ಜಗತ್ತು ಕಂಡ ಶ್ರೇಷ್ಠ ಆರ್ಥಿಕ ತಜ್ಞ ಡಾ. ಮನಮೋಹನ್ ಸಿಂಗ್‌

ವಿದೇಶದಲ್ಲಿ ಓದಿದರೂ ಅವರದ್ದು ಅಪ್ಪಟ ದೇಶಿ ಚಿಂತನೆಯಾಗಿತ್ತು

ದೇಶ ಕಂಡ ಅಪ್ರತಿಮ ಆರ್ಥಿಕ ತಜ್ಞ, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನಿರ್ಗಮಿಸಿದ ಸುದ್ದಿ ನಿಜಕ್ಕೂ ಆಘಾತಕಾರಿ. ಅವರಿಗೆ 92 ವರ್ಷಗಳ ಪ್ರಾಯ ಆಗಿತ್ತು. 2024ರವರೆಗೆ ರಾಜ್ಯಸಭಾ ಸದಸ್ಯರಾಗಿದ್ದ ಅವರು ವೀಲ್‌ಚೇರ್ ಮೇಲೆ ಕುಳಿತು ನಿನ್ನೆ ಮೊನ್ನೆ ಸದನಕ್ಕೆ ಬರುತ್ತಿದ್ದ ದೃಶ್ಯಗಳು ನನಗೆ ಇನ್ನೂ ಕಣ್ಣಿಗೆ ಕಟ್ಟಿದಂತೆ ಇವೆ. ಸತತವಾಗಿ 10 ವರ್ಷ ಪ್ರಧಾನಮಂತ್ರಿಯಾಗಿ ಅವರು ದೇಶಕ್ಕೆ ಸಲ್ಲಿಸಿದ ಕೊಡುಗೆಗಳು ನಿಜಕ್ಕೂ ಅದ್ಭುತ.

ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣ































 
 

1991ರ ಪಿ.ವಿ ನರಸಿಂಹರಾವ್ ಸಂಪುಟದಲ್ಲಿ ಹಣಕಾಸು ಸಚಿವರಾಗಿ ಅವರು ಆರಂಭಿಸಿದ ಆರ್ಥಿಕ ಸುಧಾರಣೆಗಳು ಮುಂದೆ ಅತ್ಯುತ್ತಮವಾದ ಫಲಿತಾಂಶಗಳನ್ನು ನೀಡಿದವು. ಅದುವರೆಗೆ ಯಾವ ನೇರವಾದ ಚುನಾವಣೆಯನ್ನು ಕೂಡ ಗೆಲ್ಲದೆ ಇದ್ದ ಸಿಂಗ್‌ ಅವರನ್ನು ಹಣಕಾಸು ಮಂತ್ರಿಯಾಗಿ ನೇಮಕ ಮಾಡಿದಾಗ ಬಹಿರಂಗವಾಗಿಯೇ ಪಿವಿಎನ್ ಅವರನ್ನು ಟೀಕೆ ಮಾಡಿದವರು ಹೆಚ್ಚು. ಆದರೆ ಆ ಐದು ವರ್ಷಗಳು ಭಾರತದಲ್ಲಿ ಆರ್ಥಿಕ ಸುಧಾರಣೆಯ ಮಹಾಪರ್ವವಾಗಿ ರೂಪುಗೊಂಡವು. ಮುಂದೆ 2004-2014ರ ದೀರ್ಘ ಅವಧಿಯಲ್ಲಿ ಪ್ರಧಾನಿಯಾಗಿ ಅವರು ದೇಶಕ್ಕೆ ನೀಡಿದ ದೂರದೃಷ್ಟಿ, ಸಬಲೀಕರಣ, ಸದಾಶಯ ಮತ್ತು ಭರವಸೆಗಳನ್ನು ನಾವ್ಯಾರೂ ಮರೆಯಲು ಸಾಧ್ಯವೇ ಇಲ್ಲ. ಜಗತ್ತು ಕಂಡ ಶ್ರೇಷ್ಠವಾದ ಆರ್ಥಿಕ ತಜ್ಞ ಅವರು.

