ಪುತ್ತೂರು : ಸ್ವ ಉದ್ಯೋಗದಿಂದ ಮಹಿಳೆಯರ ಆರ್ಥಿಕ ಅಭಿವೃದ್ಧಿಯ ಜೊತೆಗೆ ಸಬಲೀಕರಣಗೊಳ್ಳಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಜ್ಞಾನ ವಿಕಾಸ ಯೋಜನೆಯಲ್ಲಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಹೊಲಿಗೆ ತರಬೇತಿ ಪಡೆದುಕೊಂಡವರು ಕಲಿಕೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪುತ್ತೂರು ತಾಲೂಕು ಯೋಜನಾಧಿಕಾರಿ ಆನಂದ ಕೆ ಹೇಳಿದರು.
ಅವರು ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ದೇವಸ್ಯ ಶ್ರೀ ಮಂಜುನಾಥ ಸಭಾಭವನದಲ್ಲಿ ನಡೆದ ಹೊಲಿಗೆ ತರಬೇತಿ ಕೇಂದ್ರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಹೊಲಿಗೆ ಯಂತ್ರ ಸೇರಿದಂತೆ ಉದ್ಯೋಗ ನಿರ್ವಹಿಸಲು ಸಾಕಷ್ಟು ಅವಕಾಶಗಳಿವೆ. ಕಲಿತ ಕಸುಬನ್ನು ಅರ್ಧದಲ್ಲಿಯೇ ನಿಲ್ಲಿಸದೆ ಮುಂದುವರಿಸಬೇಕು. ಈ ಮೂಲಕ ಆರ್ಥಿಕ ಬಲವರ್ಧನೆ ಪಡೆಯಬೇಕು ಎಂದರು.
ಮುಖ್ಯ ಅತಿಥಿಯಾಗಿ ಪತ್ರಕರ್ತ, ತರಬೇತುದಾರ ಸಂಶುದ್ದೀನ್ ಸಂಪ್ಯ ಮಾತನಾಡಿ, ಹೊಲಿಗೆ ತರಬೇತಿಯನ್ನು ಪಡೆದುಕೊಳ್ಳುವುದು ಮಹಿಳೆಯರ ಸಾಮರ್ಥ್ಯಾಭಿವೃದ್ಧಿಗೆ ಪೂರವಾಗಿದೆ. ಪ್ರಸ್ತುತ ರೆಡಿಮೇಡ್ ಉಡುಪುಗಳಿಗೆ ಉತ್ತಮ ಬೇಡಿಕೆಗಳಿದೆ. ಗುಂಪು ಚಟುವಟಿಕೆಗಳಲ್ಲಿ ಉತ್ಪನ್ನಗಳನ್ನು ತಯಾರಿಸಿ ಅದಕ್ಕೆ ಮಾರುಕಟ್ಟೆಯ ವ್ಯವಸ್ಥೆಯನ್ನು ಮಾಡುವುದರಿಂದ ಉತ್ತಮ ಬದುಕು ರೂಪಿಸಿಕೊಳ್ಳಲ್ಲು ಸಾಧ್ಯ ಎಂದರು.
ಕುಂಜೂರುಪಂಜ ಒಕ್ಕೂಟದ ಉಪಾಧ್ಯಕ್ಷೆ ಉಮಾವತಿ ಅಧ್ಯಕ್ಷತೆ ವಹಿಸಿದ್ಸರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಅಶ್ವಿನಿ, ಯೋಜನೆಯ ಮೇಲ್ವಿಚಾರಕ ಹರೀಶ್ ಕುಲಾಲ್, ಹೊಲಿಗೆ ತರಬೇತಿ ಶಿಕ್ಷಕಿ ದಿವ್ಯಾ ಉಪಸ್ಥಿತರಿದ್ದರು. ಹೊಲಿಗೆ ತರಗತಿ ವಿದ್ಯಾರ್ಥಿಗಳಾದ ಶಾಹಿದ, ಪಿಷ್ಪಾವತಿ, ಸಂಧ್ಯಾ ಮತ್ತು ಶಾಂತಿ ಅನಿಸಿಕೆ ವ್ಯಕ್ತ ಪಡಿಸಿದರು. ಭವ್ಯಶ್ರೀ ಸ್ವಾಗತಿಸಿದರು. ಯೋಜನೆಯ ಸೇವಾ ಪ್ರತಿನಿಧಿ ಆಶಾಲತಾ ಕಾರ್ಯಕ್ರಮ ನಿರೂಪಿಸಿದರು. ಸ್ವಾತಿ ವಂದಿಸಿದರು.