ಲೀಟರಿಗೆ 5 ರೂ. ಏರಿಕೆಗೆ ಪ್ರಸ್ತಾಪ
ಬೆಂಗಳೂರು: ಸಂಕ್ರಾಂತಿ ಹಬ್ಬದ ಬಳಿಕ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ನಂದಿನಿ ಹಾಲಿನ ದರ ಪರಿಷ್ಕರಣೆಯಾಗುವ ಸಾಧ್ಯತೆ ಇದೆ. ಪ್ರತಿ ಲೀಟರ್ ಹಾಲಿನ ದರದಲ್ಲಿ 5 ರೂ. ಏರಿಕೆ ಮಾಡುವಂತೆ ಬುಧವಾರ ನಡೆದ ಹಾಲು ಒಕ್ಕೂಟ ಸಭೆಯಲ್ಲಿ ಪ್ರಸ್ತಾಪವಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ತಿಳಿಸಿದ್ದಾರೆ. ಬೆಲೆ ಏರಿಕೆ ಬಗ್ಗೆ ಪ್ರಸ್ತಾವನೆ ಬಂದಿದೆ. ಈ ಬಗ್ಗೆ ಪರಿಶೀಲಿಸುತ್ತೇವೆ. ದರ ಏರಿಕೆ ದುಡ್ಡು ರೈತರ ಕೈ ಸೇರುತ್ತದೆ ಎಂದಿದ್ದಾರೆ.
ಈ ಹಿಂದೆ ಪ್ರತಿ ಲೀಟರ್ ಪ್ಯಾಕೇಟ್ನಲ್ಲಿ 50 ಎಂಎಲ್ ಹಾಲು ಹೆಚ್ಚಳ ಮಾಡಿ 2 ರೂಪಾಯಿ ದರ ಏರಿಕೆ ಮಾಡಲಾಗಿತ್ತು. ಇದರಿಂದ ಗ್ರಾಹಕರ ಕೆಂಗಣ್ಣಿಗೆ ಗುರಿಯಾದ ಸರ್ಕಾರ, ಇದನ್ನು ವಾಪಸ್ ಪಡೆಯಲು ಮುಂದಾಗಿದೆ.
ಪ್ರತಿ ಲೀಟರ್ಗೆ 5 ರೂ. ಹೆಚ್ಚಳ ಮಾಡಲು ಮುಂದಾಗಿರುವುದಕ್ಕೆ ಜನರು ಆಕ್ರೋಶ ಹೊರಹಾಕಿದ್ದು, ದಿಢೀರ್ ಬೆಲೆ ಏರಿಕೆ ಮಾಡುವುದು ಸರಿಯಲ್ಲ. ಹಾಲಿನ ದರ ಹೆಚ್ಚಳಕ್ಕೆ ಯಾವುದೆ ಮಾನದಂಡ ಇಲ್ಲ. ಈ ಬಗ್ಗೆ ತಜ್ಞರ ಸಲಹೆ ಪಡೆದು ಬಳಿಕ ಹಾಲಿನ ದರ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಕೆಎಂಎಫ್ ಈ ಹಿಂದೆ ಪ್ರತಿ ಲೀಟರ್ನಲ್ಲಿ ಹೆಚ್ಚುವರಿಯಾಗಿ 50 ಎಂಎಲ್ ನೀಡಿ 2 ರೂಪಾಯಿ ಏರಿಕೆ ಮಾಡಿತ್ತು. ಇದರಿಂದ ಅರ್ಧ ಲೀಟರ್ ಹಾಲಿನ ಪ್ಯಾಕೆಟ್ ದರ 22ರಿಂದ 24 ರೂ.ಗೆ ಏರಿಕೆಯಾಗಿತ್ತು. ಒಂದು ಲೀಟರ್ ಹಾಲಿನ ದರ ಏರಿಕೆ 42 ರಿಂದ 44 ರೂ.ಗೆ ಏರಿಕೆಯಾಗಿತ್ತು. ಮೊಸರು, ಇನ್ನಿತರ ಯಾವುದೇ ಹಾಲಿನ ಉತ್ಪನ್ನದ ದರ ಏರಿಕೆ ಮಾಡಿರಲಿಲ್ಲ.