ವಿದೇಶದಲ್ಲಿ ಓದಿದ್ದರೂ ಅಪ್ಪಟ ಭಾರತೀಯ ಚಿಂತನೆ

ಹಾರ್ವರ್ಡ್ ಮತ್ತು ಕೇಂಬ್ರಿಜ್ ವಿವಿಯಲ್ಲಿ ಅವರು ಅರ್ಥಶಾಸ್ತ್ರವನ್ನು ವಿಸ್ತಾರವಾಗಿ ಓದಿಕೊಂಡು ಬಂದಿದ್ದರೂ ಅವರ ಹೃದಯ ಕೊನೆಯವರೆಗೂ ಭಾರತೀಯ ಆಗಿತ್ತು. ಅವರ ವಿದೇಶಾಂಗ ನೀತಿ, ಆರ್ಥಿಕ ನೀತಿ, ಸಾಮಾಜಿಕ ಬದ್ಧತೆ, ಕೃಷಿಯ ಮೇಲಿನ ಪ್ರೀತಿ, ರೈತರ ಮೇಲಿನ ಕಾಳಜಿ ಎಲ್ಲವೂ ಭಾರತೀಯ ಮಣ್ಣಿನ ಸತ್ವದಿಂದ ಕೂಡಿತ್ತು. ಅವರು ಹಲವು ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಕೂಡ ಕೆಲಸ ಮಾಡಿದ್ದರು.

ಮಾತು ಮೃದು, ನಿರ್ಧಾರ ಕಠಿಣ

ಅವರ ವಿರೋಧಿಗಳು ಅವರನ್ನು ಮಹಾಮೌನಿ ಎಂದು ಕರೆದರು. ಆದರೆ ಅವರ ಆರ್ಥಿಕ ನೀತಿಗಳನ್ನು ಯಾರಿಗೂ ಪ್ರಶ್ನೆ ಮಾಡುವ ಧೈರ್ಯ ಬರಲಿಲ್ಲ. ಅವರ ಉದಾರೀಕರಣ ನೀತಿಯಿಂದ ನೂರಾರು ವಿದೇಶಿ ಕಂಪನಿಗಳು ಭಾರತಕ್ಕೆ ಬಂದವು. ಅದರಿಂದ ದೇಶವು ಮುಳುಗಿಯೇ ಬಿಟ್ಟಿತು ಅಂದವರು ಬಹಳ ಜನ. ಆದರೆ ಹಾಗಾಗಲೇ ಇಲ್ಲ. ಅದಕ್ಕೆ ಬದಲಾಗಿ ಭಾರತವು ಐಟಿ ರಾಜಧಾನಿ ಆಯಿತು. ಭಾರತದ ಯುವಕರು ಲಕ್ಷ ಲಕ್ಷ ಸಂಬಳದ ಕೆಲಸ ಪಡೆಯಲು ಸಾಧ್ಯ ಆದದ್ದು ಉದಾರೀಕರಣ ನೀತಿಯಿಂದ. ಅದರ ರೂವಾರಿ ಖಂಡಿತಾ ಡಾಕ್ಟರ್ ಮನಮೋಹನ್ ಸಿಂಗ್.

