳವಾಗಿದೆ. ಅಲ್ಲದೇ ಇದು ರಾಜಕಾರಣಿಗಳು ಮತ್ತು ಮಾಜಿ ಪ್ರಧಾನಿಗಳ ಅಂತ್ಯಕ್ರಿಯೆಯ ಸ್ಥಳದಲ್ಲಿ ಅವರ ಸ್ಮಾರಕ ಹೊಂದಿರುವ ಸಂಪ್ರದಾಯಕ್ಕೆ ಅನುಗುಣವಾಗಿದೆ ಎಂದು ಖರ್ಗೆ ಮನವಿ ಮಾಡಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.