5, 8ನೇ ತರಗತಿಯಲ್ಲಿ ವಿದ್ಯಾರ್ಥಿಗಳನ್ನು ಫೇಲ್‌ ಮಾಡಬಹುದು

ನೋ ಡಿಟೆನ್ಶನ್‌ ನಿಯಮ ರದ್ದು ಮಾಡಿದ ಕೇಂದ್ರ

ಹೊಸದಿಲ್ಲಿ : 5 ಮತ್ತು 8ನೇ ತರಗತಿಗೆ ಇದ್ದ ನೋ ಡಿಟೆನ್ಶನ್‌ ನಿಯಮವನ್ನು ರದ್ದುಗೊಳಿಸುವ ಮೂಲಕ ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿ ಕೇಂದ್ರ ಸರಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇಷ್ಟರ ತನಕ ನೋ ಡಿಟೆನ್ಶನ್‌ ನಿಯಮದ ಪ್ರಕಾರ ವಿದ್ಯಾರ್ಥಿ ಕಲಿಯುವುದರಲ್ಲಿ ಎಷ್ಟೇ ಹಿಂದೆ ಇದ್ದರೂ ಅವನನ್ನು ಅನುತ್ತೀರ್ಣಗೊಳಿಸುವಂತಿರಲಿಲ್ಲ. ಈ ನಿಯಮವನ್ನು ರದ್ದು ಮಾಡಿರುವ ಕೇಂದ್ರ 5 ಮತ್ತು 8ರಲ್ಲಿ ವಿದ್ಯಾರ್ಥಿಗಳನ್ನು ಫೇಲ್‌ ಮಾಡಲು ಅವಕಾಶ ಕೊಟ್ಟಿದೆ.

ಉಚಿತ ಮತ್ತು ಕಡ್ಡಾಯ ಶಿಕ್ಷಣದ ಮಕ್ಕಳ ಹಕ್ಕು (ಆರ್‌ಟಿಇ) ಕಾಯ್ದೆ ನಿಯಮಗಳು – 2010ಕ್ಕೆ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದೆ. ಹೊಸ ನಿಯಮಗಳ ಪ್ರಕಾರ 5 ಮತ್ತು 8 ನೇ ತರಗತಿ ವಿದ್ಯಾರ್ಥಿಗಳಿಗೆ ನಿಯಮಿತವಾಗಿ ಪರೀಕ್ಷೆಗಳನ್ನು ನಡೆಸುವ ಅಧಿಕಾರವನ್ನು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ನೀಡಿದೆ. ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯಲ್ಲಿ ಫೇಲ್‌ ಆದರೆ ಅವರು ಅದೇ ತರಗತಿಯಲ್ಲಿ ಮುಂದುವರಿಯಬೇಕಾಗುತ್ತದೆ.































 
 

ವಿದ್ಯಾರ್ಥಿ 5 ಮತ್ತು 8 ನೇ ತರಗತಿಯಲ್ಲಿ ಫೇಲ್‌ ಆದರೆ ಫಲಿತಾಂಶ ಪ್ರಕಟವಾದ 2 ತಿಂಗಳ ಒಳಗಡೆ ಮತ್ತೊಮ್ಮೆ ಪರೀಕ್ಷೆ ಬರೆಯಬೇಕಾಗುತ್ತದೆ. ಈ ಪರೀಕ್ಷೆಯಲ್ಲೂ ಫೇಲ್‌ ಆದರೆ ಆ ವಿದ್ಯಾರ್ಥಿ ಅದೇ ತರಗತಿಯಲ್ಲೇ ಓದಬೇಕಾಗುತ್ತದೆ. ಆದರೆ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸುವವರೆಗೆ ವಿದ್ಯಾರ್ಥಿಯನ್ನು ಶಾಲೆಗಳು ತೆಗೆದುಹಾಕುವಂತಿಲ್ಲ ಎಂದು ಶಿಕ್ಷಣ ಸಚಿವಾಲಯ ಪ್ರಕಟಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ.

ಕೇಂದ್ರೀಯ ವಿದ್ಯಾಲಯ, ನವೋದಯ ವಿದ್ಯಾಲಯ, ಮತ್ತು ಸೈನಿಕ ಶಾಲೆಗಳು ಸೇರಿದಂತೆ ಕೇಂದ್ರ ಸರ್ಕಾರ ನಡೆಸುತ್ತಿರುವ 3,000ಕ್ಕೂ ಹೆಚ್ಚು ಶಾಲೆಗಳಿಗೆ ಅಧಿಸೂಚನೆ ಅನ್ವಯವಾಗುತ್ತದೆ. ಶಾಲಾ ಶಿಕ್ಷಣ ರಾಜ್ಯಕ್ಕೆ ಸಂಬಂಧಿಸಿದ ವಿಷಯವಾಗಿರುವ ಕಾರಣ ರಾಜ್ಯಗಳು ಈ ವಿಷಯದಲ್ಲಿ ತಮ್ಮ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಈಗಾಗಲೇ ದಿಲ್ಲಿ ಸೇರಿದಂತೆ 16 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳು ಈ ನಿಯಮವನ್ನು ಜಾರಿ ಮಾಡಿವೆ. ಹರ್ಯಾಣ ಮತ್ತು ಪುದುಚೇರಿ ಇನ್ನೂ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಆದರೆ ಉಳಿದ ರಾಜ್ಯಗಳು ಮತ್ತು ಕೆಂದ್ರಾಡಳಿತ ಪ್ರದೇಶಗಳ ಈ ನೀತಿಯನ್ನು ಮುಂದುವರಿಸಲು ನಿರ್ಧರಿಸಿವೆ ಎಂದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top