ಪಾತಾಳಕ್ಕೆ ಕುಸಿದು ಹೋಗಿದ್ದ ಜಿಡಿಪಿಯನ್ನು ಎತ್ತಿ ನಿಲ್ಲಿಸಿದರು

ಅವರು ಹಣಕಾಸು ಮಂತ್ರಿಯಾಗಿದ್ದಾಗ ಲೈಸೆನ್ಸ್ ರಾಜ್ ರದ್ದು ಮಾಡಿ ಮಹದುಪಕಾರ ಮಾಡಿದ್ದರು. ಇದರಿಂದ ಭ್ರಷ್ಟಾಚಾರ ನಿಗ್ರಹಕ್ಕೆ ಸಹಕಾರ ದೊರೆಯುತ್ತದೆ ಎಂದು ಅವರು ಪ್ರಧಾನಿ ನರಸಿಂಹರಾವ್ ಅವರಿಗೆ ಮನವರಿಕೆ ಮಾಡಿದ್ದರು. ಆಗ ಪಾತಾಳಕ್ಕೆ ಕುಸಿದು ಹೋಗಿದ್ದ ದೇಶದ ಜಿಡಿಪಿಯನ್ನು ಎತ್ತಿ ನಿಲ್ಲಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಭಾರತದ ಎಲ್ಲ ಆರ್ಥಿಕ ಸಮಸ್ಯೆಗೆ ಅವರ ಹತ್ತಿರ ಪರಿಹಾರವಿತ್ತು. ವಿದೇಶಿ ಸಾಲಕ್ಕೆ ಹೋಗದೆ ಭಾರತದ ಸಂಪನ್ಮೂಲ ಕ್ರೋಡೀಕರಣದಿಂದಲೆ ದೇಶವನ್ನು ಕಟ್ಟಲು ಸಾಧ್ಯ ಎಂದವರು ನಂಬಿದ್ದರು. ‘ನಾನು ಅವರ ಆರ್ಥಿಕ ಚಿಂತನೆಗೆ ಬೆರಗಾಗಿದ್ದೆ’ ಎಂದು ಪ್ರಧಾನಿ ನರಸಿಂಹ ರಾವ್ ಹೇಳಿದ್ದಾರೆ. ಅವರೊಬ್ಬ ಆರ್ಥಿಕ ಮುತ್ಸದ್ದಿ ಎಂದು ದೇಶ ಕರೆದಿತ್ತು.

ಅವರು ಎರಡು ಅವಧಿಗೆ ಪ್ರಧಾನಿಯಾಗಿ ನಂಬಿದ್ದು ಮತ್ತು ಅನುಷ್ಠಾನ ಮಾಡಿದ್ದು ಅದೇ ಚಿಂತನೆಗಳನ್ನು. ಹಿಂದಿನ ವಾಜಪೇಯಿ ಸರಕಾರ ಜಾರಿಗೆ ತಂದಿದ್ದ ಹಲವು ಪ್ರಮುಖ ಯೋಜನೆಗಳನ್ನು ಅವರು ಚಂದವಾಗಿ ಮುಂದುವರಿಸಿಕೊಂಡು ಹೋದರು. ಅವರು ಪ್ರಧಾನಿ ಆಗಿದ್ದಾಗ ಅವರ ಸಂಪುಟದ ಹಲವು ಸದಸ್ಯರ ಮೇಲೆ ಭ್ರಷ್ಟಾಚಾರ ಆರೋಪಗಳು ಕೇಳಿ ಬಂದವು. ಆದರೆ ಪ್ರಧಾನಿ ಸಿಂಗ್‌ ಮೇಲೆ ಒಂದೇ ಒಂದು ಕಪ್ಪುಚುಕ್ಕೆ ಇರಲಿಲ್ಲ ಅನ್ನುವುದು ಅವರ ಶ್ರೇಷ್ಠತೆ. ಅವರು ಅಧಿಕಾರಕ್ಕಾಗಿ ಕೊನೆಯವರೆಗೂ ಆಸೆ ಪಡಲಿಲ್ಲ.

ರೈತರಿಗೆ ವಿದರ್ಭ ಪ್ಯಾಕೇಜ್‌, ಸಾಲ ಮನ್ನಾ, ಮನ್ರೆಗಾ

ಇಂದು ಭಾರತವು ಜಾಗತೀಕರಣಕ್ಕೆ ತೆರೆದುಕೊಂಡ ರೀತಿಗೆ ಅವರು ತೆಗೆದುಕೊಂಡ ಕಠಿಣ ನಿರ್ಧಾರ ಕಾರಣ. ಅವರ ಆರ್ಥಿಕ ನೀತಿಗಳ ಕಾರಣದಿಂದ ಭಾರತದ ಹಲವು ಕೋಟಿ ಬಡವರು ಬಡತನದ ರೇಖೆಯಿಂದ ಮಧ್ಯಮ ವರ್ಗಕ್ಕೆ ಬಂದು ತಲುಪಿದರು ಎನ್ನುತ್ತವೆ ದಾಖಲೆಗಳು. ರೈತರ ಸರಣಿ ಆತ್ಮಹತ್ಯೆ ಪ್ರಕರಣಗಳನ್ನು ಗಮನಿಸಿ ಅವರು ಬಜೆಟ್ ಮೂಲಕ ನೀಡಿದ ವಿದರ್ಭ ಪ್ಯಾಕೇಜ್, ಗ್ರಾಮೀಣ ಭಾಗದ ರೈತರ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಿದ ಮನ್ರೆಗಾ ಯೋಜನೆ, ರೈತರ ಸಾಲ ಮನ್ನಾ ಯೋಜನೆಗಳು ಆ ಕಾಲಕ್ಕೆ ಭಾರಿ ದೊಡ್ಡ ಕ್ರಾಂತಿಯನ್ನೇ ಮಾಡಿದವು.

ಆರ್ಥಿಕ ವೇಗವನ್ನು ತಂದ ಕ್ರಾಂತಿಕಾರಿ ಯೋಜನೆಗಳು

ಭಾರತದಲ್ಲಿ ಇಂದು ಭಾರಿ ವೇಗದ ಬದಲಾವಣೆಯನ್ನು ತರುತ್ತಿರುವ ರಾಷ್ಟ್ರೀಯ ಆಹಾರ ಸಂರಕ್ಷಣೆಯ ಕಾಯ್ದೆ, ಕ್ರಾಂತಿಕಾರಕವಾದ ಮಾಹಿತಿ ಹಕ್ಕು ಕಾನೂನು ಮತ್ತು ಶಿಕ್ಷಣ ಹಕ್ಕು ಕಾಯ್ದೆಗಳನ್ನು ಜಾರಿ ಮಾಡಿದ ಕೀರ್ತಿ ಅವರದ್ದು. ವಿಶೇಷವಾಗಿ ಮಾಹಿತಿ ಹಕ್ಕು ಕಾಯ್ದೆ ಭ್ರಷ್ಟಾಚಾರಕ್ಕೆ ತಕ್ಕಮಟ್ಟಿನ ಕಡಿವಾಣ ಹಾಕಿತು. ಹಾಗೆಯೇ ದೇಶದ ಚಿತ್ರಣವನ್ನು ಕೂಡ ತೀವ್ರ ಬದಲಾವಣೆ ಮಾಡಿತು. ಇಂದು ಹಲವು ಭ್ರಷ್ಟ ಸರಕಾರಗಳು, ರಾಜಕಾರಣಿಗಳು ಜೈಲು ಸೇರಲು ಕಾರಣವಾದದ್ದು ಅದೇ RTI ಕಾಯಿದೆ. ಕೊಳಚೆಗೇರಿಯ ಬಡ ಮಕ್ಕಳು ಶ್ರೀಮಂತ ಶಾಲೆಗಳಲ್ಲಿ ಓದಲು ಅವಕಾಶ ನೀಡಿದ RTE ಆಕ್ಟ್, ಓಹ್ ಅದೊಂದು ಬ್ಯೂಟಿ. ಮನಮೋಹನ್ ಸಿಂಗ್‌ ಅವರನ್ನು ರಾಜಕೀಯ ಮುತ್ಸದ್ದಿ ಎಂದು ಕರೆಯಲು ಯಾವ ಸಂಕೋಚವೂ ಬೇಡ.

ಆ ಕಾಲಕ್ಕೆ ತೀವ್ರ ವಿರೋಧ ಎದುರಿಸಿದ್ದರು

ಅವರ ವಿತ್ತೀಯ ಉದಾರೀಕರಣ, ಜಾಗತೀಕರಣ ಮತ್ತು ಖಾಸಗೀಕರಣ ನೀತಿಗಳು ಆ ಕಾಲಕ್ಕೆ ತೀವ್ರ ಪ್ರತಿರೋಧ ಪಡೆದರೂ ಈಗ ದೇಶವು ಅವುಗಳ ಬಂಗಾರದ ಫಲವನ್ನು ಅನುಭವಿಸುತ್ತಿದೆ. ವಿಶೇಷವಾಗಿ ಬೆಂಗಳೂರು ನಗರ ಇಂದು ಐಟಿ-ಬಿಟಿ ಹಬ್ ಆಗಿ ಬೆಳೆಯಲು ಅವರ ಉದಾರೀಕರಣ ನೀತಿಯು ಕಾರಣ ಎಂಬುದು ನಿರ್ವಿವಾದ.
ಅವರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ.

ರಾಜೇಂದ್ರ ಭಟ್‌ ಕೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top